ಹುಕ್ಕೇರಿ: ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಸಂಘದ ಮತದಾರರ ಮತ್ತು ಮುಖಂಡರು ಅಪೇಕ್ಷಿಸಿದ ಅಭ್ಯರ್ಥಿಗಳು ಉಮೇದುವಾರರಾಗುತ್ತಾರೆಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಸೋಮವಾರದಂದು ಪಟ್ಟಣದ ಪಿಕಾರ್ಡ ಬ್ಯಾಂಕ್ ಆವರಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಕೆಲ ಗ್ರಾಮಸ್ಥರು ವಿದ್ಯುತ್ ಸಹಕಾರಿ ಸಂಘದ ಚುನಾವಣೆ ತಯಾರಿ ಕುರಿತು ಶಾಸಕರೊಂದಿಗೆ ಚರ್ಚಿಸಿದರು. ಆಗ ಮಾತನಾಡಿದ ಅವರು ವಿದ್ಯುತ್ ಸಹಕಾರಿ ಸಂಘದ ಆಡಳಿತ ಮಂಡಳಿಯ 15 ಸ್ಥಾನಗಳ ನಿರ್ದೇಶಕರ ಚುನಾವಣೆಯಲ್ಲಿ ಕತ್ತಿ ಕುಟುಂಬದ ಬೆಂಬಲಿಗರು, ಹಿತೈಷಿಗಳು ಮತ್ತು ಮುಖಂಡರ ಅಭಿಲಾಷೆಯಂತೆ ನಿಷ್ಠಾವಂತ ಮತ್ತು ರೈತರ ಕಾಳಜಿಯುಳ್ಳ ಸಹಕಾರಿ ತತ್ವದ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆಂದರು. ಈಗಾಗಲೇ ಚಿಕ್ಕಪ್ಪ ಮಾಜಿ ಸಂಸದ ರಮೇಶ ಕತ್ತಿ ಮತ್ತು ಮುಖಂಡರೊಂದಿಗೆ ಚರ್ಚಿಸಿದ್ದೇನೆ ಎಂದರು. ಈ ಕುರಿತು ಶೀಘ್ರದಲ್ಲಿ ಸಭೆ ಕರೆಯುವುದಾಗಿ ತಿಳಿಸಿದರು. ನಂತರ ಹುಕ್ಕೇರಿ ಮತಕ್ಷೇತ್ರದ ಜನರ ಕುಂದು ಕೊರತೆ ಆಲಿಸಿ ತಾಲೂಕಾಡಳಿತದ ಅಧಿಕಾರಿಗಳಿಗೆ ಜನರ ಸಮಸ್ಯೆ ಪರಿಹರಿಸಲು ಆದೇಶಿಸಿದರು.

ಇದಕ್ಕೂ ಮುನ್ನ ತಾಲೂಕಿನ ಎಲಿಮುನ್ನೋಳಿ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಲನಿಯಲ್ಲಿ 35 ಲಕ್ಷ ರೂ ವೆಚ್ಚದ ಸಿ.ಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಾ ಉತ್ತಮ ಆರೋಗ್ಯಕ್ಕೆ ಶುಚಿತ್ವವೇ ಮದ್ಧು, ಕಾರಣ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟಕೊಳ್ಳಬೇಕು. ಅದಕ್ಕಾಗಿ ಚರಂಡಿ ನಿರ್ಮಿಸಲಾಗುತ್ತಿದೆ ಗ್ರಾಮ ಪಂಚಾಯತಿಯವರು ಈ ನಿಟ್ಟಿನಲ್ಲಿ ಗ್ರಾಮಸ್ಥರಿಗೆ ಅರಿವು ಮೂಡಿಸಬೇಕು ಎಂದರು. ತಾಲೂಕಿನ ಅಮ್ಮಣಗಿ ಗ್ರಾಮದಲ್ಲಿ 20 ಲಕ್ಷ ರೂ ವೆಚ್ಚದ ಅಂಗನವಾಡಿ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಮುಖಂಡರಾದ ಸತ್ತೆಪ್ಪಾ ನಾಯಿಕ, ಮಹಾನಿಂಗ ಸನದಿ, ಗುರುರಾಜ ಕುಲಕರ್ಣಿ, ಕಲಗೌಡ ಪಾಟೀಲ, ಎ.ಕೆ.ಪಾಟೀಲ, ಸುನೀಲ ನೇರಲಿ, ಶೀತಲ ಬ್ಯಾಳಿ, ಪರಪ್ಪ ವಾಸೇದಾರ, ಕೆಂಪಣ್ಣಾ ದೇಸಾಯಿ, ಭೀಮಗೌಡ ಭೂಶಿ, ಆನಂದ ಲಕ್ಕುಂಡಿ, ರಾಜು ಮುನ್ನೋಳಿ, ಪ್ರಶಾಂತ ಪಾಟೀಲ, ಬಸಲಿಂಗ (ತಮ್ಮಣ್ಣಾ) ಕರಗುಪ್ಪಿ, ಅಶೋಕ ಅಂಕಲಗಿ, ಸವಿತಾ ಏಣಗಿಮಠ, ಶಾಂತಾ ಸೊಲ್ಲಾಪೂರೆ, ಎಲಿಮುನ್ನೋಳಿ ಮತ್ತು ಅಮ್ಮಣಗಿ ಗ್ರಾಮದ ಮುಖಂಡರಿದ್ದರು.





