ಗರಡಿ ಮನೆಗಳು ಮಾಯವಾಗುತ್ತಿರುವುದು ಶೋಚನೀಯ: ಆರೋಗ್ಯವಂತ ಯುವಸಮೂಹಕ್ಕಾಗಿ ಕುಸ್ತಿಗೆ ಒತ್ತು ನೀಡಿ – ರಮೇಶ ಕತ್ತಿ

ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ನಡೆದ ಕುಸ್ತಿ ಪಂದ್ಯಾವಳಿ ವಿಜೇತ ಪ್ರಕಾಶ ಇಂಗಳಗಿಗೆ ರಮೇಶ ಕತ್ತಿ ಬೆಳ್ಳಿಗದೆ ನೀಡಿ ಗೌರವಿಸಿದರು. ಪ್ರಜ್ವಲ ಲಕ್ಕುಂಡಿ, ಕಾಡಪ್ಪಾ ಮಗದುಮ್ಮ, ದಯಾನಂದ ವಂಟಮೂರಿ ಇತರರಿದ್ದರು.

ಹುಕ್ಕೇರಿ : ಯುವ ಸಮೂಹ ಆರೋಗ್ಯದ ಜತೆಗೆ ದೃಢಕಾಯರಾಗಿ ಬದುಕಬೇಕೆಂದು ಗ್ರಾಮಗಳಲ್ಲಿ ಗರಡಿ (ಕುಸ್ತಿ) ಮನೆಗಳನ್ನು ಸ್ಥಾಪಿಸಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವು ಇಲ್ಲವಾಗುತ್ತಿರುವುದು ಶೋಚನೀಯ ಸಂಗತಿ ಎಂದು ಡಿಸಿಸಿ ಬ್ಯಾಂಕ ನಿರ್ದೇಶಕ ರಮೇಶ ಕತ್ತಿ ಹೇಳಿದರು.

ಶನಿವಾರದಂದು ತಾಲೂಕಿನ ಬಸ್ತವಾಡ ಗ್ರಾಮದ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ಹಮ್ಮಿಕೊಂಡ ಕುಸ್ತಿ ಪಂದ್ಯಾವಳಿ ವಿಜೇತ ಪ್ರಕಾಶ ಇಂಗಳಗಿ ಪ್ರಜ್ವಲ ಲಕ್ಕುಂಡಿ ಕೊಡ ಮಾಡಿದ ಬೆಳ್ಳಿ ಗದೆ ಮತ್ತು 20 ಸಾವಿರ ನಗದು ಬಹುಮಾನ ವಿತರಿಸಿ ಮಾತನಾಡಿದರು. ಸಂಜೀವ ಇಂಗಳಿಗಿ ದ್ವಿತೀಯ ಹಾಗೂ ದಯಾನಂದ ಇಂಗಳಗಿ ಸ್ಥಾನ ಪಡೆದರು.

4 ದಶಕಗಳ ಹಿಂದೆ ಪ್ರತಿಯೊಂದು ಗ್ರಾಮದಲ್ಲಿ 20 ರಿಂದ 30 ಜನ ಕುಸ್ತಿ ಪಟುಗಳು ಇರುತ್ತಿದ್ದರು. ಅವರಿಗಾಗಿ ಮನೆಯಲ್ಲಿ ಎಮ್ಮೆ ಸಾಕಿ ವರ್ಷವಿಡಿ ಹಾಲು ಹೈನು ತಿನ್ನಿಸಿ ಅವರನ್ನು ಬೆಳೆಸುತ್ತಿದ್ದರು. ಗ್ರಾಮ ಅಥವಾ ನೆರೆಯ ಗ್ರಾಮಗಳ ಜಾತ್ರಾ ಮಹೋತ್ಸವದಲ್ಲಿ ಆಯೋಜಿಸುತ್ತಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ಇವರು ಪಾಲ್ಗೊಂಡು ಶಕ್ತ್ತಿ ಪ್ರದರ್ಶನ ಮಾಡುತ್ತಿದ್ದರು. ವಿಜೇತರನ್ನು ಗ್ರಾಮಸ್ಥರು ಗೌರವಿಸಿ ಸತ್ಕರಿಸುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಅವು ನೆನಪಾಗಿ ಉಳಿಯುತ್ತಿರುವುದು ವಿಷಾದಕರ ಸಂಗತಿ ಎಂದರು.

ಇಂತಹ ಪರಿಸ್ಥಿತಿಯಲ್ಲಿ ಬಸ್ತವಾಡ ಗ್ರಾಮಸ್ಥರು ತಮ್ಮ ಜಾತ್ರಾ ಮಹೋತ್ಸವದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಿದ್ದು ನಿಜಕ್ಕೂ ಶ್ಲಾಘನೀಯ ಕಾರ್ಯವೆಂದರು. ಯುವ ಸಮೂಹ ಇಂತಹ ದೇಸಿ ಕ್ರೀಡೆಗಳಲ್ಲಿ ಪಾಲ್ಗೊಂಡು ಆರೋಗ್ಯವಂತರಾಗಿ ಬದುಕಬೇಕು. ಆ ನಿಟ್ಟಿನಲ್ಲಿ ಪಾಲಕರು ಚಿಂತನೆ ಮಾಡಬೇಕೆಂದು ಸಲಹೆಯಿತ್ತರು.

ಜಾತ್ರಾ ಮಹೋತ್ಸವ ಸಮಿತಿ ಉಪಾಧ್ಯಕ್ಷ ಸುರೇಶ ವಂಟಮೂರಿ, ಪಿಕೆಪಿಎಸ್ ಅಧ್ಯಕ್ಷ ಅಶೋಕ ಪಾಟೀಲ, ಉದ್ಯಮಿ ಆನಂದ ಲಕ್ಕುಂಡಿ, ಮುಖಂಡರಾದ ಪರಗೌಡ ಪಾಟೀಲ, ದಯಾನಂದ ವಂಟಮೂರಿ, ನೇಮಣ್ಣಾ ಮಗದುಮ್ಮ, ಕಾಡಪ್ಪಾ ಮಗದುಮ್ಮ, ಶಂಕರಗೌಡ ಪಾಟೀಲ, ಪ್ರಜ್ವಲ ಲಕ್ಕುಂಡಿ ಇತರರಿದ್ದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept