ಸ್ಥಳೀಯ ಕೃಷಿ ಇಲಾಖೆ ಆವರಣದಲ್ಲಿ ಶಾಸಕ ನಿಖಿಲ ಕತ್ತಿ ಅವರು ಮುಂಗಾರು ಹಂಗಾಮಿನ ಸೋಯಾಬಿನ್ ಬೀಜಗಳನ್ನು ರೈತರಿಗೆ ವಿತರಿಸಿದರು. ಸತ್ತೆಪ್ಪಾ ನಾಯಿಕ, ರಾಚಯ್ಯಾ ಹಿರೇಮಠ, ಗುರುರಾಜ ಕುಲಕರ್ಣಿ, ಎ.ಕೆ.ಪಾಟೀಲ, ಆರ್.ಬಿ.ನಾಯ್ಕರ ಇತರರಿದ್ದರು.
ಹುಕ್ಕೇರಿ : ಮುಂಗಾರು ಬಿತ್ತನೆ ಮುನ್ನ ನೆಲದ ಹಸಿ ನೋಡಿಕೊಂಡು ಬಿತ್ತನೆ ಮಾಡಬೇಕು. ಪ್ರತಿ ವರ್ಷದ ವಾಡಿಕೆಗಿಂತ ಶೇ.25ರಷ್ಟು ಮಳೆ ಕೊರತೆ ಆಗಿದೆ. ಅದರಲ್ಲೂ ಹುಕ್ಕೇರಿ ತಾಲೂಕಿನಲ್ಲಿ ಮಳೆ ಕೊರತೆ ಆಗಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಶುಕ್ರವಾರದಂದು ಸ್ಥಳೀಯ ಕೃಷಿ ಇಲಾಖೆಯಲ್ಲಿ ರೈತರಿಗೆ ಸೋಯಾಬಿನ್ ಬೀಜ ವಿತರಿಸಿ ಮಾತನಾಡಿದರು. ತಾಲೂಕಿನಲ್ಲಿ ಸೋಯಾಬಿನ್ 7500 ಕ್ವಿಂಟಲ್, ಗೋವಿನ ಜೋಳ 18.4 ಕ್ವಿಂಟಲ್ ಬೀಜ್ ದಾಸ್ತಾನು ಮಾಡಲಾಗಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಹೆಚ್ಚಿಸಲು ಕೃಷಿ ಇಲಾಖೆ ಸನ್ನದ್ಧ ಆಗಿದೆ ಎಂದರು.
ತಾಲೂಕಿನ 39 ಪಿಕೆಪಿಎಸ್‌ಗಳಲ್ಲಿ ಮತ್ತು ೩ ರೈತ ಸಂಪರ್ಕ ಕೇಂದ್ರ ಸೇರಿದಂತೆ 42 ಸ್ಥಳಗಳಲ್ಲಿ ಬೀಜ ವಿತರಿಸಲಾಗುತ್ತಿದೆ. ರೈತರು ಬೀಜ ಖರೀದಿ ಮಾಡಲು ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ಇದರ ಜತೆಗೆ ರಸಗೊಬ್ಬರ ಮತ್ತು ರಾಸಾಯನಿಕ ದಾಸ್ತಾನು ಸಹ ಪೂರ್ಣ ಪ್ರಮಾಣದಲ್ಲಿದೆ ಎಂದರು.
ಕೃಷಿ ಸಹಾಯಕ ನಿರ್ದೇಶಕ ಆರ್.ಬಿ.ನಾಯ್ಕರ ಮಾತನಾಡಿ ರಸಗೊಬ್ಬರ ಮಾರಾಟಗಾರರು ರೈತರಿಗೆ ಸರಿಯಾಗಿ ಸ್ಪಂದನೆ ಮತ್ತು ಯೋಗ್ಯ ದರದಲ್ಲಿ ಮಾರಾಟ ಮಾಡದಿದ್ದಲ್ಲಿ ತಕ್ಷಣ ಇಲಾಖೆಗೆ ತಿಳಿಸಿ. ಅಂತಹವರ ಮೇಲೆ ಯೋಗ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕೃಷಿಗೆ ಪೂರಕವಾಗಿ ಉತ್ತಮ ಸ್ಪಂದನೆ ಹಾಗೂ ಅಧಿಕಾರಿಗಳ ಸಮರ್ಪಕ ಸೇವೆ ಗಮನಿಸಿ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆ ಕೃಷಿ ಇಲಾಖೆಗೆ ಪ್ರಥಮ ಹಾಗೂ ಜಿಲ್ಲೆಗೆ ಹುಕ್ಕೇರಿ ತಾಲೂಕ ಪ್ರಥಮ ಎಂದು ಪ್ರಶಸ್ತಿ ಸಹಿತ ಪ್ರಮಾಣ ಪತ್ರ ನೀಡಿದ್ದನ್ನು ಶಾಸಕರು ಶ್ಲಾಘಿಸಿದರು. ನಂತರ ಪ್ರಶಸ್ತಿಗಳನ್ನು ಶಾಸಕರಿಂದ ಕೃಷಿ ಇಲಾಖೆ ಸಿಬ್ಬಂದಿಗಳು ಪಡೆದುಕೊಂಡರು.
ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಸತ್ತೆಪ್ಪಾ ನಾಯಿಕ, ಬಿಜೆಪಿ ಮಂಡಲ ಅಧ್ಯಕ್ಷ ರಾಚಯ್ಯಾ ಹಿರೇಮಠ, ಪಿಕಾರ್ಡ ಬ್ಯಾಂಕ ನಿರ್ದೇಶಕರಾದ ಗುರುರಾಜ ಕುಲಕರ್ಣಿ, ಶೀತಲ ಬ್ಯಾಳಿ, ಮುಖಂಡರಾದ ಎ.ಕೆ.ಪಾಟೀಲ, ಬಸವರಾಜ ಪಾಟೀಲ, ಶಿವನಗೌಡ ಪಾಟೀಲ, ಚನ್ನಪ್ಪಾ ಗಜಬರ, ಆನಂದ ಲಕ್ಕುಂಡಿ, ರಾಜು ಚೌಗಲಾ, ಗಿರೀಶ ಕುಲಕರ್ಣಿ, ರಾಜು ಮುನ್ನೋಳಿ, ಕೃಷಿ ಇಲಾಖೆ ಸಿಬ್ಬಂದಿಗಳಾದ ರಾಘವೇಂದ್ರ ತಳವಾರ, ಶಿವಾನಂದ ಕಮತ, ಉದಯ ಆಗನೂರ, ಸಮೀರ ಲೋಕಾಪೂರ, ಲಗಮನ್ನಾ ಹೂಲಿಕಟ್ಟಿ ಮತ್ತಿತರರಿದ್ದರು.






