ಸ್ಥಳೀಯ ಪಿಕಾರ್ಡ ಬ್ಯಾಂಕ್ ಆವರಣದಲ್ಲಿ ಎಸ್.ಎಸ್.ಎಲ್.ಸಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಶಾಸಕ ನಿಖಿಲ ಕತ್ತಿ, ಗುರುರಾಜ ಕುಲಕರ್ಣಿ, ಎಚ್.ಎಲ್.ಪೂಜೇರಿ, ಬಿ.ಇ.ಒ ಪ್ರಭಾವತಿ ಪಾಟೀಲ ಇತರರಿದ್ದರು
ಹುಕ್ಕೇರಿ : ಪ್ರಸಕ್ತ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿಗೆ ಮೊದಲ ಮೂರು ಸ್ಥಾನಗಳನ್ನು ಗಳಿಸುವ ಮೂಲಕ ಹೆಸರಾಗಿರುವ ವಿದ್ಯಾರ್ಥಿಗಳು ಭವಿಷ್ಯದಲ್ಲೂ ಈ ಸಾಧನೆ ಪುನರಾವರ್ತನೆ ಮಾಡಬೇಕೆಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಸೋಮವಾರದಂದು ಪಟ್ಟಣದ ಪಿಕಾರ್ಡ ಬ್ಯಾಂಕ ಆವರಣದಲ್ಲಿ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ ತಾಲೂಕಿನ ಹೆಬ್ಬಾಳ ಸರಕಾರಿ ಕೆಪಿಎಸ್ ಪ್ರೌಢಶಾಲೆಯ ರೋಹಿಣಿ ದುಂಡಪ್ಪಾ ಜರಳಿ, ಹುಕ್ಕೇರಿ ಜಿಮಖಾನ ಆಂಗ್ಲ ಮಾಧ್ಯಮ ಪ್ರೌಢ ವಿಭಾಗದ ನಿಖಿತಾ ಶ್ರೀಕಾಂತ ಮುದವೀರ ಹಾಗೂ ಕೋಚರಿ ಸರಕಾರಿ ಪ್ರೌಢಶಾಲೆಯ ನಾಗರಾಜ ಮಂಜುನಾಥ ಕುರಬರ ಅವರನ್ನು ಸತ್ಕರಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಶೇ. 90ಕ್ಕೂ ಹೆಚ್ಚು ಅಂಕ ಗಳಿಸುತ್ತಿರುವುದು ಸೋಜಿಗ ತರುತ್ತಿದೆ. ಈ ಮೊದಲು ಪಾಸಿಂಗ್ ಅಂಕ ಪಡೆದರೇ ಸಾಕು ಎನ್ನುವ ಪರಿಸ್ಥಿತಿ ಇತ್ತು ಎಂದರು. ಮಕ್ಕಳು ಅಂಕಗಳ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಪಡೆದ ಅಂಕಗಳಿಗೆ ನ್ಯಾಯ ದೊರಕುತ್ತದೆ ಎಂದರು.
ಬಿಇಒ ಪ್ರಭಾವತಿ ಪಾಟೀಲ ಮಾತನಾಡಿ ಶಿಕ್ಷಕರ ಶ್ರಮ ಮತ್ತು ಮಕ್ಕಳ ಸತತ ಅಧ್ಯಯನದಿಂದ ವರ್ಷದಿಂದ ವರ್ಷಕ್ಕೆ ಫಲಿತಾಂಶ ಸುಧಾರಣೆ ಆಗಿದೆ. ಮುಂಬರುವ ದಿನಗಳಲ್ಲಿ ಚಿಕ್ಕೋಡಿ ಜಿಲ್ಲೆಯ ಒಟ್ಟಾರೆ ಫಲಿತಾಂಶದ ಮೊದಲ ಮೂರು ಸ್ಥಾನಗಳಲ್ಲಿ ಒಂದನ್ನು ಪಡೆಯುವ ಛಲ ಹೊಂದಿದ್ದೇವೆ ಎಂದರು.
ಮುಖಂಡರಾದ ಗುರುರಾಜ ಕುಲಕರ್ಣಿ, ಎಸ್.ಆರ್.ಕರ್ಕಿನಾಯಿಕ, ಎಂ.ಬಿ.ನಾಯಿಕ, ಶಹಜಾನ ಬಡಗಾಂವಿ, ಎಚ್.ಎಲ್.ಪೂಜೇರಿ, ಭೀಮಗೌಡ ಗಿರಿಗೌಡನವರ, ಗುರಪ್ಪಾ ತಳವಾರ, ದುರದುಂಡಿ ಪಾಟೀಲ, ರಾಜು ಮುಜಾವರ, ಶಿಕ್ಷಣ ಇಲಾಖೆಯ ಶಿವಾನಂದ ಗುಂಡಾಳೆ, ಬಿ.ಬಿ.ಪಾರ್ಥನಳ್ಳಿ, ಎಂ.ಡಿ.ಬಡಿಗೇರ, ಆರ್.ಬಿ.ವಠಾರೆ ಮತ್ತಿತರರಿದ್ದರು.





