ಶಾಸಕ ನಿಖಿಲ ಕತ್ತಿ ಅವರಿಂದ ಜನ ಸಂಪರ್ಕ ಸಭೆ

ಹುಕ್ಕೇರಿ:        ಹುಕ್ಕೇರಿ-ಮದಮಕ್ಕನಾಳ ಮತ್ತು ಎಲಿಮುನ್ನೋಳಿ ಕ್ರಾಸ್‌ನ ಭಾಪೂಜಿ ಸ್ಕೂಲ್ ಹತ್ತಿರ ರಸ್ತೆಯ ಬದಿಯಲ್ಲಿ ಇರುವ ಭಾಂವಿಗಳಿಗೆ ರಕ್ಷಣಾ ಗೋಡೆ ನಿರ್ಮಾಣ, ಹುಕ್ಕೇರಿ ಬಸವ ವೃತ್ತದಿಂದ ಬೆಳವಿಗೆ ಹೋಗುವ ರಸ್ತೆ ಬದಿಯ ಗಿಡಗಂಟೆಗಳ ಸ್ವಚ್ಚತೆ ಮಾಡಬೇಕೆಂದು ಜಿ.ಪಂ ಇಲಾಖೆ ಅಧಿಕಾರಿಗಳಿಗೆ ಶಾಸಕ ನಿಖಿಲ ಕತ್ತಿ ಸೂಚಿಸಿದರು.

       ಸೋಮವಾರ ಸಂಜೆ ಸ್ಥಳೀಯ ಪಿಕಾರ್ಡ ಬ್ಯಾಂಕ್ ಆವರಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.ಮುಂಗಾರು ಪೂರ್ವ ಮಳೆ ಚೆನ್ನಾಗಿ ಆಗುತ್ತಿದ್ದು ರೈತರ ಬಿತ್ತನೆ ಬೀಜಗಳ ದಾಸ್ತಾನು ಕುರಿತು ಕೃಷಿ ಇಲಾಖೆ ಅಧಿಕಾರಿಗಳ ಮಾಹಿತಿ ಪಡೆದರು. ತಾಲೂಕಾಡಳಿತದ ಕೆಲ ಅಧಿಕಾರಿಗಳು ನಿಯೋಜನೆ ಮೇಲೆ ತೆರಳುತ್ತಿರುವುದಕ್ಕೆ ಆಕ್ಷೇಪಿಸಿದ ಶಾಸಕರು ಆಡಳಿತಕ್ಕೆ ಸಮಸ್ಯೆ ಆಗದಂತೆ ವರ್ಗಾವಣೆ ಕೈಗೊಳ್ಳುವಂತೆ ತಿಳಿಸಿದರು.

   ಕೊಟಬಾಗಿ ಏತ ನೀರಾವರಿಯಿಂದ ಹರಿಯುವ ನೀರಿಗೆ ಕೆಲ ಗ್ರಾಮಗಳ ರೈತರು ತಡೆದು ಕೇವಲ ತಮ್ಮ ಗ್ರಾಮಗಳಿಗೆ ಮಾತ್ರ ಬರುವಂತೆ ಮಾಡುತ್ತಿದ್ದಾರೆಂಬ ಹುಲ್ಲೋಳಿ ಹಟ್ಟಿ ಗ್ರಾಮದ ರೈತರ ಆಕ್ಷೇಪಕ್ಕೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗೆ ಈ ಸಮಸ್ಯೆ ಪರಿಹರಿಸುವಂತೆ ಸೂಚಿಸಿದ ಅವರು ರೈತರು ಅಧಿಕಾರಿಗಳೊಂದಿಗೆ ಸಹಕರಿಸಬೇಕೆಂದು ಎಚ್ಚರಿಸಿದರು.

  ಹುಕ್ಕೇರಿ ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಒಳ ಚರಂಡಿ ಕಾಮಗಾರಿಗೆ ಅಗೆದ ರಸ್ತೆಗಳನ್ನು ಸರಿಯಾಗಿ ಮುಚ್ಚದೇ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದರ ಜತೆಗೆ ಅಪಘಾತ ಆಗುತ್ತಿವೆ ಎಂಬ ಪುರವಾಸಿಗಳ ದೂರಿಗೆ ಸ್ಪಂದಿಸಿದ ಶಾಸಕರು ತಕ್ಷಣ ಒಳಚರಂಡಿ ಕಾಮಗಾರಿ ಕೈಗೊಳ್ಳುವವರನ್ನು ಮತ್ತು ಪುರಸಭೆ ಅಧಿಕಾರಿಗಳನ್ನು ಕರೆಸಿ ಈಗ ಮಾಡಿರುವ ಕಾಮಗಾರಿಯ ರಸ್ತೆಗಳ ತಗ್ಗು ಗುಂಡಿ ಮರು ಭರ್ತಿ ಮಾಡಬೇಕು. ಅಲ್ಲಿಯವರೆಗೆ ಬೇರೆ ಏರಿಯಾಗಳ ಒಳ ಚರಂಡಿ ಕಾಮಗಾರಿ ಕೈಗೊಳ್ಳದಂತೆ ನಿಗಾ ವಹಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಮತ್ತು ಅಭಿಯಂತರರಿಗೆ ಆದೇಶಿಸಿದರು.

  ಇದೇ ಸಂದರ್ಭದಲ್ಲಿ ಅಂಧತ್ವದ ಮಧ್ಯೆ ನಡೆದಾಡುವ ಕಂಪ್ಯೂಟರ್ ಎಂದು ಹೆಸರು ಮಾಡಿರುವ ಅಥಣಿಯ ಬಸವರಾಜ ಉಮರಾಣಿಯ ಸಮಸ್ಯೆ ಆಲಿಸಿ ಸರಕಾರದಿಂದ ದೊರಕುವ ಸೌಲಭ್ಯ ಒದಗಿಸುವ ಭರವಸೆಯಿತ್ತರು.

     ಬಿಜೆಪಿ ಮಂಡಲ ಅಧ್ಯಕ್ಷ ರಾಚಯ್ಯಾ ಹಿರೇಮಠ, ಲಿಂಗಾಯತ ಪಂಚಮಸಾಲಿ ತಾಲೂಕಾಧ್ಯಕ್ಷ ಭೀಮಪ್ಪಾ ಚೌಗಲಾ, ಮುಖಂಡರಾದ ಸತ್ತೆಪ್ಪಾ ನಾಯಿಕ, ಗುರುರಾಜ ಕುಲಕರ್ಣಿ, ಎ.ಕೆ.ಪಾಟೀಲ, ಸುನೀಲ ಭೈರಣ್ಣವರ, ಕೆಂಪಣ್ಣಾ ದೇಸಾಯಿ, ಎಚ್.ಎಲ್.ಪೂಜೇರಿ, ರವಿ ಪಾಟೀಲ, ಪಾಂಡುರಂಗ ಖೋತ, ಬಿ.ಕೆ.ಮಗೆಣ್ಣವರ, ರಾಜು ಮುನ್ನೋಳಿ, ಭೀಮಗೌಡ ಗಿರಿಗೌಡನವರ, ಶೀತಲ ಬ್ಯಾಳಿ, ಚನ್ನಪ್ಪಾ ಗಜಬರ ಮತ್ತಿತರರಿದ್ದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept