ರೈತರು ಸಂಘಟಿತರಾಗಿ ಜನಪ್ರತಿನಿಧಿಗಳಿಗೆ ಬುದ್ದಿ ಕಲಿಸೋಣ: ಮಹಾಂತೇಶ ಕಮತ

ಸ್ಥಳೀಯ ಕೋರ್ಟ ಸರ್ಕಲ್‌ದಲ್ಲಿ ರೈತ ಸಂಘಟನೆಯಿಂದ ಹಮ್ಮಿಕೊಂಡ ನಮ್ಮ ಜಲಾಶಯ ನಮ್ಮ ನೀರು ನಮ್ಮ ಹಕ್ಕು ಪ್ರತಿಭಟನೆ ಕಾರ್ಯಕ್ರಮದ ಉದ್ಘಾಟನೆ. ಮಾಜಿ ಸಚಿವ ಶಶಿಕಾಂತ ನಾಯಿಕ, ಮಹಾಂತೇಶ ಕಮತ, ಗೋಪಾಲ ಮರಬಸನ್ನವರ,  ಅಶೋಕ ನರಸನ್ನವರ, ಸಲೀಮ ಮುಲ್ಲಾ, ಗುರುಸಿದ್ದ ಮಡಿವಾಳ ಇತರರಿದ್ದರು.

ಹುಕ್ಕೇರಿ: ರೈತರು ಸಂಘಟಿತರಾಗಿ ಹೋರಾಟ ಮಾಡದಿದ್ದರೆ , ನಮ್ಮ ಹಿಡಕಲ್ ಜಲಾಶಯದ ನೀರು ಹುಬ್ಬಳ್ಳಿ, ಧಾರವಾಡ ಕೈಗಾರಿಕೆ ಉದ್ದೇಶದ ನೆಪದಲ್ಲಿ ಸಚಿವರ ಕಾರಖಾನೆಗಳಿಗೆ ನೀರು ತೆಗೆದುಕೊಂಡು ಹೋಗುತ್ತಾರೆಂದು ರಾಜ್ಯಾಧ್ಯಕ್ಷ ಮಹಾಂತೇಶ ಕಮತ ಆಕ್ರೋಶ ವ್ಯಕ್ತಪಡಿಸಿದರು.

      ಸೋಮವಾರದಂದು ಅವರು ಪಟ್ಟಣದ ಕೋರ್ಟ ಸರ್ಕಲ್ ಹತ್ತಿರ ಕರ್ನಾಟಕ ರೈತ ಸಂಘ ಹಾಗೂ ಕಾರ್ಮಿಕರ ಹಿತಾಸಕ್ತಿ ಸಂಘ ತಾಲೂಕಾ ಸಂಘಟನೆ ವತಿಯಿಂದ ಹಮ್ಮಿಕೊಂಡ ನಮ್ಮ ಜಲಾಶಯ, ನಮ್ಮ ನೀರು ನಮ್ಮ ಹಕ್ಕು ಪ್ರತಿಭಟನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

      ಜಿಲ್ಲೆಯ ೧೮ ಕ್ಷೇತ್ರದ ಜನಪ್ರತಿನಿಧಿಗಳಿಗೆ ಈ ಸಂಗತಿ ಗೊತ್ತಿದ್ದರೂ ಕೂಡಾ ಸುಮ್ಮನೆ ಇದ್ದಾರೆ. ಇದರಲ್ಲಿ ಇವರ ಕೈವಾಡ ಇದೆ ಎಂಬ ಸಂಶಯ ಕಂಡು ಬರುತ್ತಿದೆ ಎಂದರು.  ನಮ್ಮ ರೈತರು ಜನಪ್ರತಿನಿಧಿಗಳ ಉದ್ದೇಶ ಅರ್ಥಮಾಡಿಕೊಳ್ಳಬೇಕು. ಎರಡು ನದಿಗಳಿದ್ದರೂ ಬೇಸಿಗೆಯಲ್ಲಿ ಜನ ಜಾನುವಾರಗಳ ನೀರಿನ ಕೊರತೆ ಇದೆ. ಕೆಲವು ಹಳ್ಳಿಗಳಲ್ಲಿ ಟ್ಯಾಂಕರ ಮೂಲಕ ನೀರು ಪೂರೈಸುತ್ತಿದ್ದಾರೆ. ಆದಾಗ್ಯೂ ಬೇರೆ ಜಿಲ್ಲೆಗೆ ನೀರು ತೆಗೆದುಕೊಂಡು ಹೋಗಲು ಮುಂದಾಗಿರುವುದು ಶೋಚನೀಯ ಸಂಗತಿ ಎಂದರು. ಇಂತಹವರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸೋಣ,  ನಾವೆಲ್ಲರೂ ಒಗ್ಗಟಾಗಿ ನಮ್ಮ ನೀರು ನಮ್ಮ ಹಕ್ಕು ಕಾಪಾಡುವುದಕ್ಕಾಗಿ ಹೋರಾಟ ಮಾಡೋಣ, ನಮ್ಮ ಜೀವ ಹೋದರು ನಾವು ಧಾರವಾಡ ಕೈಗಾರಿಕೆ ಉದ್ದೇಶಕ್ಕಾಗಿ ನೀರು ಹೋಗಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.  

    ಉಪಾಧ್ಯಕ್ಷ ಜಿಯಾವುಲ್ಲಾ ವಂಟಮೂರಿ ತಾಲೂಕಿನ ಪಶು ಆಸ್ಪತ್ರೆಯಿಂದ ರೈತರಿಗೆ ದೊರಕುವ ಯೋಜನೆಗಳ ಬಗ್ಗೆ ರೈತರಿಗೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಹಿರಣ್ಯಕೇಶಿ ನದಿಯಿಂದ ೧೯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ತಾಲೂಕಿನ ಎಲಿಮುನ್ನೋಳಿ ಗ್ರಾಮದ ಬಸವೇಶ್ವರ ಕೆರೆಯನ್ನು ತುಂಬಬೇಕು. ಹುಕ್ಕೇರಿಯಲ್ಲಿ ರೈತಭವನ ನಿರ್ಮಿಸಬೇಕು. ರೈತರ ಬೆಳೆಗಳ ದಾಸ್ತಾನಕ್ಕಾಗಿ ಗೋದಾಮುಗಳ ಕಟ್ಟಡ ನಿರ್ಮಾಣವಾಗಬೇಕೆಂದರು.

          ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿ ನರೇಗಾ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರನ್ನು ಗ್ರಾಮವಾರು ರೈತರ ಜಮೀನುಗಳಲ್ಲಿ ದುಡಿಯವಂತೆ ನಿರ್ಣಯ ಕೈಗೊಂಡು ರೈತರಿಗೆ ಬೆಳೆ ಬೆಳೆಯಲು, ಅಧಿಕ ಇಳುವರಿ ತೆಗೆಯಲು ಪ್ರೋತ್ಸಾಯಿಸಬೇಕು ಎಂದರು.

     ರೈತ ಮುಖಂಡರಾದ ಗೋಪಾಲ ಮರಬಸನ್ನವರ,  ಅಶೋಕ ನರಸನ್ನವರ, ಸಲೀಮ ಮುಲ್ಲಾ, ಗುರುಸಿದ್ದ ಮಡಿವಾಳ, ರವಿ ಕಾಂಬಳೆ, ಶಶಿಶೇಖರ ಧಾಮನಿಮಠ, ಶಾಂತಿನಾಥ ಮಗದುಮ್ಮ, ಬಸವರಾಜ ಹುಲಕುಂದ, ಮಲ್ಲಕಾರ್ಜಿನ ವಾಲಿ, ಭೀಮಗೌಡಾ ಇಮಗೌಡನವರ, ಮಹೇಶ ದೊಡ್ಡಲಿಂಗನ್ನವರ ಮತ್ತಿತರರಿದ್ದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept