ತಾಲೂಕಾ ಪಂಚಾಯತ ಭಾವಚಿತ್ರ.
ಹುಕ್ಕೇರಿ: ಕಾಂಗ್ರ‍್ರೆಸ್ ಸರ್ಕಾರದ ಅಡಳಿತದಲ್ಲಿ ಹುಕ್ಕೇರಿ ಬಿಜೆಪಿ ಶಾಸಕ ನಿಖಿಲ ಕತ್ತಿ ಕ್ಷೇತ್ರದ ಗ್ರಾಮೀಣಾಭಿವೃದ್ಧಿಗಾಗಿ ಕೋಟ್ಯಾಂತರ ರೂ ಅನುದಾನ ತಂದರೂ ತಾಲೂಕಾಡಳಿತದ ನಿರ್ಲಕ್ಷ ಇಚ್ಚಾಶಕ್ತಿ ಕೊರತೆಯಿಂದ ಸರಕಾರದ ಖಜಾನೆಗೆ ಮರಳಿ ಹೋಗುತ್ತಿರುವುದು ವಿಪರ್ಯಾಸ.
ಗ್ರಾಮಗಳ ಜನೋಪಯೋಗಿ ಅಭಿವೃದ್ದಿ ಕೆಲಸಗಳಿಗೆ ಸರಕಾರದ ಅನುದಾನ ಕೊರತೆ ಇದೆ ಎಂದು ಹೇಳಿ ಜನರಿಂದ ನುಣಚಿಕೊಳ್ಳುತ್ತಿರುವ ಅಧಿಕಾರಿಗಳ ನಿರ್ಲಕ್ಷö್ಯದಿಂದಾಗಿ 2024-25 ಸಾಲಿನಲ್ಲಿ 50.3 ಕೋಟಿ ರೂ ಹಣ ಸರಕಾರದ ಖಜಾನೆಗೆ ಮರಳಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಾ ಪಂಚಾಯತಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ಸಾಮಾನ್ಯ ಸಭೆ ನಡೆಸಿ ಗ್ರಾಮಗಳ ಮೂಲಭೂತ ಸೌಕರ್ಯ ಸಮಸ್ಯೆಗಳನ್ನು ಅರಿತು ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು. ಕಾಟಾಚಾರದಿಂದ ವರ್ಷದಲ್ಲಿ 2 ಸಾಮಾನ್ಯ ಸಭೆಗಳನ್ನು ನಡೆಸಿ ಕೈ ತೊಳೆದುಕೊಂಡಿದ್ದಾರೆ. ಆ ಎರಡು ಸಭೆಗಳಿಗೂ ಬೆರಳೆಣಿಕೆ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಭೆ ನಡೆಸಿದ್ದಾರೆಂಬ ಆರೋಪ ವ್ಯಾಪಕವಾಗಿದೆ.
ಇಲಾಖಾವಾರು ಅನುದಾನ ಇದ್ದರೂ ಸದುಪಯೋಗ ಪಡಿಸಿಕೊಳ್ಳುವಲ್ಲಿ ತಾಲೂಕಾಡಳಿತದ ವಿಫಲತೆ ಎದ್ದು ಕಾಣುತ್ತಿದೆ. ಕೆಲವು ಇಲಾಖೆಯವರು ಟೆಂಡರ್ ಕರೆಯದೆ ಕಾಟಾಚಾರ ಮತ್ತು ಕಳಪೆ ಕಾಮಗಾರಿ ಮಾಡಿಸಿದ್ದನ್ನು ಇತ್ತೀಚೆಗೆ ನಡೆದ ತಾ.ಪಂ ಸಾಮಾನ್ಯ ಸಭೆಯಲ್ಲಿ ಲಕ್ಷಾಂತರ ರೂ ದುರುಪಯೋಗ ಆಗಿದೆ ಎಂದು ಜಿ.ಪಂ ಉಪಕಾರ್ಯದರ್ಶಿ ತಾಲೂಕಾ ಮಟ್ಟದ ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದರು.
ಶಾಸಕ ನಿಖಿಲ ಕತ್ತಿ ಅವರು ಶ್ರಮ ವಹಿಸಿ ಸರಕಾರದ ಅನುದಾನ ತಂದರೂ ಅದು ಸದುಪಯೋಗ ಆಗದೇ ಮರಳುತ್ತಿದೆ ಎಂಬ ಬೇಸರ ಸಾರ್ವಜನಿಕರದ್ದಾಗಿದೆ. ಕಾರಣ ತಕ್ಷಣ ಶಾಸಕರು ತಾಲೂಕಾಡಳಿತದ ಸಭೆ ನಡೆಸಿ ಇದಕ್ಕೆ ಕಾರಣೀಕರ್ತ ಅಧಿಕಾರಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂಬ ಆಗ್ರಹ ಜನಪ್ರತಿನಿಧಿಗಳದ್ದಾಗಿದೆ.
ತಾಲೂಕಾಡಳಿತದ 17 ಇಲಾಖೆಗಳಿಗೆ ಸನ್ 2024-25ನೇ ಒಟ್ಟು 19482.6 ಲಕ್ಷ ರೂ ಅನುದಾನ ಸರಕಾರದಿಂದ ಬಂದಿತ್ತು. ಅದರಲ್ಲಿ 18980.3 ಲಕ್ಷ ರೂ ಬಳಕೆಯಾಗಿ 503.3 ಲಕ್ಷ ರೂ ಬಾಕಿ ಉಳಿಸಿಕೊಂಡಿದ್ದಾರೆ.
ಬಾಕಿ ಉಳಿದ ಅನುದಾನದ ಮೊತ್ತ ಮಾರ್ಚ ಅಂತ್ಯದೊಳಗಾಗಿ ಖರ್ಚು ಆಗದಿದ್ದಲ್ಲಿ ಸರಕಾರಕ್ಕೆ ಮರಳಿ ಹೋಗುತ್ತದೆ. ಶಾಸಕರು ಸರಕಾರದಿಂದ ತಂದ ಅನುದಾನ ಮರಳಿ ಸರಕಾರಕ್ಕೆ ಜಮೆಯಾದರೆ ಅಭಿವೃದ್ಧಿ ಕಾರ್ಯಗಳಿಗೆ ಕೊರತೆಯಾಗುತ್ತದೆ ಎಂಬ ಪರಿಜ್ಞಾನ ಅಧಿಕಾರಿಗಳಿಗೆ ಹಾಗೂ ಇದನ್ನು ನೋಡಿಕೊಳ್ಳಬೇಕಾದ ತಾ.ಪಂ ಇ.ಒ ಜವಾಬ್ದಾರಿಯನ್ನು ಪ್ರಶ್ನಿಸುವವರಾರು ಎಂಬ ಜಿಜ್ಞಾಸೆ ಜನರದ್ದಾಗಿದೆ.
ಅನುದಾನ ಖರ್ಚಾಗದೆ ಇಲಾಖಾವಾರು ಉಳಿದ ಮೊತ್ತ:
• ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ: 2024-25 ಸಾಲಿನಲ್ಲಿ 15196.73 ಲಕ್ಷ ರೂ ಜಮೆಯಾದ ಅನುದಾನದಲ್ಲಿ 14856.14 ಲಕ್ಷ ರೂ ಖರ್ಚು ಮಾಡಿ 340.59 ಲಕ್ಷ ರೂ ಹಣ ಬಾಕಿ ಉಳಿದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: 1168.63 ಲಕ್ಷ ರೂ ಅನುದಾನದಲ್ಲಿ 1149.95 ಖರ್ಚಾಗಿ 18.68 ಹಣ ಬಾಕಿ ಉಳಿದಿದೆ. ಮಕ್ಕಳ ಪೌಷ್ಠಿಕ ಆಹಾರಕ್ಕಾಗಿ ಸರಕಾರ ಬಿಡುಗಡೆ ಮಾಡಿದ ರೂ 562.71 ಲಕ್ಷ ರೂ ಅನುದಾನದಲ್ಲಿ 552.56 ಲಕ್ಷ ರೂ ಖರ್ಚಾಗಿ 10.15ಲಕ್ಷ ಅನುದಾನ ಉಳಿದಿದೆ. ಪರಿಶಿಷ್ಟ ಜಾತಿ ಕಲ್ಯಾಣ ಇಲಾಖೆಗೆ 395.24 ಲಕ್ಷ ರೂ ಬಂದ ಅನುದಾನದಲ್ಲಿ 171.67ಲಕ್ಷ ರೂ ಖರ್ಚು ಮಾಡಿ 23.57ಲಕ್ಷ ರೂ ಉಳಿಸಿದ್ದಾರೆ. ಪಶು ಸಂಗೋಪಣೆ ಇಲಾಖೆಗೆ ಬಂದ 678.48 ಲಕ್ಷ ರೂ ಅನುದಾನದಲ್ಲಿ ರೂ 617.19 ಲಕ್ಷ ರೂ ಖರ್ಚಾಗಿದ್ದು 61.29 ಲಕ್ಷ ರೂಗಳಷ್ಟು ಹಣ ಉಳಿಸಲಾಗಿದೆ. ತಾಲೂಕಾ ಪಂಚಾಯತ 1172.67 ಲಕ್ಷ ರೂ ಅನುದಾನದಲ್ಲ್ಲಿ1138.56 ರಷ್ಟು ಹಣ ಖರ್ಚಾಗಿದ್ದು 33.45 ಲಕ್ಷ ರೂ ಹಣ ಉಳಿದುಕೊಂಡಿದೆ.

- ಸನ್ 2024-25ನೇ ಕೇವಲ ಎರಡು ಸಾಮಾನ್ಯ ಸಭೆ ನಡೆಸಲಾಗಿದೆ. ಹೀಗಾದರೆ ಗ್ರಾಮೀಣಾಭಿವೃದ್ಧಿ ಹೇಗೆ ಸಾಧ್ಯ. ಕನಿಷ್ಠ 6 ಸಭೆಗಳಾದರೂ ನಡೆಸಬೇಕು. ಕೆಲವು ಕಾಮಗಾರಿಗಳು ಕಳಪೆಯಾಗಿವೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅವುಗಳನ್ನು ಪರಿಶೀಲಿಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮಕ್ಕೆ ಶಿಪಾರಸ್ಸು ಮಾಡುತ್ತೇನೆ.: ಬಸವರಾಜ ಅಡವಿಮಠ, ಜಿ.ಪಂ ಉಪಕಾರ್ಯದರ್ಶಿ.
- ಕಾಂಗ್ರೆಸ್ ಸರಕಾರದಲ್ಲಿ ಕ್ಷೇತ್ರದ ಅಭಿವೃದ್ದಿಗೆ ಅನುದಾನದ ಕೊರತೆ ಇದೆ. ಆದಾಗ್ಯೂ ಸಚಿವರು ಮತ್ತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ದುಂಬಾಲು ಬಿದ್ದು ತಂದ ಅನುದಾನ ಮರಳಿ ಸರಕಾರಕ್ಕೆ ಜಮಾ ಆಗುತ್ತಿರುವುದು ಬೇಸರ ತಂದಿದೆ. ಕಾರಣ ಅನುದಾನ ಸಮರ್ಪಕ ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಡಳಿತಕ್ಕೆ ಸೂಚಿಸುತ್ತೇನೆ: ನಿಖಿಲ ಕತ್ತಿ ಶಾಸಕರು





