ಸ್ಥಳೀಯ ವಿಶ್ವರಾಜ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಸಾಧಕ ಶಿಕ್ಷಕರನ್ನು ಸತ್ಕರಿಸಿದರು. ಚಂದ್ರಶೇಖರ ಶಿವಾಚಾರ್ಯರು, ಶಿವಬಸವ ಮಹಾಸ್ವಾಮೀಜಿ, ಮಂಜುನಾಥ ಶ್ರೀಗಳು, ಬಿ.ಇ.ಒ ಪ್ರಭಾವತಿ ಪಾಟೀಲ ಇತರರಿದ್ದರು.
ಹುಕ್ಕೇರಿ : ಶಿಕ್ಷಕರ ದಿನಾಚರಣೆ ಶಿಕ್ಷಕರಿಗೆ ಸೀಮಿತವಾಗಬಾರದು, ಈ ದಿನವನ್ನು ಸಮಾಜ ಮತ್ತು ಇತರೆ ಇಲಾಖೆ ಅಧಿಕಾರಿಗಳು ಸೇರಿಕೊಂಡು ಶಿಕ್ಷಕರನ್ನು ಗೌರವಿಸಬೇಕು. ಆಗ ಮಾತ್ರ ಶಿಕ್ಷಕರ ದಿನಾಚರಣೆ ಅರ್ಥಪೂರ್ಣ ಆಚರಣೆಯಾಗುತ್ತದೆ ಎಂದು ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ಅವರು ರವಿವಾರ ಪಟ್ಟಣದ ವಿಶ್ವರಾಜ ಭವನದಲ್ಲಿ ನಡೆದ ಶಿಕ್ಷಕರ ದಿನಾಚಾರಣೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು. ಬಡವ ಬಲ್ಲಿದನಿಂದ ಶ್ರೀಮಂತ ವರ್ಗದವರು, ಉನ್ನತ ಸ್ಥಾನಮಾನ ಹೊಂದಿದವರಿಗೆಲ್ಲ ಅಕ್ಷರ ಜ್ಯಾನ ನೀಡಿದ ಶಿಕ್ಷಕರನ್ನು ನಾವು ವರ್ಷಕ್ಕೊಮ್ಮೆ ನೆನಪಿಸಿಕೊಳ್ಳುವುದಕ್ಕಿಂತ ನಿತ್ಯ ನಿರಂತರ ಸ್ಮರಿಸಿಕೊಳ್ಳಬೇಕು ಎಂದರು. ಮುಂಬರುವ ದಿನಗಳಲ್ಲಿ ಈ ಸಮಾರಂಭವನ್ನು ಶಿಕ್ಷಕರನ್ನು ಹೊರತು ಪಡಿಸಿ ನಾವೇ ಕೈಗೊಳ್ಳುವ ನಿಟ್ಟಿನಲ್ಲಿ ಚಿಂತನೆ ಮಾಡೋಣವೆಂದರು.
ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ತಾಲೂಕಿನ ಹಟ್ಟಿ ಆಲೂರ, ಕಮತನೂರ ಮತ್ತು ಶಿರಹಟ್ಟಿ ಬಿ.ಕೆ ಗ್ರಾಮಗಳಲ್ಲಿ ಇತ್ತೀಚೆಗೆ ಮಂಜೂರಿಯಾದ ಹೈಸ್ಕೂಲಗಳಿಗೆ ನಮ್ಮ ಕುಟುಂಬದ ರಾಜರಾಜೇಶ್ವರಿ ಟೃಸ್ಟನಿಂದ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ. ನಾವು ಶೈಕ್ಷಣೀಕ ಪ್ರಗತಿಗೆ ಪೂರಕ ವಾತಾವರಣ ಕಲ್ಪಿಸಬೇಕು.ಆಗ ಮಾತ್ರ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯವೆಂದರು. ಕ.ಸಾ.ಪ ಅಧ್ಯಕ್ಷ ಪ್ರಕಾಶ ಅವಲಕ್ಕಿ ಮಾತನಾಡಿದರು.
ಸಾನಿಧ್ಯ ವಹಿಸಿದ್ದ ವಿರಕ್ತಮಠದ ಶಿವಬಸವ ಸ್ವಾಮಿಜಿ, ಅಭಿನವ ಮಂಜುನಾಥ ಶ್ರೀಗಳು ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಸಾಧಕ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿದರು. ನಂತರ ಕ್ರೀಡಾಕೂಟಗಳು ಜರುಗಿದವು.
ಪುರಸಭೆ ಅಧ್ಯಕ್ಷ ಇಮ್ರಾನ ಮೋಮಿನ, ಮಹಾವೀರ ಉದ್ಯೋಗ ಸಮೂಹ ಸಂಸ್ಥೆಗಳ ಅಧ್ಯಕ್ಷ ಮಹಾವೀರ ನಿಲಜಗಿ, ಮುಖಂಡ ರವಿ ಕರಾಳೆ, ನೌಕರರ ಸಂಘದ ಅಧ್ಯಕ್ಷ ಅವಿನಾಶ ಹೊಳ್ಳೆಪ್ಪಗೋಳ, ಶಿಕ್ಷಕರಿದ್ದರು. ಬಿ.ಇ.ಒ ಪ್ರಭಾವತಿ ಪಾಟೀಲ ಸ್ವಾಗತಿಸಿದರು. ಕ್ಷೇತ್ರ ಕ್ಷೇತ್ರ ಸಮನ್ವಯಾಧಿಕಾರಿ ಎ.ಎಸ್.ಪದ್ಮನ್ನವರ ವಂದಿಸಿದರು.





