ಸ್ಥಳೀಯ ವಿದ್ಯುತ್ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಕರ್ನಾಟಕ ವಿದ್ಯುತಚ್ಛಕ್ತಿ ನಿಯಂತ್ರಣಾ ಆಯೋಗದವರ ಆನಲೈನ್ ಸಂವಾದ ಕಾರ್ಯಕ್ರಮದ ಚಿತ್ರಣ. ಅಧ್ಯಕ್ಷ ಮಹಾವೀರ ನಿಲಜಗಿ, ಉಪಾಧ್ಯಕ್ಷ ಅಜಿತ ಮುನ್ನೋಳಿ, ಸತ್ತೆಪ್ಪಾ ನಾಯಿಕ, ಕಲಗೌಡ ಪಾಟೀಲ, ಕೆಂಪಣ್ಣಾ ವಾಸೇದಾರ, ನೇಮಿನಾಥ ಖೇಮಲಾಪೂರೆ ಇತರರಿದ್ದರು.
ಹುಕ್ಕೇರಿ : ವಿದ್ಯುತ್ ಸಹಕಾರಿ ಸಂಘದಿ0ದ ಎಲಿಮುನ್ನೋಳಿ ಆಯ್.ಪಿ ಫೀಡರ ಮೇಲೆ ಬರುವ 856 ತೋಟದ ಮನೆಗಳಿಗೆ 3.54 ಕೋಟಿ ರೂ ವೆಚ್ಚದ ಸಿಂಗಲ್ ಪೇಸ್ ವಿದ್ಯುತ್ ಪರಿವರ್ತಕ ಅಳವಡಿಸಿ ನಿರಂತರ ವಿದ್ಯುತ್ ಸರಬರಾಜು ಮಾಡುವ ಕಾಮಗಾರಿ ಪೂರ್ಣಗೊಳಿಸಿ ನಂತರ ತಾಲೂಕಿನ ತೋಟದ ಮನೆಗಳ ಬೇಡಿಕೆಗೆ ಸ್ಪಂದಿಸಲು ಕರ್ನಾಟಕ ವಿದ್ಯುತಚ್ಛಕ್ತಿ ನಿಯಂತ್ರಣಾ ಆಯೋಗ ತಿಳಿಸಿತು.
ಶುಕ್ರವಾರದಂದು ಸ್ಥಳೀಯ ವಿದ್ಯುತ್ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಕರ್ನಾಟಕ ವಿದ್ಯುತಚ್ಛಕ್ತಿ ನಿಯಂತ್ರಣಾ ಆಯೋಗದವರಿಂದ ನಡೆದ ಸನ್ 2024-25 ನೇ ಸಾಲಿನ ವಾರ್ಷಿಕ ಕಾರ್ಯ ನಿರ್ವಹಣಾ ಅರ್ಜಿ ಸಂಬ0ಧ ಪರಾಮರ್ಶೆ ಆನಲೈನ್ ಸಂವಾದ ಕಾರ್ಯಕ್ರಮದಲ್ಲಿ ಆಯೋಗದ ಅಧ್ಯಕ್ಷ ಪಿ.ರವಿಕುಮಾರ ಹೇಳಿದರು.
ಸಂಘದ ರೆಸಿಡೆಂಟ್ ಇಂಜನೀಯರ ನೇಮಿನಾಥ ಖೇಮಲಾಪೂರೆ ಮಾತನಾಡಿ ತಾಲೂಕಿನಲ್ಲಿ 15833 ತೋಟದ ಮನೆಗಳಿದ್ದು ಅವುಗಳಿಗೆ ವಿಶೇಷ ಯೋಜನೆಯಡಿ ನಿರಂತರ ವಿದ್ಯುತ್ ಪೂರೈಸಲು 106 ಕೋಟಿ ರೂ ಅವಶ್ಯಕತೆ ಇದೆ ಎಂದರು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಆಯೋಗ ಮೊದಲು ಎಲಿಮುನ್ನೋಳಿ ಕಾಮಗಾರಿ ಯೋಜನೆ ಯಶಸ್ವಿಗೊಳಿಸಿದ ಬಳಿಕ ಉಳಿದ ಬೇಡಿಕೆಗಳಿಗೆ ಸ್ಪಂದಿಸಲು ಸೂಚಿಸಿತು.
ಸಂಘ ಪ್ರಸ್ತುತ ಕೈಗೊಂಡಿರುವ ಯೋಜನೆಗಳು ಸದಸ್ಯರಿಗೆ ಒದಗಿಸುತ್ತಿರುವ ವಿದ್ಯುತ್ ಸರಬರಾಜು ಕಾರ್ಯವನ್ನು ವಿವರಿಸಿದ ಅವರು ಸಂಘ ವಾರ್ಷಿಕ 100 ಟಿಸಿಗಳನ್ನು ಉತ್ಪಾದಿಸುವ ಹಾಗೂ ತಿಂಗಳಿಗೆ 100 ಟಿಸಿಗಳನ್ನು ರಿಪೇರಿ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದರು.
ಸಂಘದ ಗ್ರಾಹಕ ಸದಸ್ಯರು, ರೈತರಾದ ಸುರೇಶ ತೇರಣಿ, ಭೀಮಗೌಡ ಗಿರಿಗೌಡನವರ ಮತ್ತಿತರರು ಮಾತನಾಡಿ ಆದಷ್ಟು ಬೇಗ ತೋಟದ ನಿವಾಸಿಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಲು ಆಯೋಗದವರಿಗೆ ಮನವಿಸಿಕೊಂಡರು.

ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಉಪಾಧ್ಯಕ್ಷ ಅಜಿತ ಮುನ್ನೋಳಿ, ನಿರ್ದೇಶಕರಾದ ಕಲಗೌಡ ಪಾಟೀಲ, ಸತ್ತೆಪ್ಪಾ ನಾಯಿಕ, ಕೆಂಪಣ್ಣಾ ವಾಸೇದಾರ, ಶಿವನಗೌಡ ಮದವಾಲ, ಮಹಾದೇವ ಕ್ಷೀರಸಾಗರ, ಶ್ರೀಮಂತ ಸನ್ನಾಯಿಕ, ಬಸವಣ್ಣಿ ಲಂಕೆಪ್ಪಗೋಳ, ಸೋಮಲಿಂಗ ಪಾಟೀಲ, ಮುಖಂಡರಾದ ಗುರು ಕುಲಕರ್ಣಿ, ಶೀತಲ ಬ್ಯಾಳಿ, ಲಾಜಂ ನಾಯಿಕವಾಡಿ ಮತ್ತಿತರರಿದ್ದರು.





