ಸ್ಥಳೀಯ ವಿಶ್ವರಾಜ ಭವನದಲ್ಲಿ ನಡೆದ ವಿಶಾಲ ಹಿಂದೂ ಸಮ್ಮೇಳನವನ್ನು ಚಂದ್ರಶೇಖರ ಶಿವಾಚಾರ್ಯರು ಉದ್ಘಾಟಿಸಿದರು. ಶಿವಬಸವ ಮಹಾಸ್ವಾಮೀಜಿ, ಶರಣೇಗೌಡರು, ರಾಮಚಂದ್ರ ಜೋಶಿ, ಪೃಥ್ವಿ ಕತ್ತಿ, ಮಹಾವೀರ ನಿಲಜಗಿ ಇತರರಿದ್ದರು.
ಸಾಮರಸ್ಯ, ಏಕರೂಪ ನಾಗರಿಕ ಸಂಹಿತೆ, ಪರಿಸರ ಸಂರಕ್ಷಣೆ, ಸ್ವದೇಶಿ ವಸ್ತುಗಳ ಬಳಕೆ ಮತ್ತು ಅವಿಭಕ್ತ ಕುಟುಂಬಗಳನ್ನು ಉಳಿಸುವ ಪರಿವರ್ತನೆಯ ಪಂಚಸೂತ್ರಗಳನ್ನು ಹಿಂದೂ ಸಮಾಜ ಅಳವಡಿಸಿಕೊಳ್ಳಬೇಕಾಗಿದೆ ಯುವ ಭಾರತ ರಾಜ್ಯ ಪ್ರಮುಖ ಶರಣೇಗೌಡರು ಹೇಳಿದರು.
ಅವರು ಶನಿವಾರದಂದು ಸ್ಥಳೀಯ ವಿಶ್ವರಾಜ ಸಭಾಭವನದಲ್ಲಿ ಹುಕ್ಕೇರಿ ಹೋಬಳಿಯ ವಿಶಾಲ ಹಿಂದೂ ಸಂಚಲನಾ ಸಮಿತಿಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶಾಲ ಹಿಂದೂ ಸಮ್ಮೇಳನದ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು. ಹಿಂದೂ ಸಮಾಜ ಉಳಿಸಿ ಬೆಳೆಸಲು ಮತ್ತು ಸಂಘಟನೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖ ಆಗಿದೆ. ಸನಾತನ ಸಂಸ್ಕೃತಿ ಉಳಿಸಿ ಬೆಳಸಬೇಕಾಗಿದೆ. ನಮ್ಮನ್ನು ಒಡೆದಾಳುವ ನೀತಿ ಮೂಲಕ ನಮ್ಮ ಒಗ್ಗಟ್ಟು ಮುರಿಯುತ್ತಿದ್ದಾರೆ ಎಂದರು.

ವಿದೇಶಿಗರು ನಮ್ಮ ಇತಿಹಾಸವನ್ನು ತಿರುಚಿ ಭಾರತವನ್ನು ವಾಸ್ಕೋಡಿಗಾಮಾ ಕಂಡು ಹಿಡಿದನು ಎಂದು ಹೇಳಿರುವರು. ಆದರೆ ಅವನು ಭಾರತಕ್ಕೆ ಬರುವ ಮುಂಚೆಯೇ ಅರಬ್, ಚೀನಾ, ಥೈಲ್ಯಾಂಡ್, ಇಂಡೀನೇಷಿಯಾ ಮತ್ತು ಜಪಾನ ಸೇರಿದಂತೆ ಹಲವಾರು ದೇಶಗಳಲ್ಲಿ ನಮ್ಮ ದೇಶದ ಸಂಸ್ಕೃತಿ, ಧರ್ಮ ಪಸರಿಸಿತ್ತು ಎಂಬುದಕ್ಕೆ ಅನೇಕ ನಿದರ್ಶನಗಳಿವೆ. ನಮ್ಮ ದೇಶದ ಸಂಸ್ಕೃತಿ ಅನಾದಿ ಕಾಲದಿಂದ ಜಗತ್ತಿನಲ್ಲಿ ಹರಡಿತ್ತು. ಆದರೆ ಅದನ್ನು ಮರೆಮಾಚಿ ಪಾಶ್ಚಾತ್ಯ ಮತ್ತು ಮೊಘಲರ ಇತಿಹಾಸ ಪರಿಚಯಿಸಿದ್ದು ವಿಷಾದಕರವೆಂದರು.
ನಮ್ಮ ಸಂಸ್ಕೃತಿ ಧರ್ಮದ ಮೇಲೆ ವಿದೇಶಿಗರ ಹಲವಾರು ಬಾರಿ ದಾಳಿ ಮಾಡಿದರೂ ನಮ್ಮ ಹಿಂದೂ ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿಕೊಂಡಿದ್ದು ಸ್ಮರಣೀಯ. ಆದರೆ ಇತ್ತೀಚಿನ ದಿನಗಳಲ್ಲಿ ಹಿಂದೂತ್ವ ಅಳಿಸಲು ಜಾತಿ ತಾರತಮ್ಯ, ನಮ್ಮವರನ್ನೇ ನಮ್ಮ ಮೇಲೆ ಎತ್ತಿ ಕಟ್ಟುವ ವಿಚಿತ್ರ ಪರಿಸ್ಥಿತಿಯನ್ನು ಕೆಲವರು ಮಾಡುತ್ತಿದ್ದಾರೆ. ಅದಕ್ಕಾಗಿ ನಮ್ಮ ಸ್ವಾಭಿಮಾನದ ಮೇಲೆ ಆಗುವ ದಾಳಿ ಹಿಮ್ಮೆಟ್ಟಿಸುವ ಮೂಲಕ ನಾವೆಲ್ಲರೂ ಹಿಂದೂಗಳಾಗಿ ಒಗ್ಗಟ್ಟಿನಿಂದ ಬದುಕೋಣ. ಕಾರಣ ಹಿರಿಯರ ಜತೆಗೆ ಯುವಕರು ಈ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ದೇಶದ ಉಳಿವಿಗೆ ಶ್ರಮಿಸುವಂತೆ ಕರೆ ನೀಡಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಕೀಲ ರಾಮಚಂದ್ರ ಜೋಶಿ ಅವರು ಮಾತನಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶತಮಾನೋತ್ಸವ ನಿಮಿತ್ಯ ಹಿಂದೂ ಸಂಘಟನೆ ಹಾಗೂ ಸ್ವಾಭಿಮಾನಿ ಬದುಕು ಕುರಿತು ದೇಶದ ತುಂಬೆಲ್ಲ ಹಿಂದೂ ಜನ ಜಾಗೃತಿ ಆಯೋಜಿಸಲಾಗುತ್ತಿದೆ ಎಂದರು.
ಸ್ಥಳೀಯ ಅಡವಿಸಿದ್ದೇಶ್ವರ ಮಠದಿಂದ ಕುಂಭಕಲಸಗಳೊ0ದಿಗೆ ಸಮ್ಮೇಳನದ ಶೋಭಾಯಾತ್ರೆ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ವಿಶ್ವರಾಜ ಸಭಾಭವನ ತಲುಪಿತು. ಅತಿಥಿಗಳನ್ನು ಸನ್ಮಾನಿಸಿದರು.

ಚಂದ್ರಶೇಖರ ಶಿವಾಚಾರ್ಯರು, ಶಿವಬಸವ ಮಹಾಸ್ವಾಮಿಗಳು, ಉದ್ಯಮಿ ಪ್ರಥ್ವಿ ಕತ್ತಿ ಇತರರಿದ್ದರು. ಅತಿಥಿಗಳನ್ನು ಸತ್ತೆಪ್ಪಾ ನಾಯಿಕ ಪರಿಚಯಿಸಿದರು. ಸಂಚಾಲನಾ ಸಮಿತಿ ಉಪಾಧ್ಯಕ್ಷ ಮಹಾವೀರ ನಿಲಜಗಿ ಸ್ವಾಗತಿಸಿದರು. ಸಂಜೀವ ಮುತಾಲಿಕ ನಿರೂಪಿಸಿದರು. ಅನಿಲ ಶೆಟ್ಟಿ ವಂದಿಸಿದರು.





