ಸ್ಥಳೀಯ ಕೋರ್ಟ ಆವರಣದಲ್ಲಿ ನಡೆದ ವಕೀಲರ ದಿನಾಚರಣೆಯನ್ನು ವಿಶ್ರಾಂತ ನ್ಯಾಯಾಧೀಶ ಎನ್.ಕೆ.ಸುಧೀಂದ್ರರಾವ ಉದ್ಘಾಟಿಸಿದರು. ನ್ಯಾಯಾಧೀಶರು, ನಿವೃತ್ತ ನ್ಯಾಯಾಧೀಶರು, ವಕೀಲರ ಸಂಘದ ಪದಾಧಿಕಾರಿಗಳಿದ್ದರು.
ಹುಕ್ಕೇರಿ: ವಕೀಲ ವೃತ್ತಿಯಲ್ಲಿ ಹಣ ಗಳಿಸಬಹುದು, ಆದರೆ ಅವಶ್ಯಕತೆಗಿಂತ ಹೆಚ್ಚಿಗೆ ಗಳಿಸಿದ ಹಣ ನಮಗಾಗುವುದಿಲ್ಲ ಅದು ನಿರರ್ಥಕ ಎಂಬ ಸತ್ಯ ನಮಗೆ ಗೊತ್ತಿರಬೇಕೆಂದು ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಮತ್ತು ರಾಜ್ಯ ಪೋಲಿಸ್ ಮೇಲ್ಮನವಿ ದೂರು ಪ್ರಾಧಿಕಾರ ಅಧ್ಯಕ್ಷರಾದ ಎನ್.ಕೆ.ಸುಧೀಂದ್ರರಾವ ಹೇಳಿದರು.
ಅವರು ಬುಧವಾರದಂದು ಸ್ಥಳೀಯ ವಕೀಲರ ಸಂಘದ ಆಶ್ರಯದಲ್ಲಿ ನಡೆದ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ವಕೀಲ ವೃತ್ತಿಯ ಘನತೆ ಗೌರವ ಅದನ್ನು ನಡೆಸುವವರೆಗೆ ಗೊತ್ತಾಗುವುದಿಲ್ಲ. ಅದರಿಂದ ಹೊರಬಂದು ಅದರ ಕುರಿತು ಗಮನಿಸಿದಾಗ ಗೊತ್ತಾಗುತ್ತದೆ ಎಂದರು. ವೃತ್ತಿಯಲ್ಲಿ ಗೆಲುವು ಮುಖ್ಯವಲ್ಲ ಕಕ್ಷಿಗಾರರ ಪರವಾಗಿ ಚೆನ್ನಾಗಿ ವಾದ ಮಂಡನೆ ಮಾಡಬೇಕು. ಗಳಿಕೆಯ ಸಿರಿವಂತಿಕೆಗಿಂತ ಜ್ಞಾನ ಸಂಪತ್ತು ನಿಜವಾದ ಶ್ರೀಮಂತಿಕೆ ಎಂದು ತಿಳಿಸಿದರು. ಸತತ ಅಧ್ಯಯನ, ಹೊಸತನವನ್ನು ಅಭ್ಯಸಿಸಬೇಕು. ಆಗ ಮಾತ್ರ ಪರಿಪಕ್ವ ವಕೀಲರಾಗಲು ಸಾಧ್ಯವೆಂದರು.
ಅವಜೀಕರ ಆಶ್ರಮದ ಮಂಜುನಾಥ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿ ರಾಷ್ಟ್ರದ ಮೊದಲ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ ಅವರ ಕೊಡುಗೆ ವಕೀಲರ ದಿನಾಚರಣೆ ಆಗಿದೆ. ಸ್ವಾತಂತ್ರ್ಯ ದೊರಕಲು ವಕೀಲರ ಕೊಡುಗೆ ಅಪಾರ. ಅದರ ಜತೆಗೆ ಸಂವಿಧಾನ ರಚನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದ ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ವಕೀಲ ವೃತ್ತಿಯನ್ನೇ ಆಯ್ಕೆ ಮಾಡಿಕೊಂಡಿದ್ದರು ಎಂಬುದು ಯುವ ವಕೀಲರು ಅರಿತುಕೊಳ್ಳಬೇಕು ಎಂದರು.
ಹಿರಿಯ ನ್ಯಾಯವಾದಿ ರಾಮಚಂದ್ರ ಜೋಶಿ, ವಕೀಲ ಬಸವರಾಜ ಕೋರಿಮಠ ಮಾತನಾಡಿ ವಕೀಲರ ವೃತ್ತಿ ಉಧಾತವಾದದ್ದು. ಪ್ರತಿಫಲ ಅಪೇಕ್ಷಿಸದೇ ನ್ಯಾಯ ಕೊಡಿಸಲು ಸತತ ಶ್ರಮ ವಹಿಸುವವ ನಿಜವಾದ ವಕೀಲ. ದುಡ್ಡು, ಆಸ್ತಿ ಗಳಿಕೆಗಿಂತ ಸಮಾಜಕ್ಕೆ ಮಾರ್ಗರ್ದಶಕರಾಗಿ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದರು. ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅತಿಥಿಗಳನ್ನು ಸತ್ಕರಿಸಿದರು. ಬಿ.ಎಮ್.ಜಿನರಾಳೆ ಅತಿಥಿಗಳನ್ನು ಪರಿಚಯಿಸಿದರು.

ಸ್ಥಳೀಯ ಕೋರ್ಟ ಆವರಣದಲ್ಲಿ ನಡೆದ ವಕೀಲರ ದಿನಾಚರಣೆಯಲ್ಲಿ ವಿಶ್ರಾಂತ ನ್ಯಾಯಾಧೀಶರನ್ನು ಸನಮಾನಿಸಿದರು. ವಕೀಲರ ಸಂಘದ ಪದಾಧಿಕಾರಿಗಳಿದ್ದರು.
ನಿವೃತ್ತ ನ್ಯಾಯಾಧೀಶರಾದ ವ್ಹಿ.ವ್ಹಿ.ಮಲ್ಲಾಪೂರೆ, ಎಂ.ಎಂ.ಪಾಟೀಲ, ಕೆ.ಎಂ.ಚೂರಿಖಾನ, ಪಿ.ಎಸ್.ಬಾಳಿಕಾಯಿ, ಹುಕ್ಕೇರಿ ಹಿರಿಯ ನ್ಯಾಯಾಧೀಶ ರಾಜಣ್ಣ ಸಂಕಣ್ಣವರ, ಸಿವ್ಹಿಲ್ ನ್ಯಾಯಾಧೀಶ ಆದಿತ್ಯ ಕಲಾಲ, ಬೆಂಗಳೂರು ಸಿಟಿ ಸಿವ್ಹಿಲ್ ಮತ್ತು ಸೆಷನ್ ನ್ಯಾಯಾಧೀಶ ಜಿ.ಜಿ.ಬದಾಮಿ, ನರಗುಂದ ನ್ಯಾಯಾಧೀಶ ಜೆ.ಎಸ್.ಚೌಗಲಾ, ಸರಕಾರಿ ಅಭಿಯೋಜಕರಾದ ಆರ್.ಎ.ಗಡಕರಿ, ಎಂ.ಕೆ.ಪಾಟೀಲ, ಸಹಕಾರ ಇಲಾಖೆ ಜಂಟಿ ನಿರ್ದೇಶಕಿ ವಿದ್ಯಾ ಹೊನಶೆಟ್ಟಿ, ಪಿ.ಬಿ.ಗಡಕರಿ ವಕೀಲರ ಸಂಘದ ಪದಾಧಿಕಾರಿಗಳು ಮತ್ತಿತರರಿದ್ದರು. ವಕೀಲರಾದ ಪ್ರಕಾಶ ಪಾಟೀಲ ಪ್ರಾರ್ಥಿಸಿದರು, ಬಿ.ಎಂ.ಜಿನರಾಳಿ ಅತಿಥಿಗಳನ್ನು ಪರಿಚಯಿಸಿದರು. ಎಸ್.ಜಿ.ನದಾಫ ಸ್ವಾಗತಿಸಿದರು. ಕೆ.ಪಿ.ಶಿರಗಾಂವಕರ ಮತ್ತು ಶಿವಲಿಂಗ ತೇಲಿ ನಿರೂಪಿಸಿದರು. ಆಶಾ ಸಿಂಗಾಡಿ ವಂದಿಸಿದರು.





