ಸ್ಥಳೀಯ ತಾಲೂಕ ಪಂಚಾಯತಿ ಜಮಾ ಬಂದಿ ಕಾರ್ಯಕ್ರಮದಲ್ಲಿ ಬಿ.ಎಸ್. ಅಡವಿಮಠ ಮಾತನಾಡುತ್ತಿರುವುದು. ತಾ.ಪಂ ಇ.ಒ ಟಿ.ಆರ್.ಮಲ್ಲಾಡದ ಇದ್ದರು.
ಹುಕ್ಕೇರಿ : ತಾಲೂಕ ಪಂಚಾಯತಿ ಇ.ಒ ಇಲಾಖಾವಾರು ಖರ್ಚು ವೆಚ್ಚ ಪರಿಶೀಲಿಸಿ ಸಹಿ ಮಾಡಬೇಕು. ಅಧಿಕಾರಿಗಳು ತಂದಿಟ್ಟ ಲೆಕ್ಕ ಪತ್ರ ವರದಿಗೆ ಕಣ್ಣು ಮುಚ್ಚಿ ಸಹಿ ಹಾಕಿದ್ದು ಸಮಂಜಸವಲ್ಲ. ಇನ್ನೂ ಮುಂದೆ ಇದೇ ರೀತಿ ಆದಲ್ಲಿ ನಿಮ್ಮ ಮೇಲೆ ಕ್ರಮಕ್ಕೆ ಶಿಪಾರಸ್ಸು ಮಾಡಬೇಕಾಗುತ್ತದೆ ಎಂದು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಸ್.ಅಡವಿಮಠ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಬುಧವಾರದಂದು ಸ್ಥಳೀಯ ತಾ.ಪಂ ಸನ್ 2024-25ನೇ ಸಾಲಿನ ಜಮಾ ಬಂದಿ ಕಾರ್ಯಕ್ರಮದಲ್ಲಿ ಈ ಘಟನೆ ನಡೆಯಿತು. ತಾಲೂಕ ಪಂಚಾಯತಿ ಆಡಳಿತ ವಿಭಾಗದವರೇ ತಪ್ಪು ಮಾಡಿದಲ್ಲಿ ಉಳಿದ ಇಲಾಖೆಗಳ ಮೇಲೆ ತಾ.ಪಂ ಇ.ಒ ಅವರು ಕ್ರಮ ಕೈಗೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ಒಂದು ಲಕ್ಷ ರೂ ಮೇಲ್ಪಟ್ಟು ಖರ್ಚು ತೋರಿಸಲು ಟೆಂಡರ್ ಕರೆಯಬೇಕಾಗುತ್ತದೆ ಎಂದು 400 ರಿಂದ 500 ರೂ ಕಡಿಮೆ ಲೆಕ್ಕ ತೋರಿಸಿ ಸ್ವತಃ ರಿಪೇರಿ ಮಾಡಿಸಿದ್ದಾಗಿ ಮಂಜೂರಾತಿ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದರು. ತಾ.ಪಂ ಸ್ವತಃ ರಿಪೇರಿ ಮಾಡಿಸಿ ಖರ್ಚು ಮಂಜೂರಾತಿ ನೀಡಲು ಅವಕಾಶ ಇಲ್ಲ. ಕ್ರಿಯಾಯೋಜನೆ ತಯಾರಿಸಿ ಟೆಂಡರ್ ಕರೆದು ರಿಪೇರಿ ಮತ್ತು ಖರೀದಿ ಮಾಡಬೇಕು. ಮನಸ್ಸಿಗೆ ಬಂದAಗೆ ಖರ್ಚು ವೆಚ್ಚ ತೋರಿಸಲು ಸ್ವಂತ ವ್ಯವಹಾರ ಅಲ್ಲ ಎಂದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂದಿನ ಸಭೆಯಲ್ಲಿ ಪ್ರಮುಖವಾಗಿ ಆರೋಗ್ಯ ಮತ್ತು ಜಿಲ್ಲಾ ಪಂಚಾಯತ ಇಂಜನೀಯರಿoಗ್ ವಿಭಾಗ ಮತ್ತು ಶಿಶು ಅಭಿವೃದ್ಧಿ ಇಲಾಖೆಯಲ್ಲಿ ಹಲವಾರು ನ್ಯೂನತೆಗಳು ಕಂಡು ಬಂದಿವೆ. ಇವುಗಳಿಗೆ ಸ್ಪಷ್ಟೀಕರಣ ಕೇಳಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಶಾಲಾ ರಿಪೇರಿ ಕಾಮಗಾರಿ ಕಳಪೆಯಾಗಿದ್ದು ಅವುಗಳ ಪರಿಶೀಲನೆ ಅವಶ್ಯವಾಗಿ ಮಾಡಬೇಕಾಗಿದೆ. ತಾಲೂಕ ಪಂಚಾಯತಿ ವಾಣಿಜ್ಯ ಮಳಿಗೆ ಗುತ್ತಿಗೆದಾರರ ಅವಧಿ ಪೂರ್ಣಗೊಂಡರು ಮರು ಟೆಂಡರ್ ಕರೆಯದೇ ಅವರನ್ನೇ ಮುಂದುವರಿಸುವ ಮೂಲಕ ಸರಕಾರಕ್ಕೆ ಆರ್ಥಿಕ ಹಾನಿಯಾಗಿದೆ ಎಂದು ಆಕ್ಷೇಪಿಸಿದರು. ತಕ್ಷಣ ಟೆಂಡರ್ ಕರೆದು ಬಾಡಿಗೆ ಹೆಚ್ಚಿಸಿ ಆದಾಯ ಬರುವಂತೆ ಮಾಡಲು ನಿರ್ದೇಶಿಸಿದರು.
ತಾ. ಪಂ ಇ.ಒ ಟಿ.ಆರ್.ಮಲ್ಲಾಡದ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಶಶಿಕಾಂತ ವಂದಾಳೆ, ಪ್ರಭಾವತಿ ಪಾಟೀಲ, ಡಾ. ಉದಯ ಕುಡಚಿ, ಆರ್.ಬಿ.ನಾಯ್ಕರ, ಸವಿತಾ ಹಲಕಿ ಮತ್ತಿತರರಿದ್ದರು. ವ್ಯವಸ್ಥಾಪಕ ಅವಿನಾಶ ಹೊಳೆಪ್ಪಗೋಳ ಸ್ವಾಗತಿಸಿ, ನಿರೂಪಿಸಿದರು. ಪ್ರವೀಣ ಮುನ್ನೋಳಿ ವಂದಿಸಿದರು.

- ಜಿಲ್ಲಾ ಪಂಚಾಯತ ಇಂಜನೀಯರಿoಗ್ ವಿಭಾಗದ 19 ಕಾಮಗಾರಿಗಳ ಲೆಕ್ಕ ಪತ್ರ ಸರಿಯಾಗಿಲ್ಲ. ಅದಕ್ಕೆ ಸಮಂಜಸ ವರದಿ ಸಲ್ಲಿಸಬೇಕು. ಇಲ್ಲವಾದರೇ ಆ ಮೊತ್ತವನ್ನು ಮರು ವಸೂಲಿಗೆ ಕ್ರಮ ಕೈಗೊಳ್ಳಬೇಕಾಗುತ್ತದೆ.
- ಕೊರತೆ ಗಮನಿಸದೇ ಅವಶ್ಯಕತೆ ಹೊರತು ಪಡಿಸಿ ಕ್ರಿಯಾ ಯೋಜನೆ ತಯಾರಿಸದೇ ಖರೀದಿ ಅಥವಾ ರಿಪೇರಿಗೆ ಅವಕಾಶ ಇಲ್ಲ. ಆದರೆ ಆರೋಗ್ಯ ಇಲಾಖೆ ಮತ್ತು ತಾಲೂಕ ಪಂಚಾಯತಿಯವರು ಇಂತಹ ಕೃತ್ಯ ಮಾಡಿದ್ದಾರೆ. ಬಿ.ಎಸ್.ಅಡವಿಮಠ ಉಪ ಕಾರ್ಯದರ್ಶಿಗಳು ಜಿ.ಪಂ ಬೆಳಗಾವಿ





