ಸ್ಥಳೀಯ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಸಿಮೆಂಟ್ ತಯಾರಿಕಾ ಘಟಕವನ್ನು ಸಚಿವ ಸತೀಶ ಜಾರಕಿಹೊಳಿ ವೀಕ್ಷಿಸುತ್ತಿರುವುದು. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿದ್ದರು
ಹುಕ್ಕೇರಿ : ಸ್ಥಳೀಯ ವಿದ್ಯುತ್ ಸಹಕಾರಿ ಸಂಘದಲ್ಲಿ 30 ವರ್ಷಗಳ ಆಡಳಿತ ಹಾಗೂ 3 ತಿಂಗಳ ನಮ್ಮ ಆಡಳಿತವನ್ನು ಗಮನಿಸಿ ಸಂಘದ ಚುನಾವಣೆಯಲ್ಲಿ ನಮ್ಮನ್ನು ಮತದಾರರು ಬೆಂಬಲಿಸುತ್ತಾರೆಂಬ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ವ್ಯಕ್ತಪಡಿಸಿದರು.
ಮಂಗಳವಾರದಂದು ಪಟ್ಟಣದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಕ್ಕೆ ಭೇಟಿ ನೀಡಿದ ಬಳಿಕ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಚುನಾವಣೆಗಿಂತ ಹೊಂದಾಣಿಕೆ ಆಗಿ ಅವಿರೋಧ ಆಯ್ಕೆಯಾಗುತ್ತದೆ ಎಂಬುದು ಜನಾಭಿಪ್ರಾಯವಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು ನಾವಂತೂ ಚುನಾವಣೆ ಎದುರಿಸಲು ಸಜ್ಜಾಗಿದ್ದೇವೆ. ಹೊಂದಾಣಿಕೆ ಎಂಬುದು ನಮಗೆ ಗೊತ್ತಿಲ್ಲ. ಆದರೆ ಮುಂದಿನ ಭವಿಷ್ಯ ನಾನೇನು ಹೇಳಲಿ ಎಂದರು.
ಇದಕ್ಕೂ ಮೊದಲು ವಿದ್ಯುತ್ ಸಹಕಾರಿ ಸಂಘದಲ್ಲಿ ನಿರ್ಮಾಣವಾಗುವ ಸಿಮೆಂಟ್ ಕಂಬಗಳ ತಯಾರಿಕಾ ಘಟಕ ವೀಕ್ಷಿಸಿ ಮಾತನಾಡಿದ ಸಚಿವರು ಸಿಮೆಂಟ್ ಕಂಬಗಳ ನಿರ್ಮಾಣ ಹೆಚ್ಚಿಸಲು ಪ್ರಯತ್ನಿಸಿ, ರೈತರಿಗೆ ಮತ್ತು ಗ್ರಾಹಕರಿಗೆ ನಿಗದಿತ ಸಮಯದೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಇದರಿಂದ ಅನುಕೂಲವಾಗುತ್ತದೆ ಎಂದು ತಿಳಿಸಿದರು. ನಂತರ ನಡೆದ ಜನ ಸಂಪರ್ಕ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಸಾರ್ವಜನಿಕರ ಅಹವಾಲು ಆಲಿಸಿದರು. ತಾಲೂಕಾ ಭೂಮಾಪನ ಕಚೇರಿಯಲ್ಲಿ ರೈತರ ಕೆಲಸಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಜಮೀನು ಸರ್ವೇ ಮಾಡಲು ಅರ್ಜಿ ಸಲ್ಲಿಸಿ ಹಲವಾರು ತಿಂಗಳು ಕಳೆದರೂ ಜಮೀನು ಸರ್ವೇ ಮಾಡಲು ಬರುತ್ತಿಲ್ಲ. ಸರ್ವೇ ಅಧಿಕಾರಿಗಳನ್ನು ವಿಚಾರಿಸಿದಾಗ, ನಿಮ್ಮ ದಾಖಲಾತಿಗಳು ಕಳೆದು ಹೋಗಿವೆ. ಮತ್ತೇ ಅರ್ಜಿ ಸಲ್ಲಿಸಿ ಎಂದು ಅಧಿಕಾರಿಗಳು ಪೀಡಿಸುತ್ತಿದ್ದಾರೆಂದು ಸಚಿವರ ಬಳಿ ಸಂಕಟ ತೋಡಿಕೊಂಡರು.
ಬೀದಿ ವ್ಯಾಪಾರಸ್ಥರಿಗೆ ವ್ಯಾಪಾರ ವಹಿವಾಟು ನಡೆಸಲು ಮಳಿಗೆ ಇಲ್ಲದ ಕಾರಣ ಪುಟ್ ಪಾತ್‌ಗಳಲ್ಲಿ ವ್ಯಾಪಾರ ಮಾಬೇಕಾಗಿದೆ ಕಾರಣ ಹಳೆ ತಹಶೀಲ್ದಾರ ಕಚೇರಿಯ ಮುಂಭಾಗದಲ್ಲಿ ಮಳಿಗೆಗಳನ್ನು ನಿರ್ಮಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುವಂತೆ ವಿನಂತಿಸಿಕೊಂಡರು.
ಸಚಿವ ಸತೀಶ ಜಾರಕಿಹೊಳಿ ಮಾತನಾಡಿ ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸಕಾಲಕ್ಕೆ ಕೆಲಸಗಳನ್ನು ಮಾಡಿ ಕೊಡಬೇಕು. ತಾಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ್ದ ಜನರ ಸಮಸ್ಯೆ ಕೇಳಿದ ಬಳಿಕ ರಸ್ತೆ, ಕುಡಿಯುವ ನೀರು, ಚರಂಡಿ ನಿರ್ಮಾಣ, ಬೀದಿ ದೀಪಗಳ ಕುರಿತು ಜನರ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ರವದಿ, ಸಂಗಮ್ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಜಯಗೌಡ ಪಾಟೀಲ ಮತ್ತು ನಿರ್ದೇಶಕರು, ಮುಖಂಡರಾದ ರವಿ ಕರಾಳೆ, ಗುರು ಪಾಟೀಲ, ಚಂದ್ರಶೇಖರ ಪಾಟೀಲ, ಚಂದು ಗಂಗನ್ನವರ, ಶಾನುಲ್ ತಹಶೀಲ್ದಾರ, ರಿಷಭ್ ಪಾಟೀಲ, ಬಸವರಾಜ ಪಾಟೀಲ, ಬಂಡು ಹತನೂರೆ, ಅಮರ ನಲವಡೆ, ಅಜಿತ ಕರಜಗಿ, ಮೌನೇಶ್ ಪೋತದಾರ, ರಾಜು ಸಿದ್ನಾಳ, ಅನೀಲ ಪಾಟೀಲ, ಬಸವರಾಜ ಕೋಳಿ, ಮಹೇಶ ಹಟ್ಟಿಹೊಳಿ, ಕಿರಣ ರಜಪೂತ, ಅರುಣ ಹುದ್ದಾರ, ಭೀಮಗೌಡ ಗಿರಿಗೌಡನವರ, ದಯಾನಂದ ಪಾಟೀಲ, ನ್ಯಾಯವಾದಿ ಭೀಮಸೇನ ಬಾಗಿ, ವಿದ್ಯುತ್ ಸಹಕಾರಿ ಸಂಘದ ವ್ಯಸ್ಥಾಪಕ ನಿರ್ದೇಶಕರಾದ ರವೀಂದ್ರ ಪಾಟೀಲ, ವ್ಯವಸ್ಥಾಪಕ ಡಿ.ಎಸ್, ನಾಯಿಕ, ರೆಸಿಡೆಂಟ್ ಇಂಜನೀಯರ್ ನೇಮಿನಾಥ ಖೇಮಲಾಪೂರೆ ಮತ್ತಿತರರಿದ್ದರು.






