ಹಿಂದೂ ಧರ್ಮದ ಮೂಲ ನಂಬಿಕೆಗಳನ್ನು ವಿರೋಧಿಸುವವರು ಬಸವ ತಾಲಿಬಾನಿಗಳು: ಕನೇರಿ ಶ್ರೀಗಳು

ಹುಕ್ಕೇರಿ: ಹಿಂದೂ ಧರ್ಮದ ಮೂಲ ನಂಬಿಕೆಗಳು ಮತ್ತು ಧಾರ್ಮಿಕ ಭಾವನೆಗಳನ್ನು ಸಂಕುಚಿತ ಮನೋಭಾವದಿಂದ ತೆಗಳುವ ಅಥವಾ ವಿರೋಧಿಸುವ ಕೆಲ ಸ್ವಾಮೀಜಿಗಳನ್ನು ಬಸವ ತಾಲಿಬಾನಿಗಳೆಂದು ಹೇಳಬೇಕಾಗುತ್ತದೆ ಎಂದು ಕೊಲ್ಲಾಪುರ ಬಳಿಯ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

         ಅವರು ಬುಧವಾರ ಸಂಜೆ ಪಟ್ಟಣದ ಹೊರವಲಯದ ಅವಜೀಕರ ಆಶ್ರಮದಲ್ಲಿ ಅವಜೀಕರ ಮಹಾರಾಜರ 119ನೇ ಜನ್ಮೋತ್ಸವದ ಅಂಗವಾಗಿ ಅವಜೀಕರ ಮಹಾರಾಜರ ಕರ್ತೃ ಗದ್ದುಗೆಗೆ ಮತ್ತು ಮೂರ್ತಿಗೆ ಪೂಜೆ ಸಲ್ಲಿಸಿ ಮಾತನಾಡಿದರು.

       ಬಸವ ಪರಂಪರೆ ಪ್ರತಿಪಾದಿಸುವವರಲ್ಲಿ ಶೇ. ಮೂರರಷ್ಟು ಇರುವ ಸ್ವಾಮೀಜಿಗಳು ಬಸವ ತತ್ವದ ಸಾರವನ್ನೆ ಹಾಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಬಸವಣ್ಣನವರು ಎಲ್ಲಿಯೂ ಹಿಂದೂ ಧರ್ಮದ ವಿರೋಧ ಮಾಡಿಲ್ಲ. ಮತ್ತು ಬೇರೆ ಧರ್ಮದ ಬಗ್ಗೆ ಕೀಳಾಗಿ ಕಂಡಿಲ್ಲ. ಕೆಲವೇ ಕೆಲ ಸ್ವಾಮೀಜಿಗಳು ವಚನ ಸಾಹಿತ್ಯವೇ ಮೇಲು ಎಂಬಂತೆ, ಇಷ್ಟಲಿಂಗವೇ ಅಂತಿಮ ಎಂಬಿತ್ಯಾದಿ ಹೇಳಿಕೆ ನೀಡುತ್ತ ಜನರಿಗೆ ಗುಡಿ ಗುಂಡಾರುಗಳಿಗೆ ಹೋಗಬೇಡಿ ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.  ಕೆಲವೊಂದು ಸ್ವಾಮೀಜಿಗಳು ಹಗಲೊತ್ತು ಒಂದು ವೇಷ, ರಾತ್ರಿ ಇನ್ನೊಂದು ವೇಷ ಧರಿಸುತ್ತಾರೆಂದು ಕುಹಕ ಮಾತು ಆಡಿದರು.

        ನಮ್ಮನ್ನು ಟಾರ್ಗೆಟ್ ಮಾಡ್ತಾ ಇದ್ದಾರೆ?: ಯಾವುದೇ ಅಹಿತಕರ ಘಟನೆ ನಡೆಯದೇ ತಮ್ಮ ಮೇಲೆ ಜಿಲ್ಲೆಯ ಪ್ರವೇಶ ನಿರ್ಬಂಧ ಹೇರಿರುವುದು, ರೌಡಿ ಶೀಟರ್ ತರಹ ನೋಡಿದಂತೆ. ರಾಜ್ಯದ ಮುಖ್ಯಮಂತ್ರಿ ಮತ್ತು ವಿಜಯಪುರ ಮಂತ್ರಿಯೊಬ್ಬರು ಲಿಂಗಾಯತ ಧರ್ಮ ಮುಗಿಸಲಿಕ್ಕೆ ಹೊರಟಂತಿದೆ ಎಂದ ಅವರು, ಆ ಕಾರಣಕ್ಕೆ  ತಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದರು.

ಪೊಲೀಸ್ ಬಂದೋಬಸ್ತ್: ಸ್ವಾಮೀಜಿಗಳು ಆಶ್ರಮಕ್ಕೆ ಬರುವ ಮಾಹಿತಿ ಹಿನ್ನಲೆಯಲ್ಲಿ ಮುಂಚಿತವಾಗಿ ಪಿಐ ಮಹಾಂತೇಶ ಬಸ್ಸಾಪುರ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.

       ಆಶ್ರಮದ ಅಧ್ಯಕ್ಷ ಮಲ್ಲಪ್ಪ ಮಹಾರಾಜರು, ಅಭಿನವ ಮಂಜುನಾಥ ಸ್ವಾಮೀಜಿ, ಬೆಳವಿ ಸಿದ್ಧಾರೂಢ ಮಠದ ಮೃತ್ಯುಂಜಯ ಸ್ವಾಮೀಜಿ, ಹಿರಿಯ ವಕೀಲ ಆರ್.ವಿ.ಜೋಶಿ, ವಿಶ್ವಕರ್ಮ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಬಿ.ಬಡಿಗೇರ್ ಇತರರಿದ್ದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept