ಹುಕ್ಕೇರಿಯಿಂದ ಮದಮಕ್ಕನಾಳ ಮತ್ತು ಯರನಾಳ ಸಂಪರ್ಕ ರಸ್ತೆ ಬದಿಯ ಭಾವಿಗಳಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ನಿಖಿಲ ಕತ್ತಿ ಭೂಮಿ ಪೂಜೆ ನೆರವೇರಿಸಿದರು. ಚಂದ್ರಶೇಖರ ಪಾಟೀಲ, ಎ.ಕೆ.ಪಾಟೀಲ, ಗುರುರಾಜ ಕುಲಕರ್ಣಿ, ಆನಂದ ಗಂಧ ಇತರರಿದ್ದರು
ಹುಕ್ಕೇರಿ: 40 ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಂದವರಿಗಿಂತ ಹೆಚ್ಚಿನ ಅನುಭವ ಕೇವಲ ಎರಡು ವರ್ಷಗಳಲ್ಲಿ ನನಗೆ ಬಂದಿದೆ. ನಾನು ಶಾಸಕನಾಗಿ ಎರಡು ವರ್ಷ ಆಗಿದೆ. ಆದರೆ ನನ್ನ ನಂಬಿಕೆ, ವಿಶ್ವಾಸವನ್ನೇ ಹುಸಿ ಮಾಡಿ ಇತ್ತೀಚೆಗೆ ವಿದ್ಯುತ್ ಸಹಕಾರಿ ಸಂಘದ ಕೆಲ ನಿರ್ದೇಶಕರು ನಮ್ಮನ್ನು ಬಿಟ್ಟು ಹೋಗುವುದರ ಜೊತೆಗೆ ನಮ್ಮ ವಿರುದ್ಧ ಮಾತನಾಡಿದ್ದು ನನಗೆ ಮರೆಯಲಾರದ ಪಾಠ ಕಲಿಸಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಶುಕ್ರವಾರದಂದು ಹುಕ್ಕೇರಿ ಹೊರವಲಯದಲ್ಲಿ 40 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸುತ್ತಿರುವ ನಾಲ್ಕು ತಡೆಗೋಡೆಗಳ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕಳೆದ ಬಾರಿ ಚುನಾವಣೆಯಲ್ಲಿ ಇವರು ನಮ್ಮವರು, ನನ್ನ ಕುಟುಂಬದ ಹಿತೈಷಿಗಳು ಅಂತಾ ಭಾವಿಸಿ ನನ್ನ ತಂದೆ ದಿ.ಉಮೇಶ ಕತ್ತಿ ಮತ್ತು ಚಿಕ್ಕಪ್ಪ ರಮೇಶ ಕತ್ತಿ ತಾಲೂಕಿನ ಮುಖಂಡರ ಜೊತೆಗೆ ಚರ್ಚಿಸಿ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದರು. ಆದರೆ ಇವರು ಇದೀಗ ನನ್ನ ತಂದೆ ತೀರಿಕೊಂಡ ಬಳಿಕ ಇಂತಹ ಕಾರ್ಯ ಮಾಡಿದ್ದು ನನಗೆ ತೀವ್ರ ನೋವು ತಂದಿದೆ. ಇದರಿಂದ ನಾನು ಯಾರನ್ನು ನಂಬಬೇಕು, ನಂಬಬಾರದು ಎಂಬುದನ್ನು ಇವರಿಂದ ಕಲಿತಿದ್ದೇನೆ ಎಂದರು. ಇದೀಗ ಬರುವ ಸಂಘದ ಚುನಾವಣೆಯಲ್ಲಿ ಅದರ ಕಾರ್ಯವ್ಯಾಪ್ತಿಯ ಜಿ.ಪಂ ಮತ್ತು ತಾ.ಪಂ ಏರಿಯಾದ ಮುಖಂಡರು, ನನ್ನ ಕುಟುಂಬದ ಹಿತೈಷಿಗಳ ಮತ್ತು ಮತದಾರರ ಅಭಿಪ್ರಾಯ ಪಡೆದು ಜನಮತದ ಅಭ್ಯರ್ಥಿಗಳನ್ನು ಸ್ಪರ್ಧಿಸುವಂತೆ ನೋಡಿಕೊಳ್ಳುತ್ತೇವೆ ಎಂದರು.
ಹುಕ್ಕೇರಿಯಿಂದ ಮದಮಕ್ಕನಾಳ ಮತ್ತು ಯರನಾಳ ಸಂಪರ್ಕ ರಸ್ತೆ ಇತೀಚಿನ ದಿನಗಳಲ್ಲಿ ಟ್ರಾಫಿಕ್ ಹೆಚ್ಚಾಗಿದೆ.ಇದು ಕಿರಿದಾದ ರಸ್ತೆ ಇರುವುದರಿಂದ ವಾಹನ ಸವಾರರು ರಸ್ತೆ ಬದಿಯಲ್ಲಿ ಇರುವ ಬಾವಿಗಳಲ್ಲಿ ಬೀಳುವ ಅಪಾಯ ಇದೆ.ಅದಕ್ಕಾಗಿ ಈ ತಡೆಗೋಡೆ ನಿರ್ಮಿಸುತ್ತಿದೆ ಎಂದರು. ಇದರ ಜತೆಗೆ ರಸ್ತೆ ಅಕ್ಕಪಕ್ಕದ ರೈತರು ಸಮ್ಮತಿದಲ್ಲಿ ರಸ್ತೆ ಅಗಲೀಕರಣ ಮಾಡಲು ಪ್ರಯತ್ನಿಸುತ್ತೇನೆ ಎಂದರು. ಲೋಕೋಪಯೋಗಿ ಮತ್ತು ಜಿ.ಪಂ ಇಂಜನೀಯರಿಂಗ ವಿಭಾಗದ ಅಧಿಕಾರಿಗಳು ಇಂತಹ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಅವುಗಳಿಗೆ ಸಂರಕ್ಷಣಾ ಗೋಡೆ ನಿರ್ಮಾಣದ ಕ್ರಿಯಾಯೋಜನೆ ತಯಾರಿಸಲು ತಿಳಿಸಿದರು.

ಅರ್ಬನ್ ಬ್ಯಾಂಕ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಎ.ಕೆ.ಪಾಟೀಲ, ಆನಂದ ಗಂಧ, ಪಿಕಾರ್ಡ ಬ್ಯಾಂಕ್ ನಿರ್ದೇಶಕ ಗುರುರಾಜ ಕುಲಕರ್ಣಿ, ಅಶೋಕ ಅಂಕಲಗಿ, ತಮ್ಮಣ್ಣಾ ಕರಗುಪ್ಪಿ, ಬಿ.ಕೆ.ಮಗೆನ್ನವರ, ಆನಂದ ಲಕ್ಕುಂಡಿ, ಮಲ್ಲಪ್ಪಾ ಬಿಸಿರೊಟ್ಟಿ ಇತರರಿದ್ದರು.





