ತಾಲೂಕಿನ ಎಲಿಮುನ್ನೋಳಿ ಗ್ರಾಮದ ಶ್ರೀ ಮಹಾಲಕ್ಷ್ಮಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಾರ್ಯಾಲಯ ಮತ್ತು ಗೋದಾಮು ಕಟ್ಟಡದ ಭೂಮಿ ಪೂಜೆಯನ್ನು ರಮೇಶ ಕತ್ತಿ ನೆರವೇರಿಸಿದರು. ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರಿದ್ದರು
ಹುಕ್ಕೇರಿ: ತಾಲೂಕಿನ ಎಲಿಮುನ್ನೋಳಿ ಗ್ರಾಮದ 1400 ರೈತ ಸದಸ್ಯರಿಗೆ 11ಕೋಟಿ 21ಲಕ್ಷ ರೂ ಸಾಲಮನ್ನಾ ಭಾಗ್ಯ ದೊರಕಿದೆ. ಈ ಸೌಲಭ್ಯ ದೊರಕಲು ಮುಚ್ಚುವ ಹಂತದಲ್ಲಿದ್ದ ರೈತ ಸೇವಾ ಸಹಕಾರಿ ಸಂಘವನ್ನು ಶ್ರೀ ಮಹಾಲಕ್ಷ್ಮೀ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವೆಂದು ಪುನಃಶ್ಚೇತನಗೊಳಿಸಿದಾಗ ಸಾಧ್ಯವಾಗಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕರು, ಮಾಜಿ ಸಂಸದರಾದ ರಮೇಶ ಕತ್ತಿ ಹೇಳಿದರು
ಅವರು ಶುಕ್ರವಾರದಂದು ಎಲಿಮುನ್ನೋಳಿ ಗ್ರಾಮದ ಶ್ರೀ ಮಹಾಲಕ್ಷ್ಮಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಾರ್ಯಾಲಯ ಮತ್ತು ಗೋದಾಮು ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಎಲಿಮುನ್ನೋಳಿ ಗ್ರಾಮದ ರೈತರಿಗೆ ಸಾಲ ಹಂಚಿಕೆ ಮತ್ತು ರಸಗೊಬ್ಬರ ಪಡಿತರ ಹಂಚಿಕೆ ಮಾಡಲು ಸುಸಜ್ಜಿತ ನೂತನ ಕಾರ್ಯಾಲಯ ನಿರ್ಮಾಣದಿಂದ ಅನುಕೂಲಗುತ್ತದೆ. ರೈತರು ಪಡೆಯುವ ಬೆಳೆ ಸಾಲವನ್ನು ಅದಕ್ಕೆ ಬಳಸದೆ ತಮ್ಮ ದುಂದು ವೆಚ್ಚಕ್ಕೆ ಬಳಸಿಕೊಳ್ಳುವುದು ವಿಷಾದಕರ. ಅದಕ್ಕಾಗಿ ಇನ್ನಾದರೂ ರೈತರು ತಾವು ಪಡೆದ ಸಾಲವನ್ನು ಕೃಷಿ ಚಟುವಟಿಕೆಗೆ ಬಳಸಿಕೊಂಡರೆ ಆರ್ಥಿಕತೆ ಹೆಚ್ಚಾಗುತ್ತದೆ ಎಂದರು. ನೂತನ ಕಾರ್ಯಾಲಯ ಮತ್ತು ಗೋದಾಮು ನಿರ್ಮಾಣಕ್ಕೆ ಅಂದಾಜು 85ರಿಂದ 90ಲಕ್ಷ ರೂಪಾಯಿ ವೆಚ್ಚ ಬರಲಿದೆ ಎಂದರು. ನೂತನ ಕಾರ್ಯಲಯ ನಿರ್ಮಾಣದಲ್ಲಿ ಸಂಘದ ಪದಾಧಿಕಾರಿಗಳು ಮತ್ತು ರೈತರು ಪ್ರತಿನಿತ್ಯ ವೀಕ್ಷಿಸಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕೆಂದು ಕರೆ ನೀಡಿದರು.

ತಾಲೂಕಿನ ಎಲಿಮುನ್ನೋಳಿ ಗ್ರಾಮದ ಶ್ರೀ ಮಹಾಲಕ್ಷ್ಮಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ರಮೇಶ ಕತ್ತಿ ಅವರನ್ನು ಸತ್ಕರಿಸಿದರು. ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರಿದ್ದರು.
ಇದೇ ಸಂದರ್ಭದಲ್ಲಿ ರೈತರು ಡಿಸಿಸಿ ಬ್ಯಾಂಕಿನ ನೂತನ ಅಧ್ಯಕ್ಷರು ಹುಕ್ಕೇರಿ ತಾಲೂಕಿನ ರೈತ ಸಂಘಗಳ ಸಾಲ ನೀಡಿಕೆ ಕುರಿತು ಇತ್ತೀಚೆಗೆ ಹೇಳಿಕೆ ನೀಡಿದ್ದು ಆತಂಕ ಮೂಡಿಸುವಂತಿದೆ ಎಂದು ರಮೇಶ ಕತ್ತಿ ಅವರಿಗೆ ನಿವೇದಿಸಿಕೊಂಡರು. ಇದಕ್ಕುತ್ತರಿಸಿದ ಅವರು ಸಹಕಾರಿ ನಿಯಮಾವಳಿ ಮತ್ತು ಕಾನೂನು ಹೊರತು ಪಡಿಸಿ ಯಾರು ಯಾವ ನಿರ್ಧಾರ ಕೈಗೊಳ್ಳಲು ಬರುವುದಿಲ್ಲ. ಒಂದು ವೇಳೆ ಅಂತಹ ಘಟನೆ ಸಂಭವಿಸಿದಲ್ಲಿ ನಾನು ನನ್ನ ತಾಲೂಕಿನ ರೈತರಿಗೆ ಯಾವ ಅನ್ಯಾಯವಾಗದಂತೆ ನೋಡಿಕೊಳ್ಳುವುದಾಗಿ ಭರವಸೆಯಿತ್ತರು. ಇದೇ ಸಂದರ್ಭದಲ್ಲಿ ಸಂಘದಿಂದ ರಮೇಶ ಕತ್ತಿ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಕೆಂಪಣ್ಣಾ ವಾಸೇದಾರ, ಉಪಾಧ್ಯಕ್ಷ ಜಿನಗೌಡ ಇಮಗೌಡನವರ, ನಿರ್ದೇಶಕರಾದ ಬಾಳಾಸಾಹೇಬ ದೇಸಾಯಿ, ಕಲಗೌಡ ಮಲಗೌಡನವರ, ಭೀಮಗೌಡ ಗಿರಿಗೌಡನವರ, ಶಿವಪ್ಪಾ ದೊಡ್ಡಮನಿ, ದುಂಡಪ್ಪಾ ಮರೆನ್ನವರ, ಶಶಿಕುಮಾರ ಬೋನಿ, ಕಾಶವ್ವಾ ಮೆಟಗುಡ್ಲಿ, ಶ್ರೀಮಂತಿ ಚೌಗಲಾ, ಸಮರಾಬೇಗಂ ಮುಲ್ಲಾ, ಭೀಮಪ್ಪಾ ಘೋಡಗೇರಿ, ಡಿಸಿಸಿ ಬ್ಯಾಂಕ ತಾಲೂಕಾ ನಿಯಂತ್ರಣಾಧಿಕಾರಿ ಆರ್.ಎಸ್.ಸನದಿ, ನಾಗರಾಜ ಕರಗುಪ್ಪಿ ಮತ್ತು ಗ್ರಾಮದ ಮುಖಂಡರು, ರೈತರಿದ್ದರು. ಮುಖ್ಯ ಕಾರ್ಯ ನಿರ್ವಾಹಕ ಮಹೇಶ ಕುರಣಿ ಸ್ವಾಗತಿಸಿ, ನಿರೂಪಿಸಿದರು.





