ಹುಕ್ಕೇರಿ: ನಾಡಿನ ಜನತೆ ಸುಖ ಶಾಂತಿ ನೆಮ್ಮದಿಯಿಂದ ಬದುಕಲಿ ಎಂದು ಪ್ರತಿ ಮೂರು ವರ್ಷಕ್ಕೊಮ್ಮೆ ಗ್ರಾಮದೇವತೆ ಲಕ್ಷ್ಮೀ ದೇವರ ಜಾತ್ರಾ ಮಹೋತ್ಸವ ಆಚರಿಸಲಾಗುತ್ತದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ಪಟ್ಟಣದ ಬಡಿಗೇರ ಓಣಿಯಲ್ಲಿ ಗ್ರಾಮ ದೇವತೆ ಲಕ್ಷ್ಮೀ ದೇವಿಗೆ ಪೂಜೆ ಸಲ್ಲಿಸಿ ಉಡಿ ತುಂಬಿ ಮಾತನಾಡಿದರು. ಕೋಮು ಸೌಹಾರ್ದತೆಗೆ ಹೆಸರಾದ ಹುಕ್ಕೇರಿ ಪಟ್ಟಣದಲ್ಲಿ ಜಾತ್ಯಾತೀತವಾಗಿ ಸರ್ವರೂ ಜಾತ್ರಾ ಮಹೋತ್ಸವದಲ್ಲಿ ಸೇರಿಕೊಂಡು ಆಚರಣೆ ಮಾಡುವುದು ಶ್ಲಾಘನೀಯ ಎಂದರು. ಜಾತ್ರೆಯಲ್ಲಿ ಯುವ ಸಮೂಹ ಹಿರಿಯರ ಮಾರ್ಗದರ್ಶನದಲ್ಲಿ ಶಾಂತಿಯುತವಾಗಿ ಹೊನ್ನಾಟ ಮತ್ತು ದೇವಿ ಉತ್ಸವ ನಡೆಸಬೇಕೆಂದರು.

ಪ್ರಾರಂಭದಲ್ಲಿ ಆರ್ಚಕರು ಎಂದಿನ0ತೆ ಬೆಳಿಗ್ಗೆ ಪ್ರಾಣ ಪ್ರತಿಷ್ಠಾಪನೆ, ಪೂಜೆ ಜರುಗಿಸಿದರು. ನಂತರ ಕನ್ನಡಿಯಲ್ಲಿ ದೇವಿ ಮುಖ ದರ್ಶನ ಮಾಡಿದ ಬಳಿಕ ಹೊನ್ನಾಟ ಪ್ರಾರಂಭಿಸಿದರು. ರಾತ್ರಿ ದೇವಿ ಹೊನ್ನಾಟದೊಂದಿಗೆ ಹಕ್ಕುದಾರರ ಮನೆಗೆ ತೆರಳಿ ಉಡಿ ತುಂಬಿಸಿಕೊಳ್ಳುವ ಕಾರ್ಯ ಜರುಗಿತು.
ಸೂಕ್ತ ಬಂದೋಬಸ್ತ: ಜಾತ್ರೆಯಲ್ಲಿ ಯಾವ ಅಹಿತಕರ ಘಟನೆ ನಡೆಯದಂತೆ ಡಿ.ವಾಯ್.ಎಸ್.ಪಿ ರವಿ ನಾಯಿಕ ಅವರ ಮಾರ್ಗದರ್ಶನದಲ್ಲಿ ಪೋಲಿಸ್ ಇನ್ಸ್ಪೆಕ್ಟರ್ ಮಹಾಂತೇಶ ಬಸ್ಸಾಪೂರೆ ಅವರು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೋಲಿಸ್ ಸಿಬ್ಬಂದಿಗಳನ್ನು ನಿಯೋಜಿಸುವುದರ ಜತೆಗೆ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ.
ವ್ಯವಸ್ಥಿತ ಜಾತ್ರೆಗೆ ಮೂಲಭೂತ ಸೌಕರ್ಯಗಳ ಅಳವಡಿಕೆ: ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತಾಧಿಗಳಿಗೆ ಶಾಸಕ ನಿಖಿಲ ಕತ್ತಿ ಅವರ ಸೂಚನೆಯಂತೆ ಸಮರ್ಪಕ ಶುದ್ಧ ಕುಡಿಯುವ ನೀರು ಪೂರೈಕೆ, ಹೆಚ್ಚಿನ ಕಾರ್ಮಿಕರೊಂದಿಗೆ ಶುಚಿತ್ವಕ್ಕೆ ಆದ್ಯತೆ ನೀಡಲಾಗಿದೆ. ಶೌಚಾಲಯಗಳನ್ನು ಅಳವಡಿಸಲಾಗಿದೆ. ಸುಗಮ ಸಂಚಾರಕ್ಕೆ ಪುಟಪಾತ್ ಅತಿಕ್ರಮಣ ತೆರವು, ವಿಶ್ವರಾಜ ಶುರ‍್ಸ್ನವರಿಂದ 5 ಕಡೆ ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಈಶ್ವರ ಸಿದ್ನಾಳ ತಿಳಿಸಿದರು.
ಜಾತ್ರಾ ಮಹೋತ್ಸವ ಸಮಿತಿ ಹಕ್ಕುದಾರರು, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಸುರೇಶ ಜಿನರಾಳಿ, ರವಿ ನಾಯಿಕ, ಅನೀಲ ಶೆಟ್ಟಿ, ಸುಭಾಸ ನಾಯಿಕ, ರವಿ ನಾಯಿಕ ಮತ್ತು ಮುಖಂಡರಿದ್ದರು.






