ನಿಖಿಲ ಕತ್ತಿ ಶಾಸಕರು ಹುಕ್ಕೇರಿ
ಹುಕ್ಕೇರಿ: ಬಿರು ಬಿಸಿಲಿಗೆ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ. ಕಾರಣ ಮಹಾರಾಷ್ಟ್ರದ ಚಿತ್ರಿ ಜಲಾಶಯದಿಂದ ಹಿರಣ್ಯಕೇಶಿ ನದಿಗೆ ಹಾಗೂ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಹರಿಸಲು ನದಿ ಪಾತ್ರದ ಗ್ರಾಮಗಳ ರೈತರು ಶಾಸಕ ನಿಖಿಲ ಕತ್ತಿ ಅವರಿಗೆ ಮನವಿಸಿಕೊಂಡರು.
ಸೋಮವಾರ ಸ್ಥಳೀಯ ಪಿಕಾರ್ಡ ಬ್ಯಾಂಕ್ ಆವರಣದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ನ್ಯಾಯವಾದಿ (ವಕೀಲ) ರಾಮಚಂದ್ರ ಜೋಶಿ, ಪರಗೌಡ ಪಾಟೀಲ, ಬಸಗೌಡ ದೇಸಾಯಿ ಮತ್ತು ನದಿ ಪಾತ್ರದ ಗ್ರಾಮಗಳ ರೈತರು ಶಾಸಕರೊಂದಿಗೆ ಮಾತನಾಡಿ ಜಲಾಶಯದಿಂದ ಹರಿದು ಬರುವ ನೀರು ಕಾಲುವೆ ಕೊನೆ ಹಂತದ ರೈತರ ಜಮೀನುಗಳಿಗೆ ತಲುಪುತ್ತಿಲ್ಲ. ಕಾಲುವೆಯಲ್ಲಿ ಬೆಳೆದ ಗಿಡಗಂಟಿಗಳು ಮತ್ತು ಕಲ್ಲು ಮಣ್ಣುಗಳನ್ನು ಸ್ವಚ್ಚಗೊಳಿಸದಿರುವುದೇ ಇದಕ್ಕೆ ಕಾರಣ ಎಂದರು. ಅದಕ್ಕಾಗಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕಾಲುವೆ ಸ್ವಚ್ಚಗೊಳಿಸುವುದರ ಜತೆಗೆ ನೀರು ಕಾಲುವೆ ಕೊನೆ ಹಂತದ ಜಮೀನುಗಳಿಗೆ ತಲುಪುವಂತೆ ಕ್ರಮಕೈಗೊಳ್ಳಲು ತಿಳಿಸುವಂತೆ ವಿನಂತಿಸಿಕೊಂಡರು.
ಶಾಸಕ ನಿಖಿಲ ಕತ್ತಿ ಅವರು ಮಾತನಾಡಿ ಮಹಾರಾಷ್ಟ್ರದ ಚಿತ್ರಿ ಜಲಾಶಯದಿಂದ ಹಿರಣ್ಯಕೇಶಿ ನದಿಗೆ ನೀರು ಬಿಡಿಸಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಮೂಲಕ ಮಹಾರಾಷ್ಟ್ರಕ್ಕೆ ಮಾತನಾಡಿದ್ದು ಮೇ 15ರೊಳಗಾಗಿ ಹಿರಣ್ಯಕೇಶಿ ನದಿಗೆ ನೀರು ಬಿಡಲಿದ್ದಾರೆ. ಆದಾಗ್ಯೂ ಮತ್ತೊಮ್ಮೆ ಮಾತನಾಡಿ ಕುಡಿಯುವ ನೀರಿನ ಸಮಸ್ಯೆ ವಿವರಿಸಿ ಆದಷ್ಟು ಬೇಗ ನೀರು ಹರಿಸಲು ಮನವಿಸಿಕೊಳ್ಳುವುದಾಗಿ ತಿಳಿಸಿದರು. ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಶೀಘ್ರದಲ್ಲಿ ನೀರು ಬಿಡಿಸುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಕೈಗೊಂಡ ಕಾಮಗಾರಿಗಳನ್ನು ಪರಿಶೀಲಿಸಿ ಗ್ರಾಮ ಪಂಚಾಯತಿಗಳ ಸುಪರ್ದಿಗೆ ಒಪ್ಪಿಸಲು ಶಾಸಕರು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜತೆಗೆ ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಗಮನಿಸಲು ಆದೇಶಿಸಿದರು. ಮುಖಂಡರಾದ ಸತ್ತೆಪ್ಪಾ ನಾಯಿಕ, ಗುರುರಾಜ ಕುಲಕರ್ಣಿ, ಶೀತಲ ಬ್ಯಾಳಿ, ಕೆಂಪಣ್ಣಾ ದೇಸಾಯಿ, ಅಶೋಕ ಹಿರೇಕೋಡಿ, ರಾಜು ಮುನ್ನೋಳಿ, ಚನ್ನಪ್ಪಾ ಗಜಬರ, ಭೀಮಗೌಡ ಗಿರಿಗೌಡನವರ, ಬಸಗೌಡ ಪಾಟೀಲ ಮತ್ತಿತರರಿದ್ದರು.





