ಧಾರವಾಡ ವಿಭಾಗದ ಶಿಕ್ಷಣಾಧಿಕಾರಿಗಳ ಸಂಘದ ಕಾರ್ಯದರ್ಶಿಯಾಗಿ ಆಯ್ಕೆಯಾದ ಬಿ.ಇ.ಒ ಪ್ರಭಾವತಿ ಪಾಟೀಲ ಮತ್ತು ಸಹ ಕಾರ್ಯದರ್ಶಿಯಾದ ಶ್ರೀಶೈಲ ಹಿರೇಮಠ ಅವರನ್ನು ಸನ್ಮಾನಿಸಿದರು.
ಹುಕ್ಕೇರಿ: ನೌಕರಿ ಜೀವನದಲ್ಲಿ ನಿವೃತ್ತಿ ಆಗುವುದು ಸಹಜ ಪ್ರಕ್ರಿಯೆ. ಆದರೆ ನೌಕರಿಯಲ್ಲಿದ್ದಾಗ ನಾವು ಮಾಡಿದ ಕೆಲಸಗಳು ವಿಶ್ರಾಂತಿ ಜೀವನದಲ್ಲಿ ನೆಮ್ಮದಿ ತರುವಂತಿರಬೇಕು. ಆ ನಿಟ್ಟಿನಲ್ಲಿ ಬಿ.ಇ.ಒ ಕಾರ್ಯಾಲಯ ಅಧೀಕ್ಷಕ ಆರ್.ಬಿ.ಬೆಳಗಾಂವಕರ ಅವರ ನಿವೃತ್ತಿ ನಿದರ್ಶನವಾಗಿದೆ ಎಂದು ಬಿ.ಇ.ಒ ಪ್ರಭಾವತಿ ಪಾಟೀಲ ಹೇಳಿದರು.

ಗುರುವಾರ ಸಂಜೆ ಸ್ಥಳೀಯ ಬಿ.ಇ.ಒ ಕಾರ್ಯಾಲಯದಲ್ಲಿ ನಡೆದ ಆರ್.ಬಿ.ಬೆಳಗಾಂವಕರ ಅವರ ಬಿಳ್ಕೋಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕರ ಹಲವಾರು ವೃತ್ತಿಪರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಅವುಗಳನ್ನು ಪರಿಹರಿಸುವ ಮೂಲಕ ಅವರ ಮನಸ್ಸನ್ನು ಗೆದ್ದವರು. ಅದರಿಂದ ಅವರ ಬಿಳ್ಕೋಡುಗೆ ಸಮಾರಂಭಕ್ಕೆ ಉಪಸ್ಥಿತರಿದ್ದ ಶಿಕ್ಷಕ ಸಮೂಹವೇ ಸಾಕ್ಷಿ ಎಂದರು.

ಎಂ.ಎಸ್.ಪಾಟೀಲ, ಎಂ.ಎ.ಉಮರಾಣಿ, ಶಿವಾನಂದ ಗುಂಡಾಳಿ, ಎಸ್.ಎ.ಸರಿಕರ, ಕೆ.ಕೆ.ಪಾಟೀಲ, ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ವಿನಾಯಕ ನಾಯಿಕ, ಬಸವಪ್ರಭು ಅಂಗಡಿ, ರಾಜು ತಳವಾರ ಮತ್ತಿತರರು ಮಾತನಾಡಿ ಆರ್.ಬಿ.ಬೆಳಗಾಂವಕರ ಅಧೀಕ್ಷಕರಾಗಿದ್ದರು ಎನ್ನುವುದಕ್ಕಿಂತ ಶಿಕ್ಷಕರ ಪ್ರತಿನಿಧಿಯಾಗಿದ್ದರು ಎನ್ನುವುದು ಸೂಕ್ತವೆಂದರು. ನಿವೃತ್ತಿ ನಂತರವೂ ಕಾರ್ಯಾಲಯದ ಕೆಲಸಗಳಿಗೆ ಮಾರ್ಗದರ್ಶನ ಮಾಡುವಂತೆ ವಿನಂತಿಸಿಕೊಂಡರು.
ಇದೇ ಸಂದರ್ಭದಲ್ಲಿ ಧಾರವಾಡ ವಿಭಾಗದ ಶಿಕ್ಷಣಾಧಿಕಾರಿಗಳ ಸಂಘದ ಕಾರ್ಯದರ್ಶಿಯಾಗಿ ಆಯ್ಕೆಯಾದ ಬಿ.ಇ.ಒ ಪ್ರಭಾವತಿ ಪಾಟೀಲ ಮತ್ತು ಸಹ ಕಾರ್ಯದರ್ಶಿಯಾದ ಶ್ರೀಶೈಲ ಹಿರೇಮಠ ಅವರನ್ನು ಸನ್ಮಾನಿಸಿದರು. ಕಾರ್ಯಾಲಯದ ಸಿಬ್ಬಂದಿ, ಶಿಕ್ಷಕರು ಇದ್ದರು.





