ಪಟ್ಟಣದ ವಿಶ್ವರಾಜ ಸಭಾಭನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶ ಮತ್ತು ಆತ್ಮಾವಲೋಕನ ಸಭೆಯಲ್ಲಿ ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿದರು.
ಹುಕ್ಕೇರಿ: ನಮ್ಮಣ್ಣ ಮಾಜಿ ಸಚಿವ ದಿ. ಉಮೇಶ ಕತ್ತಿ ಇದ್ದಾಗ ಸಹಕಾರಿ ಕ್ಷೇತ್ರಕ್ಕೆ ಚುನಾವಣೆ ವೆಚ್ಚ ಬರಬಾರದೆಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಅವಿರೋಧ ಆಯ್ಕೆ ಮಾಡಲಾಗಿತ್ತು. ಆದರೆ ಅವಿರೋಧವಾಗಿ ಆಯ್ಕೆ ಮಾಡಿದವರಲ್ಲಿ 10 ನಿರ್ದೇಶಕರು ವಿಶ್ವಾಸದ್ರೋಹ ಎಸಗಿದ್ದಾರೆ. ಅದರಿಂದ ಇದೀಗ ಹೊಂದಾಣಿಕೆ ಪ್ರಶ್ನೆ ಬರುವುದಿಲ್ಲ. ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಅವರು ಪಟ್ಟಣದ ವಿಶ್ವರಾಜ ಸಭಾಭನದಲ್ಲಿ ಶುಕ್ರವಾರದಂದು ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶ ಮತ್ತು ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದರು. ಕಾರ್ಯಕರ್ತರು, ಮುಖಂಡರು ಬೇರೆ ತಾಲೂಕಿನವರು ಹುಕ್ಕೇರಿ ತಾಲೂಕಿಗೆ ಬರಲು ಅವಕಾಶ ಕೊಡಬಾರದು. ಪ್ರಸಂಗ ಬಂದರೆ ಮಾಜಿ ಸಚಿವ ಎ.ಬಿ.ಪಾಟೀಲ ಅವರೊಂದಿಗೆ ಮಾತನಾಡಿ ಒಟ್ಟಾಗಿ ಚುನಾವಣೆ ಎದುರಿಸಿ ಎಂದು ಹೇಳುತ್ತಿದ್ದಾರೆ. ಇಲ್ಲಿಯವರೆಗೆ ಆ ಕುರಿತು ನಾವು ಚರ್ಚಿಸಿಲ್ಲವೆಂದರು. ಇನ್ನೂ ಕೆಲವರು ವಿಶ್ವಾಸ ದ್ರೋಹವೆಸಗಿದವರು ಮರಳಿ ಬಂದಾಗ ಸೇರಿಸಿಕೊಳ್ಳಬಾರದು ಎಂಬ ಸಲಹೆ ನೀಡಿದ್ದು ಸ್ವಾಗತಾರ್ಹ. ಈ ಹಿಂದೆ ಮಾಡಿದ್ದ ತಪ್ಪಿನ ಪ್ರಾಯಶ್ಚಿತ ನನಗಾಗಿದೆ. ಮರಳಿ ಅಂತಹ ತಪ್ಪು ಮಾಡುವುದಿಲ್ಲವೆಂದರು.
ತಾಲೂಕಿನ ಜನ ರಾಜಕೀಯವಾಗಿ ನಮ್ಮನ್ನು ಬೆಳೆಸಿದ್ದಾರೆ.ನಮ್ಮ ಉಸಿರು ಇರುವವರೆಗೆ ನಾನು ಮತ್ತು ನನ್ನ ಮೂವರು ಮಕ್ಕಳು ಜನರ ಸೇವೆ ಹಗಲಿರುಳು ಮಾಡುತ್ತೇವೆ.ತಾಲೂಕಿನಲ್ಲಿ ಬೇರೆಯವರು ಬಂದು ರಾಜಕೀಯ ಮಾಡಲು ನಾವು ಎಂದಿಗೂ ಆಸ್ಪದ ನೀಡುವುದಿಲ್ಲವೆಂದು ಪರೋಕ್ಷವಾಗಿ ಎದುರಾಳಿಗಳಿಗೆ ಚುನಾವಣೆಗೆ ಸಿದ್ದರಾಗಿದ್ದೇವೆ ಎಂಬ ಸಂದೇಶ ನೀಡಿದರು.
ಶಾಸಕ ನಿಖಿಲ ಕತ್ತಿ ಮಾತನಾಡಿ ನಮ್ಮ ತಂದೆ ನಿಧನರಾದ ಬಳಿಕ ನಮ್ಮ ಕುಟುಂಬದಲ್ಲಿ ಅಂದರೆ ಕಾಕಾ ಮಕ್ಕಳಲ್ಲಿ ಜಗಳ ಹಚ್ಚಿ ಒಡೆದು ಆಳುವ ನೀತಿ ಹಲವಾರು ಬಾರಿ ಪ್ರಯತ್ನಿಸಿದರು. ದೇವರ ಮತ್ತು ಮತದಾರರು ಹಾಗೂ ಹಿತೈಷಿಗಳ ಆಶೀರ್ವಾದಿಂದ ಅದು ಫಲಿಸಲಿಲ್ಲ. ರಾಜಕೀಯ ಬಿಡುತ್ತೇನೆ ಆದರೆ ತಂದೆಯ ಸ್ಥಾನದಲ್ಲಿ ಇರುವ ಚಿಕ್ಕಪ್ಪನನು ಎಂದಿಗೂ ಬಿಡುವುದಿಲ್ಲವೆಂದರು. ಕ್ಷೇತ್ರದ ಜನರ ಪ್ರೀತಿ ವಿಶ್ವಾಸದ ಬೆಂಬಲದಿಂದ ನಮ್ಮ ಕುಟುಂಬದ ಮೂರನೇ ತಲೆಮಾರಿನವನಾದ ನಾನು ಶಾಸಕನಾಗಿದ್ದೇನೆ.ರಾಜ್ಯ ರಾಜಕೀಯ ಇತಿಹಾಸದಲ್ಲಿ ಇದೊಂದು ದಾಖಲೆ ಎಂದರು. ವಿರೋಧಿಗಳ ಅಪಪ್ರಚಾರ ಮತ್ತು ವದಂತಿಗಳಿಗೆ ಯಾರು ಕಿವಿಗೊಡಬಾರದು. ನಮ್ಮೊಂದಿಗೆ ನೀವು ನಿಮ್ಮೊಂದಿಗೆ ನಾವು ಒಟ್ಟಾಗಿ ಒಂದಾಗಿ ಚುನಾವಣೆ ಎದುರಿಸೋಣ ಎಂದು ತಿಳಿಸಿದರು.
ವಿದ್ಯುತ್ ಸಹಕಾರಿ ಸಂಘದ ನಿಕಟಪೂರ್ವ ಅಧ್ಯಕ್ಷ ಕಲಗೌಡ ಪಾಟೀಲ ಮಾತನಾಡಿ ಚುನಾವಣೆ ಇನ್ನೂ ಎರಡು ತಿಂಗಳು ಇರುವಾಗ ಇಲ್ಲದ ಆರೋಪಗಳನ್ನು ಮಾಡುತ್ತಾ ತಮ್ಮ ಸ್ವಾರ್ಥಕ್ಕಾಗಿ ಅವಿಶ್ವಾಸ ಗೊತ್ತುವಳಿ ಮಂಡಿಸಿದರು. 45 ಕೋಟಿ ರೂ ಆಸ್ತಿ ಹೊಂದಿದ್ದ ಸಹಕಾರಿ ಇದೀಗ 175 ಕೋಟಿ ರೂ ಹೆಚ್ಚಿಸಿದ್ದೇವೆ. 124 ಸಿಬ್ಬಂದಿಗಳನ್ನು ಖಾಯಂಗೊಳಿಸಿ 2 ತಿಂಗಳ ವೇತನ ಪಾವತಿಸಿದ ಬಳಿಕ ಇದೀಗ ಅವರಿಗೆ ನೇಮಕಾತಿ ಆದೇಶ ಪತ್ರಗಳನ್ನು ನೀಡುವ ಮೂಲಕ ತಾವು ಖಾಯಂಮಾತಿಗೊಳಿಸಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆಂದರು.

ಬಿ.ಜೆಪಿ ಎಸ್.ಟಿ.ಮೋರ್ಚಾ ರಾಜ್ಯ ಪದಾದಿಕಾರಿ ಬಸವರಾಜ ಹುಂದ್ರಿ, ಕಾರ್ಯಕರ್ತರಾದ ಸಂತೋಷ ಕಮತೆ ಬಸವರಾಜ ಗುಡಸಿ, ಬಸವರಾಜ ಕಟ್ಟಿ, ಶ್ರೀ ಶೈಲ ಮಠಪತಿ, ಎಚ್ ಎಲ್ ಪೂಜೇರಿ, ಈರಗೌಡ ಪಾಟೀಲ, ಸಂಘ ಪರಿವಾರದ ಪ್ರಕಾಶ ಮುತಾಲಿಕ, ರಾಮಚಂದ್ರ ಜೋಶಿ ಅವರು ಮಾತನಾಡಿ ಹೊಂದಾಣಿಕೆ ಚುನಾವಣೆ ಮತ್ತು ವಿಶ್ವಾಸ ದ್ರೋಹಿಗಳನ್ನು ಬಿಟ್ಟು ಚುನಾವಣೆ ಎದುರಿಸುವಂತೆ ಸಲಹೆ ನೀಡಿದರು.

ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕರಾದ ಪೃಥ್ವಿ ಕತ್ತಿ. ಕೆ.ಕೆ. ಬೆನಚಿನಮರಡಿ, ಸಂಗೀತಾ ಮಣಗುತ್ತಿ, ಬೆಲ್ಲದ ಬಾಗೇವಾಡಿ ಅರ್ಬನ ಬ್ಯಾಂಕ ಅಧ್ಯಕ್ಷ ಪವನ ಕತ್ತಿ, ಹಿರಾ ಶುಗರ್ ನಿದೇರ್ಶಕ ಸುರೇಶ ಬೆಲ್ಲದ, ಬಿಡಿಸಿಸಿ ಬ್ಯಾಂಕ ನಿರ್ದೇಶಕ ಗಜಾನನ ಕೊಳ್ಳಿ, ಕೆ.ಎಂ.ಎಫ್ ಜಿಲ್ಲಾ ನಿರ್ದೇಶಕ ರಾಯಪ್ಪಾ ಡೂಗ, ಮುಖಂಡರಾದ ಬಿ.ಎಸ್.ಸುಲ್ತಾನಪೂರಿ, ಸುನೀಲ ನೇರ್ಲಿ, ಶೀತಲ ಬ್ಯಾಳಿ, ಬಸವರಾಜ ಮಟಗಾರ, ಮಹಾವೀರ ನಿಲಜಗಿ, ಎ.ಕೆ.ಪಾಟೀಲ, ಪ್ರಜ್ಚಲ ನಿಲಜಗಿ, ಉದಯ ಹುಕ್ಕೇರಿ ಮತ್ತಿತರರಿದ್ದರು. ಸತ್ತೆಪ್ಪಾ ನಾಯಿಕ ಸ್ವಾಗತಿಸಿದರು. ಗುರುರಾಜ ಕುಲಕರ್ಣಿ ನಿರೂಪಿಸಿದರು.





