ಸ್ಥಳೀಯ ಗ್ರಾಮಿಣ ವಿದ್ಯುತ್ ಸಹಕಾರಿ ಸಂಘದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮಾತನಾಡಿದರು. ಸಂಸದ ಜಗದೀಶ ಶೆಟ್ಟರ, ಶಾಸಕ ನಿಖಿಲ ಕತ್ತಿ , ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಸಚಿವ ಎ.ಬಿ.ಪಾಟೀಲ, ಮಹಾವೀರ ನಿಲಜಗಿ ಇತರರಿದ್ದರು.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘ ದೇಶದಲ್ಲಿ ಸಹಕಾರಿ ತತ್ವದಡಿ ವಿದ್ಯುತ್ ಸರಬರಾಜು ಮಾಡುವ ನಿಟ್ಟಿನಲ್ಲಿ ವಿಶಿಷ್ಟವಾಗಿ ಕಾರ್ಯ ನಿರ್ವಹಿಸುವ ಏಕೈಕ ಸಂಸ್ಥೆಯಾಗಿದೆ. ಇದರ ಕುರಿತು ಆಸಕ್ತಿ ಇದ್ದು, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದಿಂದ ಸಹಾಯ ಸಹಕಾರ ನೀಡುವುದಾಗಿ ಕೇಂದ್ರ ಸರಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವರಾದ ಪ್ರಹ್ಲಾದ ಜೋಶಿ ಹೇಳಿದರು.
ಶನಿವಾರದಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘಕ್ಕೆ ಭೇಟಿ ನೀಡಿ ಮಾತನಾಡಿದರು. ಕೇಂದ್ರ ಸರಕಾರದಿಂದ ಈ ಸಂಘಕ್ಕೆ ನೀಡಬಹುದಾದ ಅನುದಾನಗಳ ಕುರಿತು ಕ್ರಿಯಾಯೋಜನೆ ತಯಾರಿಸಿ ತಮ್ಮ ಇಲಾಖೆಗೆ ಸಲ್ಲಿಸುವಂತೆ ಸೂಚಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸಹಕರಿಸುವುದಾಗಿ ತಿಳಿಸಿದರು. ಮಾಜಿ ಸಂಸದ ರಮೇಶ ಕತ್ತಿ ಅವರು ವಿದ್ಯುತ್ ಸಹಕಾರ ಸಂಘದ ಕಾರ್ಯ ನಿರ್ವಹಣೆ ಕುರಿತು ವಿವರಿಸಿದರು. ನಂತರ ನೂತನ ಆಡಳಿತ ಮಂಡಳಿಯನ್ನು ಸಚಿವರಿಗೆ ಪರಿಚಯಿಸಿದರು.
ಶಾಸಕ ನಿಖಿಲ ಕತ್ತ್ತಿ ಮಾಜಿ ಸಚಿವ ಎ.ಬಿ.ಪಾಟೀಲ ಅವರು ಮಾತನಾಡಿ ಗ್ರಾಮೀಣ ಪ್ರದೇಶದ ತೋಟಪಟ್ಟಿ ನಿವಾಸಿಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಅತಿ ಅವಶ್ಯವಾಗಿ ಅನುದಾನ ಬೇಕಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಸಚಿವರನ್ನು ಮತ್ತು ಬೆಳಗಾವಿ ಸಂಸದ ಜಗದೀಶ ಶೆಟ್ಟರ ಅವರನ್ನು ಸಂಘದ ಪರವಾಗಿ ಸನ್ಮಾನಿಸಿದರು.

ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಉಪಾಧ್ಯಕ್ಷ ಅಜಿತ ಮುನ್ನೋಳಿ, ನಿರ್ದೇಶಕರಾದ ಪೃಥ್ವಿ ಕತ್ತಿ, ಕಲಗೌಡ ಪಾಟೀಲ, ಸತ್ತೆಪ್ಪಾ ನಾಯಿಕ, ಗಜಾನನ ಕ್ವಳ್ಳಿ, ಶಿವಾನಂದ ಮುಡಶಿ, ಕೆಂಪಣ್ಣಾ ವಾಸೇದಾರ, ಶಿವನಗೌಡ ಮದವಾಲ, ಮಹಾದೇವ ಕ್ಷೀರಸಾಗರ, ಶ್ರೀಮಂತ ಸನ್ನಾಯಿಕ, ಬಸವಣ್ಣಿ ಲಂಕೆಪ್ಪಗೋಳ, ಎಂ.ಡಿ ರವೀಂದ್ರ ಪಾಟೀಲ, ರೆಸಿಡೆಂಟ ಇಂಜನೀಯರ ನೇಮಿನಾಥ ಖೇಮಲಾಪೂರೆ ಮತ್ತಿತರರಿದ್ದರು.
- ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಸಂಸದ ಜಗದೀಶ ಶೆಟ್ಟರ ಅವರು ರಾಜ್ಯ ಸರಕಾರ ಅಧಿಕಾರ ದಾಹದಲ್ಲಿ ಜನರ ಸಮಸ್ಯೆ ಮರೆತಿದೆ. ಇದರಿಂದ ರಾಜ್ಯದಲ್ಲಿ ಕೇಳುವವರು ಹೇಳುವವರು ಯಾರು ಇಲ್ಲದಂತಾಗಿದೆ. ತಕ್ಷಣ ಜನರ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲವಾದರೆ ವಿರೋಧಿ ಪಕ್ಷವಾದ ಬಿಜೆಪಿ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
-
ಕಬ್ಬಿನ ದರದ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವರು ಸಕ್ಕರೆ ಮತ್ತು ಇಥೆನಾಲ ರಪ್ತು ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಬರುವ ಆದಾಯ ಗಮನಿಸಿ ಎಂ.ಎಸ್.ಪಿ ಹೆಚ್ಚಿಸಲು ಚಿಂತನೆ ಮಾಡಲಾಗಿದೆ ಎಂದರು.





