ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರನ್ನುದ್ದೇಶಿಸಿ ವಿಧಾನ ಪರಿಷತ್ ಸದಸ್ಯ ಸಲೀಮ ಅಹ್ಮದ ಮಾತನಾಡಿದರು. ರವಿ ಕರಾಳೆ, ಬಸವರಾಜ ಕೋಳಿ, ಸುಭಾಸ ನಾಯಿಕ, ದಸ್ತಗೀರ ಖಾಜಿ, ಸಲಿಂ ಕಳಾವಂತ, ಕಬೀರ್ ಮಲಿಕ್, ಚಂದು ಗಂಗನ್ನವರ, ಇರ್ಶಾದ ಮೊಕಾಶಿ ಇತರರಿದ್ದರು.
ಹುಕ್ಕೇರಿ: ಸುಳ್ಳು ಹೇಳುವುದರಲ್ಲಿ ಆಸ್ಕರ ಅವಾರ್ಡ ಇದ್ದರೆ, ಅದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೊರಕುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಮ ಅಹ್ಮದ್ ಹೇಳಿದರು.
ಶನಿವಾರ ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.ಅವರು ದೇಶದ ಯುವಕರಿಗೆ ಉದ್ಯೋಗವಕಾಶ, ರೈತರ ಆದಾಯ ದುಪ್ಪಟ್ಟು ಸೇರಿದಂತೆ ಹೇಳಿದ ಭರವಸೆ ಯಾವುದಾದರೂ ಈಡೇರಿಸಿದ್ದಾರೆಯೇ ಎಂದು ಪ್ರಶ್ನಿಸಿದರು. ನೈಸರ್ಗಿಕ ವಿಕೋಪಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡುವ ಅನುದಾನದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡಿ, ಬೇರೆ ರಾಜ್ಯಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ರಾಜ್ಯಕ್ಕೆ ಅನ್ಯಾಯ ಎಸಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರದಲ್ಲಿ ರಾಜ್ಯದಿಂದ 5 ಸಚಿವರು ಸಚಿವ ಸಂಪುಟದಲ್ಲಿ ಇದ್ದಾರೆ. ಪ್ರಧಾನಿ ಮೋದಿ ಎದುರಿಗೆ ನಿಂತು ರಾಜ್ಯಕ್ಕೆ ಹೆಚ್ಚಿನ ಅನುದಾನ ತರುವಲ್ಲಿ ವಿಫಲವಾಗಿರುವುದಕ್ಕೆ ಕಾರಣ ಏನೂ ಎಂದು ಪ್ರಶ್ನಿಸಿದರು. ಬಿಜೆಪಿಯವರಿಗೆ ರಾಜ್ಯ ಸರ್ಕಾರ ಟೀಕಿಸುವ ನೈತಿಕ ಹಕ್ಕೂ ಇಲ್ಲ ಎಂದರು. ಕೇಂದ್ರ ಸರಕಾರದ ಬೋಗಸ್ ಹೇಳಿಕೆ ಮತ್ತು ಬೆಲೆ ಏರಿಕೆಯಿಂದ ಜನ ಬೇಸತ್ತಿದ್ದು, 2029ರಲ್ಲಿ ಕೇಂದ್ರದಲ್ಲಿ ಮೈತ್ರಿಕೂಟ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ರಾಹುಲ್ ಗಾಂಧಿ ಪ್ರಧಾನಿಯಾಗುವರು ಎಂದರು.
ಆದರೆ ರಾಜ್ಯದ ಕಾಂಗ್ರೆಸ್ ಸರಕಾರ ಜನರಿಗೆ ನೀಡಿದ ಭರವಸೆಯಂತೆ ಐದು ಗ್ಯಾರಂಟಿಗೆ ರಾಜ್ಯ ಸರ್ಕಾರ ಪ್ರತಿ ವರ್ಷ ರೂ 58,000 ಕೋಟಿ ವೆಚ್ಚ ಮಾಡಿದೆ. ಕಾಂಗ್ರೆಸ್ ಪಕ್ಷ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಐದು ಗ್ಯಾರಂಟಿ ಅನುಷ್ಟಾನ ಮಾಡುವ ಮೂಲಕ ಜನರ ಮನಸ್ಸು ಗೆದ್ದಿದೆ. ನಮ್ಮ ಸರಕಾರ ನುಡಿದಂತೆ ನಡೆದಿದೆ ಅದರಿಂದ ಜನರ ಮನ ಗೆದ್ದಿದೆ.ಕಾರಣ ಮುಂಬರುವ ಜಿಲ್ಲಾ, ತಾಲೂಕ ಪಂಚಾಯತ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದು ಅವುಗಳ ಆಡಳಿತ ನಮ್ಮದಾಗುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪಟ್ಟಣದಲ್ಲಿ ಸರಕಾರಿ ಐ.ಟಿ.ಐ ಕಾಲೇಜ ಇಲ್ಲದೇ ತಾಲೂಕಿನ ವಿದ್ಯಾರ್ಥಿಗಳು ಪರದಾಡುತಿದ್ದು ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಐ.ಟಿ.ಐಕಾಲೇಜು ಮಂಜೂರು ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಸಲೀಮಅಹ್ಮದ ಅವರಿಗೆ ಮನವಿ ಸಲ್ಲಿಸಿದರು.
ಗ್ಯಾರಂಟಿ ಅನುಷ್ಟಾನ ಕಮಿಟಿ ಅಧ್ಯಕ್ಷ ಶಾನೂಲ್ ತಹಸೀಲ್ದಾರ್, ಅಲ್ಕಸಂಖ್ಯಾತ ಘಟಕದ ಅಧ್ಯಕ್ಷ ಡಾ.ಸಾದಿಕ್ ಮಕಾನದಾರ್, ಪುರಸಭೆ ಅಧ್ಯಕ್ಷ ಇಮ್ರಾನ್ ಮೊಮೀನ್, ಬ್ಲಾಕ್ ಮಾಜಿ ಅಧ್ಯಕ್ಷ ರವಿ ಕರಾಳೆ, ಸಂಕೇಶ್ವರದ ಮುಕ್ತಾರ ನದಾಫ್, ಬಸವರಾಜ ಕೋಳಿ, ಸುಭಾಸ ನಾಯಿಕ, ದಸ್ತಗೀರ ಖಾಜಿ, ಮೀರಾಸಾಬ ಚೌಧರಿ, ಸಲೀಮ ಕಳಾವಂತ, ಕಬೀರ್ ಮಲಿಕ್, ಭೀಮಾನಂದ ಮುದಕನ್ನವರ, ಚಂದು ಗಂಗನ್ನವರ, ಇರ್ಶಾದ ಮೊಕಾಶಿ ಮತ್ತಿತರರಿದ್ದರು.




