ಹುಕ್ಕೇರಿ :ಯುವ ದಿನೋತ್ಸವವನ್ನು ನಾವೆಲ್ಲರೂ ಆಚರಿಸುತ್ತೇವೆ. ಆದರೆ ಯುವ ಜನಾಂಗ ಇವತ್ತು ದೇಶ ಪ್ರಜ್ಞೆಯನ್ನು ಮರೆತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ದೇಹಾಭಿಮಾನಕ್ಕಿಂತ ದೇಶಾಭಿಮಾನ ದೊಡ್ಡದು ಎಂಬ ಹುಕ್ಕೇರಿ ಶ್ರೀಗಳ ಉಕ್ತಿ ಸಮಂಜಸವಾಗಿದೆ ಎಂದು ದಾವಣಗೇರಿ ಮೂಲದ ಶಿಕಾಗೋ ನಿವಾಸಿ ರವಿ ಹಂಜ ಹೇಳಿದರು.
ಅವರು ಮಂಗಳವಾರದ0ದು ಸ್ಥಳೀಯ ಹಿರೇಮಠಕ್ಕೆ ಆಗಮಿಸಿ ಚಂದ್ರಶೇಖರ ಶಿವಾಚಾರ್ಯರಿಂದ ಆಶೀರ್ವಾದ ಪಡೆದ ಬಳಿಕ ಮಾತನಾಡಿದರು. ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ಹೇಳಿಕೆ, ಕೇಳಿಕೆಗಿಂತ ಯುವ ಜನರ ಆದರ್ಶವಾಗಬೇಕು. ಆಗ ಮಾತ್ರ ಯುವ ದಿನೋತ್ಸವ ಆಚರಣೆ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ ದಾವಣಗೆರೆ ಮೂಲದ ರವಿ ಹಂಜ ಅವರು ಪ್ರಸ್ತುತ ಅಮೇರಿಕಾದ ಶಿಕಾಗೋ ನಿವಾಸಿ ಆಗಿದ್ದಾರೆ. ಮೂಲತಃ ಮ್ಯಾನೇಜ್ಮೆಂಟ್ ತಜ್ಞರು. ಹವ್ಯಾಸಿ ಬ್ಲಾಗು ಬರಹಗಾರರು, ಸಾಹಿತಿಗಳು ಆಗಿರುವ ಇವರು ಬರೆದ “ಹ್ಯುಯೆನ್ ತ್ಸಾಂಗ್ ಮಹಾಪಯಣ” ಎಂಬ ಗಮನಾರ್ಹ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರಕಿದೆ. ಇಂತಹ ಸಾಹಿತಿಯನ್ನು ಯುವ ದಿನೋತ್ಸವದಂದು ಸನ್ಮಾನಿಸಲು ಹರ್ಷವೆನಿಸುತ್ತದೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಉಪಾಧ್ಯಕ್ಷರು, ದಾವಣಗೆರೆ ವಿಶ್ವವಿದ್ಯಾಲಯದ ಸದಸ್ಯರಾಗಿರುವ ಆರ್.ಟಿ.ಪ್ರಶಾಂತ ಮಾತನಾಡಿದರು. ಮಲ್ಲಿಕಾರ್ಜುನ ಮಠದ, ಬಿ. ಮಲ್ಲಿಕಾರ್ಜುನ ಮತ್ತಿತರರಿದ್ದರು.





