ಸ್ಥಳೀಯ ಉರ್ದು ಹೈಸ್ಕೂಲಿನಲ್ಲಿ ಕರ್ನಾಟಕ ದರ್ಶನ ಪ್ರವಾಸಕ್ಕೆ ತೆರಳುತ್ತಿದ್ದ ಬಸ್‌ಗಳಿಗೆ ತಾ.ಪಂ ಇ.ಒ ಟಿ.ಆರ್.ಮಲ್ಲಾಡದ ಹಸಿರು ನಿಶಾನೆ ತೋರಿಸಿದರು. ಬಿ.ಇ.ಒ ಪ್ರಭಾವತಿ ಪಾಟೀಲ, ಬಿ.ಆರ್.ಸಿ ಎ.ಎಸ್.ಪದ್ಮನ್ನವರ, ಭರತ ಪಾರ್ಥನಳ್ಳಿ ಇತರರಿದ್ದರು.
ಹುಕ್ಕೇರಿ : ಮಕ್ಕಳ ಸುರಕ್ಷತೆಯ ಜತೆಗೆ ಪ್ರವಾಸಿ ಮತ್ತು ಐತಿಹಾಸಿಕ ಸ್ಥಳಗಳನ್ನು ತಿಳಿಸಿಕೊಡುವಲ್ಲಿ ಕರ್ನಾಟಕ ದರ್ಶನ ಪ್ರವಾಸಿ ಉಸ್ತುವಾರಿ ಶಿಕ್ಷಕರು ಆದ್ಯತೆ ನೀಡಬೇಕೆಂದು ತಾ.ಪಂ ಇ.ಒ ಟಿ.ಆರ್.ಮಲ್ಲಾಡದ ಹೇಳಿದರು.
ಗುರುವಾರದಂದು ಸ್ಥಳೀಯ ಸರಕಾರಿ ಉರ್ದು ಹೈಸ್ಕೂಲ ಆವರಣದಲ್ಲಿ ಕರ್ನಾಟಕ ದರ್ಶನ ಪ್ರವಾಸಿ ಬಸ್‌ಗಳ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು. ಐದು ದಿನಗಳ ಪ್ರವಾಸದಲ್ಲಿ ಮಕ್ಕಳು ನಿತ್ಯ ವೀಕ್ಷಿಸಿದ ಸ್ಥಳಗಳ ಪ್ರಮುಖಾಂಶಗಳನ್ನು ಬರೆದಿಟ್ಟುಕೊಳ್ಳುವಂತೆ ಸಲಹೆಯಿತ್ತರು.
ಬಿ.ಇ.ಒ ಪ್ರಭಾವತಿ ಪಾಟೀಲ ಮಾತನಾಡಿ ಪ್ರತಿ ವರ್ಷದಂತೆ ರಾಜ್ಯ ಸರಕಾರದ ನಿರ್ದೇಶನದ ಮೇರೆಗೆ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹೈಸ್ಕೂಲ ಮಕ್ಕಳಿಗೆ ಕರ್ನಾಟಕ ದರ್ಶನ ಪ್ರವಾಸಕ್ಕೆ ಮೂರು ಬಸ್ಸುಗಳು ತೆರಳುತ್ತಿವೆ. ಇದರಲ್ಲಿ 140 ಮಕ್ಕಳು ಹಾಗೂ ಉಸ್ತುವಾರಿಗೆ 6 ಜನ ಶಿಕ್ಷಕರನ್ನು ನಿಯೋಜಿಸಲಾಗಿದೆ ಎಂದರು. ಪ್ರವಾಸದಲ್ಲಿ ಗೋಕರ್ಣ, ಮಿರ್ಜಾನ ಕೋಟೆ, ಮುರುಡೇಶ್ವರ, ಕೊಲ್ಲೂರ, ಶೃಂಗೇರಿ, ಬೇಲೂರು, ಹಳೇಬೀಡು, ಶೃವಣಬೆಳಗೊಳ ಮತ್ತು ಮೈಸೂರು ಸೇರಿದಂತೆ ವಿವಿಧ ಸ್ಥಳಗಳನ್ನು ಮಕ್ಕಳು ದರ್ಶಿಸಲಿದ್ದಾರೆಂದು ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎ ಎಸ್ ಪದ್ಮನವರ, ತಾಲೂಕಿನ ಚಿಣ್ಣರ ಕರ್ನಾಟಕ ದರ್ಶನ ನೋಡಲ್ ಅಧಿಕಾರಿ ಭರತ ಪಾರ್ಥನಳ್ಳಿ, ಉಸ್ತುವಾರಿ ಶಿಕ್ಷಕರಾದ ಸಂಜು ಹೊನಕುಪ್ಪಿ, ವಾಯ್.ಪಿ.ಕದಮ, ವಿನಾಯಕ ಪೂಜೇರಿ, ರೇಷ್ಮಾ ರತ್ನಾಕರ, ತನುಜಾ ಗುಡಸಿ, ಮಹಾದೇವಿ ಪಾಟೀಲ ಮತ್ತಿತರರಿದ್ದರು.





