ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ನಡೆದ ವಿಶಾಲ ಹಿಂದೂ ಸಮ್ಮೇಳನದಲ್ಲಿ ಶಿವಾನಂದ ಸ್ವಾಮಿಗಳನ್ನು ಸನ್ಮಾನಿಸಿದರು. ಅರುಣಕುಮಾರ ಜೀ, ಶಾಸಕ ನಿಖಿಲ ಕತ್ತಿ, ಪವನ ಕತ್ತಿ ಇತರರಿದ್ದರು.
ಹುಕ್ಕೇರಿ: ಮನಸ್ಸಿನಲ್ಲಿ ಇರುವ ದ್ವೇಷ, ಅಸೂಯೆ. ಅಸ್ಪ್ರಶ್ಯತೆ, ಜಾತಿ ಭೇದ-ಭಾವ ಬಿಟ್ಟು ಬದುಕುವುದನ್ನು ಜನ ಸಾಮಾನ್ಯರಿಗೆ ತಿಳಿಸುವುದೇ ವಿಶಾಲ ಹಿಂದೂ ಸಮ್ಮೇಳನ ಸಮಾರಂಭದ ಪ್ರಮುಖ ಉದ್ದೇಶ ಆಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತದ ಪ್ರಚಾರಕ ಪ್ರಮುಖರಾದ ಅರುಣಕುಮಾರ ಜೀ ಹೇಳಿದರು.

ರವಿವಾರದಂದು ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ವಿಶಾಲ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಇವರ ಆಶ್ರಯದಲ್ಲಿ ನಡೆದ ವಿಶಾಲ ಹಿಂದೂ ಸಮ್ಮೇಳನದ ಮುಖ್ಯ ವಕ್ತಾರರಾಗಿ ಮಾತನಾಡಿದರು.
33 ಕೋಟಿ ದೇವರುಗಳನ್ನು ಪೂಜಿಸುವ ನಮಗೆ ಪಾಶ್ಚಿಮಾತ್ಯರ ಎರಡು ದೇವರು ಪೂಜಿಸುವುದನ್ನು ವಿರೋಧಿಸಲು ಸಾಧ್ಯವೇ ಎಂದರು. ನಮ್ಮ ದೇಸಿಯ ಜನರನ್ನು ಅಣ್ಣ ತಮ್ಮಂದಿರು ಎಂದು ಹೇಳುವುದನ್ನು ಬಿಟ್ಟು ಬೇರೆ ದೇಶದವರನ್ನು ಭಾಯಿ ಭಾಯಿ ಎಂದು ಹೇಳುವುದು ಸಮಂಜಸವೇ. ನಮ್ಮಲ್ಲಿ ಚಿಕ್ಕ ಪುಟ್ಟ ಗೊಂದಲ ಇರಬಹುದು ಆದರೆ ದ್ವೇಷ ರಹಿತ ಜೀವನ ಹೊಂದಿದ್ದೇವೆ.
ಹಿಂದುಗಳು ಎಂದರೆ ಯಾವುದೇ ರ‍್ಮ, ಜಾತಿಗೆ ಸೀಮಿತವಾಗಿಲ್ಲ. ದೇಶವನ್ನು ಪ್ರೀತಿಸುವವರೆಲ್ಲ ಹಿಂದುಗಳು. ಜಗತ್ತಿನಲ್ಲಿ ಇಂದು ದ್ವೇಷದ ವಾತಾವರಣ ನರ‍್ಮಾಣ ಆಗಿದೆ. ನಮ್ಮ ದೇಶದ ಎಲ್ಲ ಧರ್ಮೀಯರು ಸೌಹಾರ್ದವಾಗಿ ಬದುಕುತ್ತಿದ್ದೇವೆ. ವಿವಿಧತೆಯಲ್ಲಿ ಏಕತೆ ಇರುವ ದೇಶ ನಮ್ಮದು ಕಾರಣ ನಮ್ಮ ದೇಶ ಜಗತ್ತಿಗೆ ಮಾದರಿ ಆಗಿದೆ ಎಂದರು.

ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಚೇರಮನ್ ಪವನ ಕತ್ತಿ ಪ್ರಾಸ್ತಾವಿಕವಾಗಿ ಮಾತನಾಡಿ ತಾಲೂಕಿನ ಹೋಬಳಿ ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಮ್ಮಲ್ಲಿ ದೇಶಾಭಿಮಾನ ಮತ್ತು ಏಕತೆ ಬೆಳೆಯುತ್ತದೆ ಎಂದರು. ಮಹಾಂತೇಶ್ವರ ವಿರಕ್ತಮಠದ ಶಿವಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡುತ್ತಾ ಹುಕ್ಕೇರಿ ತಾಲೂಕಿನಲ್ಲಿ ಕೋಮು ಸೌಹಾರ್ದತೆ ಕಾಪಾಡಿಕೊಂಡು ಬಂದ ಹೆಗ್ಗಳಿಕೆ ಕತ್ತಿ ಕುಟುಂಬಕ್ಕೆ ಸಲ್ಲುತ್ತದೆ ಎಂದರು. ಪ್ರಾರಂಭದಲ್ಲಿ ಗೋ ಪೂಜೆ, ಭಗವಾ ಧ್ವಜ ಆರೋಹಣದ ಮೂಲಕ ಭವ್ಯ ಶೋಭಾ ಯಾತ್ರೆ ಜರುಗಿತು.

ಶಾಸಕ ನಿಖಿಲ ಕತ್ತಿ ಅಧ್ಯಕ್ಷತೆ ವಹಿಸಿದ್ದರು. ಪೃಥ್ವಿ ಕತ್ತಿ, ವಕೀಲರಾದ ರಾಮಚಂದ್ರ ಜೋಶಿ, ಪ್ರಕಾಶ ಮುತಾಲಿಕ ಸೇರಿದಂತೆ ಆರ್.ಎಸ್.ಎಸ್ ಪ್ರಮುಖರು, ಜನಪ್ರತಿನಿಧಿಗಳು, ಮುಖಂಡರಿದ್ದರು. ಪವನ ಕತ್ತಿ ಸ್ವಾಗತಿಸಿದರು.






