ಸ್ಥಳೀಯ ಅಡವಿಸಿದ್ದೇಶ್ವರ ಮಠದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ನಿಮಿತ್ಯ ಹಮ್ಮಿಕೊಂಡ ಸಭೆಯನ್ನುದ್ದೇಶಿಸಿ ಶಾಸಕ ನಿಖಿಲ ಕತ್ತಿ ಮಾತನಾಡಿದರು. ಮಹಾವೀರ ನಿಲಜಗಿ, ಎ,ಕೆ, ಪಾಟೀಲ, ಉದಯ ಹುಕ್ಕೇರಿ, ರೇಖಾ ಚಿಕ್ಕೋಡಿ ಇತರರಿದ್ದರು.
ಹುಕ್ಕೇರಿ: ನಿಪ್ಪಾಣಿ ಸಕ್ಕರೆ ಕಾರ್ಖಾನೆ ಒಂದು ಸಾವಿರ ಕೋಟಿ ರೂ. ಸಾಲದಲ್ಲಿದೆ. ಘಟಪ್ರಭಾ ಸಕ್ಕರೆ ಕಾರ್ಖಾನೆ ಕೂಡಾ ಸಾಲದ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿದ್ದು ಅದನ್ನು ಬೇರೆಯವರು ನಡೆಸುತ್ತಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಸಾವಿರಾರು ಸಮಸ್ಯೆ ಇಟ್ಟುಕೊಂಡ ವಿರೋಧಿಗಳಿಗೆ ನಮ್ಮ ಕ್ಷೇತ್ರದ ಸಹಕಾರಿ ಸಂಘದ ಚುನಾವಣೆ ಪ್ರಚಾರದಲ್ಲಿ ತೊಡಗಲು ಅರ್ಹತೆ ಇಲ್ಲವೆಂದು ಶಾಸಕ ನಿಖಿಲ ಕತ್ತಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ಪಟ್ಟಣದ ಅಡವಿಸಿದ್ದೇಶ್ವರ ಮಠದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಹುಕ್ಕೇರಿ ತಾಲೂಕ ಸ್ವಾಭಿಮಾನಿ ಪೆನಲ್ ವತಿಯಿಂದ ಹಮ್ಮಿಕೊಂಡ ಚುನಾವಣೆ ಪ್ರಚಾರದಲ್ಲಿ ಮಾತನಾಡಿದರು. ವಾಮಮಾರ್ಗದಿಂದ ವಿದ್ಯುತ್ ಸಹಕಾರಿ ಸಂಘದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ವಿರೋಧಿಗಳು ಮೂರು ತಿಂಗಳ ಸುಳ್ಳು ಸಾಧನೆ ಹೇಳಿಕೊಂಡು ಪ್ರಚಾರ ಮಾಡುವ ವ್ಯಕ್ತಿಗಳ ಮಾತನ್ನು ಮತದಾರರು ನಂಬುವುದಿಲ್ಲ. ನಮ್ಮ ಕ್ಷೇತ್ರದ ಮತದಾರರು ಪ್ರಬುದ್ದರಾಗಿದ್ದಾರೆ. ದಿ. ಉಮೇಶ ಕತ್ತಿ ಅವರು ತಾಲೂಕಿನ ತೋಟಪಟ್ಟಿಯ 16 ಸಾವಿರ ಕುಟುಂಬಗಳಿಗೆ ನಿರಂತರ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ 44 ಕೋಟಿ ರೂ ಯೋಜನೆಯ ಪ್ರಸ್ತಾವನೆಯನ್ನು ಸನ್ 2022ರಲ್ಲಿ ಸರ್ಕಾರಕ್ಕೆ ಸಲಿಸಿದ್ದರು.ಅದಕ್ಕೆ ಇಲ್ಲಿಯವರೆಗೆ ಕಾಂಗ್ರೆಸ್ ಸರಕಾರ ಮಂಜೂರಾತಿ ನೀಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಅದನ್ನು ಮಂಜೂರಾತಿ ಮಾಡಿಸಿದ್ದರೆ ನಾವು ಮತ್ತು ನಮ್ಮ ವಿದ್ಯುತ್ ಸಹಕಾರಿ ಸಂಘದ ಸದಸ್ಯರು ಅಭಿನಂದಿಸುತ್ತಿದ್ದೇವು. ಅದನ್ನು ಬಿಟ್ಟು ರೈತರಿಂದ ಅರ್ಧ ಹಣ ಪಡೆದು ಉಳಿದ ಅರ್ಧ ಹಣವನ್ನು ಪಂಚಾಯತಿಗಳಿ0ದ ತುಂಬಿಸಿ ನಿರಂತರ ಜ್ಯೋತಿ ಯೋಜನೆ ಪ್ರಾರಂಭಿಸಿದೆವು ಎಂದು ಹೇಳುತ್ತಿರುವುದು ಸಾಧನೆ ಆಗುವುದಿಲ್ಲ.

ಕಾಂಗ್ರೆಸ ಪಕ್ಷದ ಹಿರಿಯ ರಾಜಕಾರಣಿ, ಮಾಜಿ ಸಚಿವ ಎ.ಬಿ.ಪಾಟೀಲ ಅವರ ಜೊತೆಗೆ ನಾನು ಶೀಘ್ರದಲ್ಲಿ ನಿರಂತರ ಜ್ಯೋತಿ ಯೋಜನೆ ಪ್ರಸ್ತಾವಣೆಗೆ ಅನುದಾನ ಮಂಜೂರಾತಿ ಮಾಡಿಸುತ್ತೇನೆ.ಜನರಿಂದ ನಯಾ ಪೈಸೆ ತೆಗೆದುಕೊಳ್ಳದೆ ಈ ಯೋಜನೆಗೆ ಚಾಲನೆ ನೀಡುತ್ತೇವೆ ಎಂದರು.
ಯುವ ಮುಖಂಡ ವಿನಯಗೌಡ ಪಾಟೀಲ ಮಾತನಾಡಿ ಸುಳ್ಳಿನ ಸರಮಾಲೆ ಸುರಿಯುತ್ತಿರುವ ನಾಯಕರಿಗೆ ಪ್ರಚಾರದಲ್ಲಿ ಜನರು ಸೇರುತ್ತಿಲ್ಲ. ಬೇರೆ ಕ್ಷೇತ್ರದ ಜನರನ್ನು ಕರೆಯಿಸಿ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಹೆಸುರುವಾಸಿಯಾದ ವಿದ್ಯುತ್ ಸಹಕಾರಿ ಸಂಘವು ಗ್ರಾಹಕರ ಮೆಚ್ಚುಗೆ ಪಡೆದು ಸುಸುಜ್ಜಿತವಾಗಿ ಕಾರ್ಯನಿರ್ವಹಿಸುತ್ತಿದೆ. ವಿರೋಧಿಗಳು ವಿದ್ಯುತ್ ಸಹಕಾರಿ ಸಂಘ ಮುಚ್ಚಿಸಿ, ಕೆ.ಇ.ಬಿಗೆ ಒಪ್ಪಿಸುವ ಹುನ್ನಾರದಲ್ಲಿದ್ದಾರೆ. ಮತದಾರರು ಜಾಗ್ರತರಾಗುವಂತೆ ತಿಳಿಸಿದರು.
ಬಸವರಾಜ ಪಾಟೀಲ ಮಾತನಾಡಿ ಪಿ.ಎ ಆಡಳಿತ ಮಾಜಿ ಸಚಿವ ಶಶಿಕಾಂತ ನಾಯಿಕ ಅವರ ಅವಧಿಯಲ್ಲಿತ್ತು.ಇದೀಗ ಅಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ವಿರೋಧಿಗಳ ಈ ೩ ತಿಂಗಳ ಆಡಳಿತದಲ್ಲಿ ಪಿ.ಎ ಗಳ ಮುಂದೆ ನಮ್ಮನ್ನು ತೊರೆದು ಹೋದವರು ಕೈ ಕಟ್ಟಿ ನಿಲ್ಲುವುದು ಹೇಸಿಗೆ ಮೂಡಿಸಿದೆ. ಕಾರಣ ಅದನ್ನು ತಪ್ಪಿಸಲು ನೀವು ಕತ್ತಿ ಮತ್ತು ಎ.ಬಿ.ಪಾಟೀಲರ ನೇತೃತ್ವದ ಸ್ವಾಭಿಮಾನಿ ಪೆನಲ್ಗೆ ಮತ ನೀಡುವಂತೆ ವಿನಂತಿಸಿದರು.
ಮಹಾವೀರ ಸಮೂಹ ಸಂಸ್ಥೆಗಳ ಅಧ್ಯಕ್ಷ ಮಹಾವೀರ ನಿಲಜಗಿ, ಮುಖಂಡರಾದ ಎ,ಕೆ, ಪಾಟೀಲ, ಉದಯ ಹುಕ್ಕೇರಿ, ರೇಖಾ ಚಿಕ್ಕೋಡಿ, ರುಕ್ಮೀಣಿ ಹಳಿಜೋಳ, ರವಿ ಜುಠಾಳೆ, ಅಪ್ಪುಸ್ ತುಬಚಿ, ಸುಹಾಸ ನೂಲಿ, ಪ್ರಜ್ವಲ ನಿಲಜಗಿ, ಮೈನುದಿನ್ ಮೋಮಿನ್, ಇಲಿಯಾಸ ಅತ್ತಾರ, ಎಸ್.ಆಯ್.ಸಂಬಾಳ, ವಿರುಪಾಕ್ಷ ಅಲಗರಾವುತ, ರಾಜು ಮುನ್ನೋಳಿ, ಸಂಜು ನಿಲಜಗಿ ಮತ್ತಿತರರಿದ್ದರು. ಸುನೀಲ ಭೈರನ್ನವರ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.





