ಸ್ಥಳೀಯ ಕೋರ್ಟ ವೃತ್ತದಲ್ಲಿ ಕಬ್ಬು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ತಡೆದು ರೈತರು ಪ್ರತಿಭಟನೆ ನಡೆಸಿದರು. ರಾಮಚಂದ್ರ ಜೋಶಿ, ಗೋಪಾಲ ಮರಬಸ್ಸನವರ, ಪ್ರಭು ವಂಟಮೂರಿ, ತಮ್ಮನಗೌಡ ಪಾಟೀಲ, ಅಮರೇಶ ಬನ್ನಕ್ಕಗೋಳ ಮತ್ತಿತರರಿದ್ದರು.
ಹುಕ್ಕೇರಿ : ರೈತರ ಬೇಡಿಕೆಗೆ ಸ್ಪಂದಿಸದ ರಾಜ್ಯ ಮತ್ತು ಕೇಂದ್ರ ಸರಕಾರದ ಧೋರಣೆ ರೈತರಲ್ಲಿ ಆಕ್ರೋಶ ಹೆಚ್ಚಿಸುತ್ತಿದೆ. ವರ್ಷವಿಡಿ ಸಾಲಸೋಲ ಮಾಡಿ ಬೆಳೆದ ಕಬ್ಬಿಗೆ ಯೋಗ್ಯ ಬೆಲೆ ನೀಡುವಂತೆ ರೈತರು ಹಗಲಿರುಳು ಹೋರಾಟ ನಡೆಸುತ್ತಿದ್ದಾರೆ.ಈ ಕುರಿತು ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲವೆಂದು ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ, ಹಿರಿಯ ನ್ಯಾಯವಾದಿ ರಾಮಚಂದ್ರ ಜೋಶಿ ಆರೋಪಿಸಿದರು.
ಶೂಕ್ರವಾರದಂದು ಸ್ಥಳೀಯ ಕೋರ್ಟ್ ವೃತ್ತ್ತದಲ್ಲಿ ಮಹಾರಾಷ್ಟç ರಾಜ್ಯದ ಸಕ್ಕರೆ ಕಾರಖಾನೆಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ವಾಹನ ತಡೆದು ಪ್ರತಿಭಟಿಸುತ್ತಿದ್ದ ರೈತ ಹೋರಾಟಗಾರರನ್ನುದ್ದೇಶಿಸಿ ಮಾತನಾಡಿದರು. ಈಗಾಗಲೇ ಮಹಾರಾಷ್ಟ್ರದಲ್ಲಿ ರೈತ ಶೇತ್ಕರಿ ಸಂಘಟನೆಯಿಂದ ಅಲ್ಲಿನ ರೈತರು ಪ್ರತಿ ಟನ್ಗೆ ರೂ 3700 ದರ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ. ನಮ್ಮ ಉತ್ತರ ಕರ್ನಾಟಕದ ರೈತರು ಹಲವಾರು ದಿನಗಳಿಂದ ಪ್ರತಿ ಟನ್ಗೆ 3550ರೂ ಬೆಲೆ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಇಬ್ಬರೂ ಸಚಿವರು ಮತ್ತು ಶಾಸಕರ ಮಾಲೀಕತ್ವದ ಸಕ್ಕರೆ ಕಾರಖಾನೆಗಳು ಇವೆ. ಅದರಿಂದ ರೈತರ ಬೇಡಿಕೆಗೆ ರಾಜ್ಯ ಸರಕಾರ ಸ್ಪಂದಿಸುತ್ತಿಲ್ಲವೆಂದರು.
ರೈತ ಸಂಘಟನೆ ಅಧ್ಯಕ್ಷ ಗೋಪಾಲ ಮರಬಸ್ಸನವರ, ಮುಖಂಡರಾದ ತಮ್ಮನಗೌಡ ಪಾಟೀಲ, ಪ್ರಭು ವಂಟಮೂರಿ, ಅಮರೇಶ ಬನ್ನಕ್ಕಗೋಳ ಮಾತನಾಡಿ ರೈತರ ಬೇಡಿಕೆಗೆ ಸಕ್ಕರೆ ಕಾರ್ಖಾನೆಗಳು ಸ್ಪಂದಿಸದಿದ್ದರೆ ಕಬ್ಬು ಸಾಗಾಣಿಕೆಯನ್ನು ತಡೆದು ಕಾರ್ಖಾನೆಗಳನ್ನು ನಡೆಸದಂತೆ ನೋಡಿಕೊಳ್ಳುತ್ತೇವೆ. ಈಗಾಗಲೇ ಹಲವಾರು ಬಾರಿ ರೈತರು ಎಚ್ಚರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಸ್ಪಂದಿಸಿಲ್ಲ. ಇದೇ ರೀತಿ ಅವರು ಮೊಂಡಾಟ ನಡೆಸಿದರೆ ರೈತರು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಸಂಪೂರ್ಣ ವಾಹನ ಸಂಚಾರ ಸ್ಥಗಿತಗೊಳಿಸುವುದಾಗಿ ಎಚ್ಚರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಎಲ್ಲ ರೈತರೂ ಕಬ್ಬಿಗೆ ಯೋಗ್ಯ ಬೆಲೆ ಘೋಷಣೆ ಆಗುವವರೆಗೆ ಕಬ್ಬು ಕೆತ್ತನೆ ಮತ್ತು ಸಾಗಾಟ ನಡೆಸದಂತೆ ವಿನಂತಿಸಿಕೊಂಡಿದ್ದಾರೆ. ಪ್ರತಿಭಟನೆಯಲ್ಲಿ ರೈತ ಮುಖಂಡರು ಮತ್ತು ರೈತರಿದ್ದರು.






