ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಿಶ್ವ ಮಾನಸಿಕ ದಿನಾಚರಣೆಯನ್ನು ಹಿರಿಯ ನ್ಯಾಯಾಧೀಶ ರಾಜಣ್ಣ ಸಂಕಣ್ಣನವರ ಉದ್ಘಾಟಿಸಿದರು. ಡಾ.ಉದಯ ಕುಡಚಿ, ಮಹಾಂತೇಶ ಬಸ್ಸಾಪೂರೆ, ಕೆ.ಬಿ.ಕುರಬೇಟ ಇತರರಿದ್ದರು.
ಹುಕ್ಕೇರಿ : ಚಿಕ್ಕವರು ಸೇರಿದಂತೆ ವಯೋವೃದ್ಧರವರೆಗೆ ಪ್ರತಿಯೊಬ್ಬರು ನಮ್ಮದೇ ಆದ ಕೆಲಸಗಳ ಒತ್ತಡದಿಂದ ಮಾನಸಿಕ ಕ್ಷೋಭೆ ಅನುಭವಿಸುತ್ತಿದ್ದೇವೆ.ಹಾಗಂತಾ ಮಾನಸಿಕ ಅಸ್ವಸ್ಥರಲ್ಲ.ಆದರೆ ಸರಳ ಮತ್ತು ಸ್ವಸ್ಥ ಜೀವನ ರೂಪಿಸಿಕೊಳ್ಳುವಲ್ಲಿ ಎಡವಿದ್ದೇವೆ ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶ ರಾಜಣ್ಣ ಸಂಕಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳವಾರದಂದು ಹುಕ್ಕೇರಿ ಹೊರವಲಯದ ಕ್ಯಾರಗುಡ್ಡ ಬಳಿ ಇರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಿಶ್ವ ಮಾನಸಿಕ ಮತ್ತು ಹಿರಿಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಬೇರೊಬ್ಬರನ್ನು ನೋಡಿ ಅವರಂತೆ ನಾವು ಬದುಕಬೇಕೆಂಬ ಅಭಿಲಾಷೆ ಇರಬಾರದು. ಊಟ, ನಿದ್ದೆ ಮತ್ತು ಕರ್ತವ್ಯದಲ್ಲಿ ಸಮಯ ಪರಿಪಾಲನೆ ಅನುಸರಿಸಬೇಕು. ಒತ್ತಡ ಮುಕ್ತ ಬದುಕು ನಮ್ಮದಾಗಬೇಕು ಎಂದರು. ಸೋಶಿಯಲ್ ಮೀಡಿಯಾಗಳಲ್ಲಿ ಬರುವ ಸುಳ್ಳು ಸಂಗತಿಗಳನ್ನು ಅರಿತುಕೊಳ್ಳದೇ ನಾವು ಸೈಬರ್ ಅಪರಾಧಿಗಳಿಗೆ ಬಲಿಯಾಗುತ್ತೇವೆ. ಅದಕ್ಕಾಗಿ ಟಿ.ವಿ ಮತ್ತು ಮೋಬೈಲ್ ಅವಶ್ಯಕತೆ ಇದ್ದಷ್ಟು ಬಳಸಬೇಕೆಂಬ ಸಲಹೆ ನೀಡಿದರು.
ತಾಲೂಕಾ ವೈದ್ಯಾಧಿಕಾರಿ ಉದಯ ಕುಡಚಿ ಅವರು ಮಾತನಾಡಿ ಮಾನಸಿಕ ಒತ್ತಡಗಳಿಂದ ಆಹಾರ ಸೇವನೆ ಮತ್ತು ನಿದ್ದೆ ಸರಿಯಾಗಿ ಮಾಡದ ಕಾರಣದಿಂದ ಅನೇಕ ಅನಾರೋಗ್ಯಗಳು ಉಂಟಾಗುತ್ತವೆ. ಅದರಿಂದ ಯೋಗ, ವಾಯು ವಿಹಾರ ಮತ್ತು ಪೌಷ್ಟಿಕಾಂಶಗಳನ್ನು ಹೊಂದಿರುವ ಆಹಾರ ಸೇವಿಸಬೇಕು. ಇದರಿಂದ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ ಎಂದರು. ನ್ಯಾಯವಾದಿ ಕೆ.ಪಿ ಶಿರಗಾಂವಕರ ಮಾತನಾಡಿ ಸಾಮಾನ್ಯ ಕಾನೂನುಗಳ ಕುರಿತು ವಿವರಿಸಿದರು.
ಕಾಲೇಜಿನ ಪ್ರಾಚಾರ್ಯ ಪ್ರಕಾಶ ಲಕ್ಷೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಪರ ಸರಕಾರಿ ವಕೀಲರಾದ ಅನೀಲ ಕರೋಶಿ, ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ, ಉಪಾಧ್ಯಕ್ಷ ಬಿ.ಎಂ.ಜಿನರಾಳಿ, ಕಾರ್ಯದರ್ಶಿ ಎಸ್.ಜಿ.ನದಾಫ, ಪೋಲಿಸ್ ಇನಸ್ಪೆಕ್ಟರ್ ಮಹಾಂತೇಶ ಬಸ್ಸಾಪೂರೆ ಮತ್ತಿತರರಿದ್ದರು. ಆರ್.ಬಿ.ಪಾಟೀಲ ನಿರೂಪಿಸಿದರು. ಎಸ್.ಟಿ.ಸಾಳುಂಕೆ ವಂದಿಸಿದರು.





