ಹುಕ್ಕೇರಿ ಪಟ್ಟಣದ ಪತ್ರಕರ್ತರು ಮಾಜಿ ಸಂಸದ ರಮೇಶ ಕತ್ತಿ ಅವರನ್ನು ಸತ್ಕರಿಸಿದರು. ಪಿ.ಜಿ.ಕೊಣ್ಣೂರ, ಬಾಬು ಸುಂಕದ, ಸಂಜೀವ ಮುತಾಲಿಕ, ಬಸವರಾಜ ಕೊಂಡಿ, ಡಾ. ಸೋಹನ ವಾಗೋಜಿ ಇತರರಿದ್ದರು.
ಹುಕ್ಕೇರಿ: ತಾಲೂಕಿನ ಜನ ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣೀಕ ಕ್ಷೇತ್ರದಲ್ಲಿ ನಮ್ಮ ಕುಟುಂಬವನ್ನು ಪ್ರೀತಿ ವಿಶ್ವಾಸದಿಂದ ಬೆಳೆಸಿದ್ದಾರೆ. ಅವರ ಪ್ರೀತಿಗೆ ನಾವು ಯಾವಾಗಲೂ ಚಿರಋಣಿಯಾಗಿದ್ದೇವೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಶನಿವಾರದಂದು ತಾಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವರಾಜ ಶುಗರ್ ಇಂಡಸ್ಟ್ರೀಜ್ ನಲ್ಲಿ ಹುಕ್ಕೇರಿ ಪಟ್ಟಣದ ಪತ್ರಕರ್ತರ ಬಳಗದಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು. ತಾಲೂಕಿನ ಜನರ ಬೆಂಬಲದಿಂದ ನಮ್ಮ ತಂದೆ ದಿ. ವಿಶ್ವನಾಥ ಕತ್ತಿ, ಅಣ್ಣ ದಿ. ಉಮೇಶ ಕತ್ತಿ, ಶಾಸಕ ನಿಖಿಲ ಕತ್ತಿ ಹಾಗೂ ನಾನು ಮತ್ತು ಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನಮಾನ ಹೊಂದಿದ್ದೇವೆ ಎಂದರು. ನಮ್ಮ ತಂದೆಯ ನಿಧನಾನಂತರ ಕಿರಿಯ ವಯಸ್ಸಿನಲ್ಲಿ ಸಹಕಾರಿ ಕ್ಷೇತ್ರದ ಮೂಲಕ ಸಮಾಜ ಸೇವೆ ಪ್ರಾರಂಭಿಸಿದ ನಾನು ಡಿಸಿಸಿ ಬ್ಯಾಂಕಿಗೆ 28 ವರ್ಷ ಅಧ್ಯಕ್ಷನಾಗಿದ್ದು ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದನಾಗಿ ಕಾರ್ಯ ನಿರ್ವಹಿಸಿದ್ದು ಇದಕ್ಕೆ ನಿದರ್ಶನವೆಂದರು.
ಇತ್ತೀಚೆಗೆ ನಡೆದ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ನಮ್ಮ ವಿರೋಧಿಗಳು ಹಣ, ತೋಳಬಲ ಮತ್ತು ಅಧಿಕಾರ ದುರುಪಯೋಗ ಮಾಡಿಕೊಂಡು ನಮ್ಮನ್ನು ಸೋಲಿಸಲು ಪ್ರಯತ್ನಿಸಿದರು. ಆದರೆ ತಾಲೂಕಿನ ಜನ ನಮ್ಮ ಕೈ ಬಿಡಲಿಲ್ಲವೆಂದರು. ಈ ಗೆಲುವು ನಮಗೆ ನೂರಾನೆ ಬಲ ತಂದು ಕೊಟ್ಟಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯ ಜತೆಗೆ ರಾಜ್ಯಾದ್ಯಂತ ಸಂಚರಿಸಿ ಜನರಲ್ಲಿ ಸ್ವಾಭಿಮಾನದ ಛಲ ಹೆಚ್ಚಿಸುವುದೇ ನನ್ನ ಗುರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ತಾಲೂಕಿನ ನೂರಾರು ಜನ ಮತ್ತು ಜನಪ್ರತಿನಿಧಿಗಳು ಆಗಮಿಸಿ ರಮೇಶ ಕತ್ತಿ ಅವರನ್ನು ಅಭಿನಂದಿಸಿದರು. ವಿದ್ಯುತ್ ಸಹಕಾರಿ ಸಂಘದ ನೌಕರರು ಮಾಜಿ ಸಂಸದರನ್ನು ಸತ್ಕರಿಸಿದರು.
ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕರಾದ ಪೃಥ್ವಿ ಕತ್ತಿ, ಅಜಿತ ಮುನ್ನೋಳಿ, ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪಾಟೀಲ, ರೆಸಿಡೆಂಟ ಇಂಜನೀಯರ ನೇಮಿನಾಥ ಖೇಮಲಾಪೂರೆ, ವ್ಯವಸ್ಥಾಪಕ ದುರದುಂಡಿ ನಾಯಿಕ, ಬಸವರಾಜ ವಾಜಂತ್ರಿ, ಅಭಿಯಂತರ ಉದಯ ಮಗದುಮ್ಮ ಮುಖಂಡರಾದ ರಾಯಪ್ಪಾ ಡೂಗ, ರವೀಂದ್ರ ಕಲ್ಲಟ್ಟಿ, ಬಸವರಾಜ ನಾಗಣ್ಣವರ, ಪತ್ರಕರ್ತರಾದ ಪಿ.ಜಿ.ಕೊಣ್ಣೂರ, ಬಾಬು ಸುಂಕದ, ಸಂಜೀವ ಮುತಾಲಿಕ, ಬಸವರಾಜ ಕೊಂಡಿ, ಡಾ. ಸೋಹನ ವಾಗೋಜಿ ಸೇರಿದಂತೆ ಅನೇಕರಿದ್ದರು.





