ಹುಕ್ಕೇರಿ: ಜನಪರ ಕಾರ್ಯಗಳು ನಮಗೆ ಹೆಸರು ಮತ್ತು ಜನಪ್ರಿಯತೆ ತಂದು ಕೊಡುತ್ತವೆ ಎಂಬುದಕ್ಕ್ಕೆ ನಮ್ಮ ತಂದೆ ದಿ.ಉಮೇಶ ಕತ್ತಿ ಅವರ ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡು ನಮಗೆ ಸಂತೈಸಿದ ಮುಖಂಡರು ಮತ್ತು ಜನರ ಪ್ರೀತಿ ವಿಶ್ವಾಸವೇ ನಿದರ್ಶನ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಶನಿವಾರದಂದು ನಡೆದ ಮಾಜಿ ಸಚಿವ ದಿ. ಉಮೇಶ ಕತ್ತಿ ಅವರ ತೃತೀಯ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ತಂದೆ ನಿಧನಾನಂತರ ನಮ್ಮ ಕುಟುಂಬಕ್ಕೆ ಧೈರ್ಯ ತುಂಬಿ ನಾವು ನಿಮ್ಮ ಜತೆಗೆ ಇದ್ದೇವೆ ಎಂಬ ಭರವಸೆಯಿತ್ತ ಜನ 3 ನೇ ಪುಣ್ಯ ಸ್ಮರಣೆಯಲ್ಲೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅದೇ ಪ್ರೀತಿ ವಿಶ್ವಾಸ ತೋರಿಸಿದ್ದಾರೆ. ಅದಕ್ಕಾಗಿ ನಮ್ಮ ಕುಟುಂಬದ ಪರವಾಗಿ ಕ್ಷೇತ್ರದ ಮತ್ತು ಜಿಲ್ಲೆಯ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಮಾಜಿ ಸಂಸದ ರಮೇಶ ಕತ್ತಿ ವಿಶ್ವರಾಜ ಶುರ‍್ಸ್ ಆವರಣದಲ್ಲಿ ದಿ.ಉಮೇಶ ಕತ್ತಿ ಅವರ ಪ್ರತಿಮೆಗೆ ಪೂಜೆ ಸಲ್ಲಿಸಿ ಮಾತನಾಡುತ್ತಾ ನಮ್ಮ ಅಣ್ಣ ಇಲ್ಲವೆಂಬ ಭಾವ ಬರುತ್ತಿಲ್ಲ. ಅವನು ಇದ್ದಾನೆ, ಬರುತ್ತಾನೆ ಎಂಬ ಮನೋಭಾವ ನನಗೆ ಆಗುತ್ತಿದೆ. ಆದರೆ ಅವನಿಲ್ಲದ ನೋವು ಸತ್ಯ. ಕುಟುಂಬದ ಹಿತೈಷಿಗಳಲ್ಲಿ ನಾವು ಆ ನೋವನ್ನು ಮರೆಯುತ್ತಿದ್ದೇವೆ ಎಂದರು.

ಪ್ರಾರಂಭದಲ್ಲಿ ಶಾಸಕರು ಮತ್ತು ಅವರ ತಾಯಿ ಶೀಲಾ ಕತ್ತಿ ತಮ್ಮ ಮನೆಯಲ್ಲಿ ದಿ.ಉಮೇಶ ಕತ್ತಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಮಿಸಿದರು. ನಂತರ ಶಾಸಕ ನಿಖಿಲ ಕತ್ತಿ ಜನರೊಂದಿಗೆ ಉಮೇಶ ಕತ್ತಿ ಅವರ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು.
ಅರ್ಬನ್ ಬ್ಯಾಂಕ ಚೇರಮನ್ ಪವನ ಕತ್ತಿ, ಸಂದೀಪ ಕತ್ತಿ, ಸುಧೀರ ಕತ್ತಿ, ಮುರಗೇಶ ಕತ್ತಿ, ಕಿಶೋರ ಕತ್ತಿ, ಚೇತನ ಕತ್ತಿ, ವಿನೋದ ಕತ್ತಿ, ಸಂಗಪ್ಪಾ ಕತ್ತಿ, ಗಿರಿಮಲ್ಲಯ್ಯಾ ಮಠಪತಿ, ಅಶೋಕ ಬೆಲ್ಲದ, ಸತೀಶ ಜಾಗನೂರಿ, ಮುರಗೇಶ ಮಾಳಗಿ, ಲಕ್ಷ್ಮಣ ರಾಮದುರ್ಗಿ, ಬಿ.ಎಸ್.ಪೂಜೇರಿ, ಮುಖಂಡರಾದ ದಿಲೀಪ ವಾಳಿಖಿಂಡಿ, ಗಜಾನನ ಕೊಳ್ಳಿ, ಕಲಗೌಡ ಪಾಟೀಲ, ಬಸವರಾಜ ಹುಂದ್ರಿ, ರಾಚಯ್ಯಾ ಹಿರೇಮಠ, ಅರ್ಜುನ ಯಲ್ಲನಾಯ್ಕ ಪಾಟೀಲ, ಮಹಾನಿಂಗ ಸನದಿ, ಎಸ್.ಆರ್. ಕರ್ಕಿನಾಯಿಕ, ಸುಚಿತ ಪಾಟೀಲ ಮತ್ತಿತರರಿದ್ದರು.





