ಸನ್ 2012ರಲ್ಲಿ ತುಮಕೂರಿನಲ್ಲಿ ನಡೆದ ರಾಷ್ಟ್ರೀಯ ಮಾಧ್ಯಮ ಮಹಾಮೇಳದಲ್ಲಿ ಬಾಬು ಸುಂಕದ ಅವರನ್ನು ಸನ್ಮಾನಿಸಿದ ದೃಶ್ಯ
ಇಂದಿನ ದಿನಾಚರಣೆ ಕೇಳಿ ನೋಡಿ ನನಗೆ ಸನ್ 2012ರಲ್ಲಿ ತುಮಕೂರಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ 65 ನೇ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧಿವೇಶನ ನೆನಪಾಯಿತು.

ಸಂಘದ ಈಗಿನ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರ ಜೊತೆಗೆ ಆಗ ನಾನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷನಾಗಿದ್ದೆ.
ಸನ್ 2012 ಅಕ್ಟೋಬರ್ ದಿ.12, 13 & 14 ರಂದು ತುಮಕೂರಿನ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಾಧ್ಯಮ ಮಹಾಮೇಳ ಅವಿಸ್ಮರಣೀಯ. ತುಮಕೂರ ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಆಗಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ, ತುಮಕೂರ ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ (ಈಗ ಗ್ರಹ ಮಂತ್ರಿ ಆಗಿರುವರು), ಕೇಂದ್ರ ಸರಕಾರದ ರೈಲ್ವೆ ಸಚಿವರಾಗಿದ್ದ ಕೆ.ಎಚ್.ಮುನಿಯಪ್ಪ, ವಿಧಾನ ಪರಿಷತ್ ಸದಸ್ಯರಾಗಿದ್ದ ಡಾ.ಎಂ.ಆರ್.ಹುಲಿನಾಯ್ಕರ ಮತ್ತಿತರರಿದ್ದರು.

ಸಮಾರೋಪ ಸಮಾರಂಭದಲ್ಲಿ ನನ್ನನ್ನು ಸಂಘದಿಂದ ಕೇಂದ್ರ ಸರಕಾರದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಅಂಬಿಕಾ ಸೋನಿ, ಕೇಂದ್ರ ಕಾರ್ಮಿಕ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ (ಈಗ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ.), ತುಮಕೂರ ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ, ವಿಧಾನ ಪರಿಷತ್ ಸದಸ್ಯರಾಗಿದ್ದ ಡಾ. ಎಂ.ಆರ್. ಹುಲಿನಾಯ್ಕರ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಉಪಾಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಸಂಘದ ರಾಜ್ಯ ಅಧ್ಯಕ್ಷ ಗಂಗಾಧರ ಮೊದಲಿಯಾರ್, ಸಹ ಉಪಾಧ್ಯಕ್ಷ ಶಿವಾನಂದ ತಗಡೂರ ಮತ್ತಿತರರು ಸನ್ಮಾನಿಸಿದರು.

- ರಾಷ್ಟ್ರೀಯ ಮಾಧ್ಯಮ ಮೇಳದಲ್ಲಿ ಶ್ರೀಲಂಕಾ, ನೇಪಾಳ ಇತರ ದೇಶಗಳಿಂದ ಪತ್ರಿಕಾ ಪ್ರತಿನಿಧಿಗಳು ಆಗಮಿಸಿದ್ದರು.
- ಸೌಭಾಗ್ಯ: ತುಮಕೂರ ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರ ಶ್ರೀಗಳ ಮಠದಲ್ಲಿ ನನಗೆ ವಾಸ್ತವ್ಯ ಕಲ್ಪಿಸಿದ್ದರು. ಅಲ್ಲಿದ್ದ ಮೂರು ದಿನ ಬೆಳಿಗ್ಗೆ ಸಿದ್ಧಗಂಗಾ ಶ್ರೀಗಳ ಭೇಟಿಯಾಗಿ ಅವರ ಆಶೀರ್ವಾದ ಪಡೆದಿದ್ದು ನನ್ನ ಸೌಭಾಗ್ಯ. ಪ್ರತಿಸಲ ಭೇಟಿಯಾದಾಗ ಅವರು ಕುಟುಂಬ ಸೌಖ್ಯಕ್ಕಿಂತ ನಾಡು ನುಡಿ ಮತ್ತು ಜನರ ಕುಶಲೋಪರಿ ವಿಚಾರಿಸುತ್ತಿದ್ದರು. ಅಂತಹವರ ಸಾನಿಧ್ಯದಲ್ಲಿ ಸಮ್ಮೇಳನ ಆಗಿರುವುದು ಪತ್ರಕರ್ತರಿಗೆ ಸ್ಮರಣೀಯ.
- ಸಂಘಟನೆಯಿಂದ ವಿಮುಖ: ಸನ್ 2012 ರಲ್ಲಿ ತಾಯಿಯ ಸ್ಥಾನದಲ್ಲಿದ್ದು ನನ್ನನ್ನು ಬೆಳೆಸಿದ ಅಕ್ಕನ ಸಾವು ಮತ್ತು ಸನ್ 2018ರಲ್ಲಿ ಮಡದಿಯ ನಿಧನ ಹಾಗೂ ಕೌಟುಂಬಿಕ ಸಮಸ್ಯೆಗಳಿಂದ ನಾನು ಸಂಘ ಮತ್ತು ಸಂಘಟನೆಗಳಿಂದ ದೂರಾಗಿದ್ದೇನೆ. ಇದೀಗ ಕೇವಲ ನನ್ನ ಹವ್ಯಾಸಕ್ಕಾಗಿ ಪತ್ರಿಕೋದ್ಯಮದಲ್ಲಿರುವೆ. ಯಾವುದೇ ಸಮಾಜಮುಖಿ ಮತ್ತು ಜನಪರ ಕಾರ್ಯಗಳು ಅಥವಾ ಸಂಘಟನೆಯ ಚಟಯವಟಿಕೆಗಳಿಗೆ ಬೆಂಬಲಿಸುತ್ತಿರುವೆ. ವಿನಃ ದೈಹಿಕವಾಗಿ ವಿಮುಖನಾಗಿದ್ದೇನೆ.





