ತಾಲೂಕಿನ ಬಡಕುಂದ್ರಿ ಹೊಳೆಮ್ಮಾ ದೇವಿ ಸಭಾಭವನದಲ್ಲಿ ನಡೆದ ಹುಕ್ಕೇರಿ ತಾಲೂಕಾ ವೃತ್ತಿನಿರತ ಛಾಯಾಗ್ರಾಹಕ ಸಭೆಯನ್ನು ಕೆ.ಪಿ.ಎ ನಿರ್ದೇಶಕ ಮಲ್ಲಿಕಾರ್ಜುನ ಕೆ.ಆರ್ ಉದ್ಘಾಟಿಸಿದರು. ಲಕ್ಷ್ಮಣ ಯಮಕನಮರ್ಡಿ, ಅಪ್ಪು ಹುಕ್ಕೇರಿ, ಬಾಬು ಸುಂಕದ, ರಾಜು ಕುರಂದವಾಡೆ ಮತ್ತಿತರರಿದ್ದರು.
ಹುಕ್ಕೇರಿ: ಪ್ರಪ್ರಥಮ ಬಾರಿಗೆ ಉತ್ತರ ಕರ್ನಾಟಕದ ವಿಜಯಪುರದಲ್ಲಿ ಕೆ.ಪಿ.ಎ ನೇತೃತ್ವದಲ್ಲಿ ಇದೇ ತಿಂಗಳು ದಿನಾಂಕ ೨೬ ಮತ್ತು ೨೭ರಂದು ಛಾಯಾಗ್ರಾಹಕರ ಬೃಹತ್ ಸಮಾವೇಶ ಹಾಗೂ ಡಿಜಿ ಇಮೇಜ್ (ಪೋಟೊಗ್ರಾಫಿ) ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಜರುಗಲಿದೆ ಎಂದು ಕರ್ನಾಟಕ ಪೋಟೋಗ್ರಾಫರ್ ಸಂಘದ ರಾಜ್ಯ ನಿರ್ದೆಶಕ ಮಲ್ಲಿಕಾರ್ಜುನ ಕೆ.ಆರ್ ತಿಳಿಸಿದರು.
ರವಿವಾರದಂದು ಸಂಜೆ ತಾಲೂಕಿನ ಬಡಕುಂದ್ರಿ ಹೊಳೆಮ್ಮಾ ದೇವಿ ಸಭಾಭವನದಲ್ಲಿ ನಡೆದ ಹುಕ್ಕೇರಿ ತಾಲೂಕಾ ವೃತ್ತಿನಿರತ ಛಾಯಾಗ್ರಾಹಕ ಸಭೆಯಲ್ಲಿ ಮಾತನಾಡಿದರು. ಇಲ್ಲಿಯವರೆಗೆ ಇಂತಹ ಸಮಾವೇಶಗಳು ಬೆಂಗಳೂರು, ಹೈದ್ರಾಬಾದ್, ಮುಂಬೈಗೆ ಮಾತ್ರ ಸೀಮಿತವಾಗಿದ್ದವು.ಈ ಭಾಗದ ಪೋಟೊಗ್ರಾಫರ್ ಆಗ್ರಹದ ಮೇರೆಗೆ ವಿಜಯಪುರದಲ್ಲಿ ಇದನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕಾರಣ ಸಮಾವೇಶದ ಆ ಎರಡು ದಿನ ಬೆಳಗಾವಿ ಜಿಲ್ಲೆಯ ಎಲ್ಲ ಪೋಟೊಗ್ರಾಫರ್ಗಳು ತಮ್ಮ ನಿತ್ಯದ ಕಾಯಕ ತಡೆ ಹಿಡಿದು ಆಗಮಿಸಬೇಕೆಂದು ವಿನಂತಿಸಿದರು. ಸಮಾವೇಶದಲ್ಲಿ ನೂತನ ತಂತ್ರಜ್ಞಾನದ ಮಾಹಿತಿ, ಪೋಟೊಗ್ರಾಫರ್ ಉದ್ಯೋಗದಲ್ಲಿ ಉಂಟಾಗುತ್ತಿರುವ ಸಮಸ್ಯೆ ಅವುಗಳಿಗೆ ಪರಿಹಾರ ಹಾಗೂ ಸಂಘಟನೆಯಿಂದ ಸರಕಾರಕ್ಕೆ ಒತ್ತಾಯಿಸಬೇಕಾದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದರು.
ವೃತ್ತಿನಿರತ ಛಾಯಾಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ ಯಮಕನಮರ್ಡಿ, ಪತ್ರಕರ್ತ ಬಾಬು ಸುಂಕದ, ರಾಜು ಕುರಂದವಾಡಿ ಮಾತನಾಡಿ ಅಸಂಘಟಿತ ವಲಯದಲ್ಲಿ ಗುರುತಿಸಿಕೊಂಡ ಛಾಯಾಗ್ರಾಹಕರು ಇದೀಗ ಸಂಘಟನೆ ಮೂಲಕ ಸರಕಾರದ ಸೌಲಭ್ಯ ಪಡಯಲು ಮುಂದಾಗಿರುವುದು ಸಂತಸದ ಸಂಗತಿ. ಪತ್ರಕರ್ತರು ಮತ್ತು ಛಾಯಾಗ್ರಾಹಕರು ಪತ್ರಿಕೋದ್ಯಮ ಎರಡು ಕಣ್ಣುಗಳಿದ್ದಂತೆ ಕಾರಣ ಪೋಟೊಗ್ರಾಫರ ಸಂಘಟನೆಗೆ ಪತ್ರಕರ್ತರಿಂದ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.
ಸಂಘದ ತಾಲೂಕಾ ಘಟಕದ ಅಧ್ಯಕ್ಷ ಅಪ್ಪು ಹುಕ್ಕೇರಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ತಾಲೂಕಿನ ಸಂಘಟನೆಯ ಕುರಿತು ವಿವರಿಸಿದರು.ಇದೇ ಸಂದರ್ಭದಲ್ಲಿ ವಿಜಯಪುರದಲ್ಲಿ ನಡೆಯಲಿರುವ ಸಮಾವೇಶದ ಪಾಂಪ್ಲೇಟ್ಗಳನ್ನು ಬಿಡುಗಡೆಗೊಳಿಸಿದರು.
ಸಂಘದ ತಾಲೂಕಾ ಘಟಕದ ಉಪಾಧ್ಯಕ್ಷ ಶಿವಾನಂದ ಪಾಟೀಲ, ನಿರ್ದೇಶಕರಾದ ಮಂಜು ಮಜತಿ, ಭೀಮಪ್ಪಾ ಕಮತೆ ಮತ್ತಿತರರಿದ್ದರು. ಕಾರ್ಯದರ್ಶಿ ಬಸವರಾಜ ದಾರೋಜಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.






