ಹುಕ್ಕೇರಿಯ ಕ್ಯಾರಗುಡ್ಡದ ಸಮರ್ಥ ಸದ್ಗುರು ಅವಜೀಕರ ಧ್ಯಾನ ಯೋಗಾಶ್ರಮ ಮಠದ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಎಂ.ಎಲ್.ಸಿ ಅನುದಾನದಡಿ 10 ಲಕ್ಷ ರೂ ಬಿಡುಗಡೆಗೆ ಆದೇಶಿಸಿದ ಪತ್ರವನ್ನು ಆಶ್ರಮದ ಶ್ರೀಗಳಿಗೆ ಎಂ.ಎಲ್.ಸಿ ಲಖನ್ ಜಾರಕಿಹೊಳಿ ಹಸ್ತಾಂತರಿಸಿದರು. ರೋಹಿತ ಚೌಗಲಾ, ಬಾಹುಬಲಿ ಸೊಲ್ಲಾಪೂರೆ, ಎಂ.ಎಲ್.ಸಿ ಅವರ ಆಪ್ತ ಸಹಾಯಕ ಸದಾನಂದ ಕಲಾಲ ಇತರರಿದ್ದರು.
ಹುಕ್ಕೇರಿ: ಜಾತ್ಯಾತೀತ ಮನೋಭಾವದಿಂದ ಕೂಡಿದ ಇಂಚಗೇರಿ ಸಂಪ್ರದಾಯ. ಆ ತತ್ವದಡಿ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವ ಹುಕ್ಕೇರಿ ಹೊರವಲಯದ ಅವಜೀಕರ ಆಶ್ರಮ ಅಸಂಖ್ಯಾತ ಸದ್ಭಕ್ತರನ್ನು ಹೊಂದಿದೆ. ಆ ಭಕ್ತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸಮುದಾಯ ಭವನ ನಿರ್ಮಿಸಲು ವಿಧಾನ ಪರಿಷತ್ ಸದಸ್ಯರ ಅನುದಾನದಡಿ 10 ಲಕ್ಷ ರೂ ಮಂಜೂರಾತಿ ನೀಡಲಾಗಿದೆ ಎಂದು ಎಂ.ಎಲ್.ಸಿ ಲಖನ್ ಜಾರಕಿಹೊಳಿ ಹೇಳಿದರು.
ಶುಕ್ರವಾರದಂದು ಅವಜೀಕರ ಆಶ್ರಮದಲ್ಲಿ ನಡೆದ ಧಾರ್ಮಿಕ ಸಮಾವೇಶದಲ್ಲಿ ಮಾತನಾಡಿದರು. ಸನ್ 2025-26ನೇ ಸಾಲಿನಲ್ಲಿ ಬಿಡುಗಡೆಯಾದ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಹುಕ್ಕೇರಿಯ ಕ್ಯಾರಗುಡ್ಡದ ಸಮರ್ಥ ಸದ್ಗುರು ಅವಜೀಕರ ಧ್ಯಾನ ಯೋಗಾಶ್ರಮ ಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ “ಬಂಡವಾಳ ವೆಚ್ಚ” ಯೋಜನೆಯಡಿ 10 ಲಕ್ಷ ರೂ ಅನುದಾನ ಬಿಡುಗಡೆ ಮಾಡಿ ಪಂಚಾಯತ ರಾಜ್ಯ(ಇಂ) ಇಲಾಖೆಯಿಂದ ಕೈಗೊಳ್ಳಲು ತಿಳಿಸಲಾಗಿದೆ ಎಂದರು.

ಆಶ್ರಮದ ಮಲ್ಲಪ್ಪ ಮಹಾರಾಜರು ಮತ್ತು ಅಭಿನವ ಮಂಜುನಾಥ ಶ್ರೀಗಳು ಅನುದಾನ ಬಿಡುಗಡೆ ಪತ್ರ ಸ್ವೀಕರಿಸಿ ಮಾತನಾಡುತ್ತಾ ಧರ್ಮ ಕಾರ್ಯಗಳಿಗೆ ಯಾವಾಗಲೂ ಸ್ಪಂದಿಸುವ ಲಖನ್ ಜಾರಕಿಹೊಳಿ ಅವರ ಕಾರ್ಯ ಪ್ರಶಂಸನೀಯ. ವಿಧಾನ ಪರಿಷತ್ ಸದಸ್ಯರ ಈ ಕಾರ್ಯ ನಮ್ಮ ಸದ್ಭಕ್ತರಿಗೆ ಹರ್ಷ ತಂದಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಅದರ ಉದ್ಘಾಟನೆ ಸಹ ಅವರಿಂದ ನೆರವೇರಬೇಕೆಂದು ಆಶಿಸುತ್ತೇವೆ ಎಂದರು.
ಮುಖಂಡರಾದ ರೋಹಿತ ಚೌಗಲಾ, ಬಾಹುಬಲಿ ಸೊಲ್ಲಾಪೂರೆ, ಎಂ.ಎಲ್.ಸಿ ಅವರ ಆಪ್ತ ಸಹಾಯಕ ಸದಾನಂದ ಕಲಾಲ ಮತ್ತಿತರರಿದ್ದರು.





