ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ತಹಶೀಲ್ದಾರ ಬಲರಾಮ ಕಟ್ಟಿಮನಿ ಚಾಲನೆ ನೀಡಿದರು. ವೈದ್ಯರಾದ ಉದಯ ಕುಡಚಿ, ಎಂ.ಎಂ.ನರಸನ್ನವರ, ಎಂ.ಸಿ.ವಿಜಾಪೂರೆ, ಸುರೇಶ ಹಿತ್ತಲಮನಿ ಇತರರಿದ್ದರು.
ಹುಕ್ಕೇರಿ: ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಸರಕಾರ ಪ್ರತಿ ವರ್ಷ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ.ಈಗಾಗಲೇ ಈ ಯೋಜನೆ ಸದುದ್ದೇಶ ಯಶಸ್ವಿಯಾಗಿದ್ದು, ಪೋಲಿಯೋ ಹೋಗಲಾಡಿಸಲು ಪಾಲಕರ ಸಹಕಾರ ಅವಶ್ಯವೆಂದು ತಹಸೀಲ್ದಾರ ಬಲರಾಮ ಕಟ್ಟಿಮನಿ ಹೇಳಿದರು.
ಅವರು ರವಿವಾರದಂದು ಸ್ಥಳೀಯ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಲಸಿಕಾಕಾರರು ಬಸ್ ನಿಲ್ದಾಣ, ಸ್ಲಂ ಏರಿಯಾ, ಮತ್ತು ಕಾರಖಾನೆಗಳಿಗೆ ಬಂದಿರುವ ಕಬ್ಬು ಕೆತ್ತನೆ ಕಾರ್ಮಿಕರ ವಸತಿ ಪ್ರದೇಶಗಳಿಗೆ ಭೇಟಿ ನೀಡಿ ಯೋಜನೆ ಯಶಸ್ವಿಗೊಳಿಸಬೇಕೆಂದರು.
ತಾಲೂಕಾ ವೈದ್ಯಾಧಿಕಾರಿ ಉದಯ ಕುಡಚಿ ಅವರು ಮಾತನಾಡಿ ತಾಲೂಕಿನಲ್ಲಿ 43937 ಐದು ವರ್ಷದೊಳಗಿನ ಮಕ್ಕಳಿದ್ದು, ಅವುಗಳಿಗೆ ಲಸಿಕೆ ಹಾಕಿಸಲು 202 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕಾರ್ಯಕ್ರಮ ಯಶಸ್ಸಿಗಾಗಿ 808 ಲಸಿಕಕಾರರನ್ನು ನಿಯೋಜಿಸಲಾಗಿದೆ. ಎರಡು ಸಂಚಾರಿ ತಂಡಗಳು ಮತ್ತು ಆರು ಸಾರಿಗೆ ಬೂತ್‌ಗಳ ಜತೆಗೆ 45 ಮೇಲ್ವಿಚಾರಕ ಸಿಬ್ಬಂದಿಗಳನ್ನು ಆಯೋಜಿಸಿದ್ದೇವೆ ಎಂದರು. ಶೇ.100ರಷ್ಟು ಫಲಿತಾಂಶ ಸಾಧಿಸಲು ಶ್ರಮಿಸುತ್ತೇವೆ ಎಂದು ತಿಳಿಸಿದರು.

ಮುಖ್ಯ ವೈದ್ಯಾಧಿಕಾರಿ ಎಂ.ಎಂ.ನರಸನ್ನವರ, ವೈದ್ಯರಾದ ಎಂ.ಸಿ.ವಿಜಾಪುರೆ, ದೀಪಕ ಅಂಬಲಿ, ಸುರೇಶ ಹಿತ್ತಲಮನಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹಾದೇವಿ ಜಕಮತಿ, ನವೀನ ಬಾಯನಾಯಕ, ಸೋಮೇಶ ಅರಿಬೆಂಚಿ, ಪುರಸಭೆ ಮುಖ್ಯಾಧಿಕಾರಿ ಈಶ್ವರ ಸಿದ್ನಾಳ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೊಳೆಪ್ಪಾ ಎಚ್, ಕ್ಷೇತ್ರ ಸಮನ್ವಯಾಧಿಕಾರಿ ಎ.ಎಸ್.ಪದ್ಮಣ್ಣವರ, ಉದಯ ಹಜಾರೆ, ಅಂಜನಾ ಮೋಳೆ, ಹನುಮಂತ ಗೌಡರ, ಸರಸ್ವತಿ ದೊಡ್ಡಭಂಗಿ, ವಿಜಯ ಕುಂಬಾರ, ಮಂಜುನಾಥ ಬೆಟಗೇರಿ, ಅಮೃತ ದೊಡಮನಿ ಮತ್ತಿತರರಿದ್ದರು.





