ದಿ.ಉಮೇಶ ಕತ್ತಿ ಪಕ್ಷ ಮತ್ತು ಜಾತಿರಹಿತ ಜನನಾಯಕರು: ಜಗದೀಶ ಶೆಟ್ಟರ

ತಾಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವರಾಜ ಶುಗರ‍್ಸನಲ್ಲಿ ಹಮ್ಮಿಕೊಂಡ “ಉಮೇಶ ಕತ್ತಿ ಉತ್ತರ ಕರ್ನಾಟಕದ ಕನಸುಗಾರ” ಗ್ರಂಥ ಲೋಕಾರ್ಪಣೆ ಸಮಾರಂಭವನ್ನು ಶ್ರೀಗಳು, ಜನಪ್ರತಿನಿಧಿಗಳು ಉದ್ಘಾಟಿಸಿದರು.

ಹುಕ್ಕೇರಿ: ರಾಜ್ಯದಲ್ಲಿ ಪಕ್ಷ ರಹಿತವಾಗಿ ಜನಮನ್ನಣೆ ಗಳಿಸಿದ ಏಕೈಕ ಜನನಾಯಕ ದಿ. ಉಮೇಶ ಕತ್ತಿ. ಜನಪರ ಅಭಿವೃದ್ಧಿ ಕಾರ್ಯಗಳಲ್ಲಿ ಯಾರ ಮುಲಾಜಿಗೆ ಒಳಗಾಗದ ಅವರು ಎಲ್ಲ ಪಕ್ಷದ ನಾಯಕರ ಗೆಳೆತನ ಹೊಂದಿದ್ದರು. ತಮ್ಮದೇ ಆದ ವ್ಯಕ್ತಿತ್ವದಿಂದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಅವರಲ್ಲಿ ಜನಪರ ಕಾಳಜಿ ಇತ್ತು ಎಂದು ಬೆಳಗಾವಿ ಸಂಸದರು, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ ಹೇಳಿದರು.

        ಬುಧವಾರದಂದು ತಾಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವರಾಜ ಶುಗರ‍್ಸನಲ್ಲಿ ಹಮ್ಮಿಕೊಂಡ “ಉಮೇಶ ಕತ್ತಿ ಉತ್ತರ ಕರ್ನಾಟಕದ ಕನಸುಗಾರ” ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಅವರು ನೇರ ನಡೆ ನುಡಿಯ ವ್ಯಕ್ತಿಗಳಾಗಿದ್ದರು. ಅವರು ಕನಸುಗಳಿಗಿಂತ ನೈಜತೆಗೆ ಆದ್ಯತೆ ಕೊಟ್ಟವರು. ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರಕಾರ ವಿಫಲವಾಗಿದೆ ಎಂಬ ಕೊರಗು ಅವರನ್ನು ಸದಾ ಕಾಡುತ್ತಿತ್ತು ಎಂದರು.

   ದಿ.ಉಮೇಶ ಕತ್ತಿ ಅವರ ಸ್ಮರಣೆಯ ಸಾಕ್ಷಿ ಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಬಸನಗೌಡ ಯತ್ನಾಳ ಅವರು ನೇರ ದಿಟ್ಟ ನಿರಂತರ ವ್ಯಕ್ತಿತ್ವಕ್ಕೆ ಉಮೇಶ ಕತ್ತಿ ನಿದರ್ಶನ. ಬೇರೆ ಯಾರನ್ನು ಮೆಚ್ಚಿಸುವುದಕ್ಕಿಂತ ಕ್ಷೇತ್ರದ ಜನರಿಗೆ ಮನ್ನಿಸಿ ಅವರಿಗೆ ಲೆಕ್ಕ ಕೊಡಬೇಕು ಎಂಬ ತತ್ವ ಉಮೇಶ ಕತ್ತಿ ಅವರದ್ದಾಗಿತ್ತು. ಬೆಳಗಾವಿ ಜಿಲ್ಲೆಯ ರಾಜಕೀಯ ವಿಘಟನೆಯತ್ತ ಸಾಗಿದ್ದು, ಅದನ್ನು ಎದುರಿಸಿ ಅಭಿವೃದ್ಧಿ ಪರ್ವದತ್ತ ತೆಗೆದುಕೊಂಡು ಹೋಗಲು ಕತ್ತಿ ಕುಟುಂಬದ ಜತೆಗೆ ನಾವೆಲ್ಲ ಇದ್ದೇವೆ ಎಂಬ ಭರವಸೆಯಿತ್ತರು.

ತಾಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವರಾಜ ಶುಗರ‍್ಸನಲ್ಲಿ ಹಮ್ಮಿಕೊಂಡ “ಉಮೇಶ ಕತ್ತಿ ಉತ್ತರ ಕರ್ನಾಟಕದ ಕನಸುಗಾರ” ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ  ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಶಾಸಕ ನಿಖಿಲ ಕತ್ತಿ ಮತ್ತು ಮಾಜಿ ಸಂಸದ ರಮೇಶ ಕತ್ತಿ ಅವರಿಗೆ ಬೆಂಬಲವಾಗಿದ್ದೇನೆ ಎಂದು ಅವರ ಕೈಗಳನ್ನು ಎತ್ತಿ ಹಿಡಿದು ನೆರೆದ ಜನಸ್ತೋಮಕ್ಕೆ ಪ್ರದರ್ಶಿಸಿದರು.

     ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ ಜಿಲ್ಲೆಯ ಹಲವಾರು ನಾಯಕರನ್ನು ಬೆಳೆಸಿದ ಗರಿಮೆ ಉಮೇಶ ಕತ್ತಿ ಅವರಿಗೆ ಸಲ್ಲುತ್ತದೆ. ಅವರ ಅವಧಿಯಲ್ಲಿ ಜಿಲ್ಲೆ ಸಾಕಷ್ಟು ಅಭಿವೃದ್ಧಿ ಕಂಡಿತ್ತು. ಉತ್ತರ ಕರ್ನಾಟಕ ಭಾಗದ ವ್ಯಕ್ತಿ ಅವರು ಎನ್ನುವುದಕ್ಕಿಂತ ಈ ಭಾಗದ ಶಕ್ತಿ ಆಗಿದ್ದರು. ರಾಜಕೀಯಕ್ಕಿಂತ ಕೃಷಿ ಪ್ರೇಮಿಯಾಗಿದ್ದ ಅವರು ಕೃಷಿ ಸಚಿವರಾಗಿ ರೈತರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ್ದ ರಾಜ್ಯದ ಮೊದಲ ಸಚಿವರೆಂಬ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ ಎಂದರು. ವಿವಿಧ ಪಕ್ಷಗಳಿಂದ ಸ್ಪರ್ಧಿಸಿ ಆಯ್ಕೆಯಾಗುತ್ತಿದ್ದ ಅವರು ಪಕ್ಷ, ಜಾತಿ ಆಧಾರಿತ ನಾಯಕರಾಗದೇ ಜನರ ಮನದ ನಾಯಕರಾಗಿದ್ದರೆಂದರು.

        ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯರು, ದೆಹಲಿ ವಿಶೇಷ ಪ್ರತಿನಿಧಿಯಾದ ಪ್ರಕಾಶ ಹುಕ್ಕೇರಿ ಮತ್ತು ಶಾಸಕ ಅಭಯ ಪಾಟೀಲ, ಮಾಜಿ ಸಂಸದ ಶಿವಕುಮಾರ ಉದಾಶಿ ಮಾತನಾಡಿ ಉಮೇಶ ಕತ್ತಿ ರಾಜಕೀಯ ಮೊಗಸಾಲೆಯ ಧ್ರುವತಾರೆ. ಅವರ ಜನಪ್ರಿಯತೆಗೆ ಸೇರಿದ ಸಹಸ್ರಾರು ಜನರೇ ಸಾಕ್ಷಿಯಾಗಿದ್ದಾರೆ. ಜಿಲ್ಲೆಯ ರಾಜಕಾರಣದಲ್ಲಿ ಕತ್ತಿ ಕುಟುಂಬ ಯಾವುದೇ ನಿರ್ಣಯ ತೆಗೆದುಕೊಂಡರೆ ಅವರ ಜೊತೆಗೆ ನಾವಿದ್ದೇವೆಂದರು.

       ನಿಡಸೋಶಿಯ ಜಗದ್ಗುರು ಡಾ.ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಉಮೇಶ ಕತ್ತಿ ಅವರ ಮೊಮ್ಮಕ್ಕಳಾದ ಆರ್ಯಾನ್, ಆರುಷ್, ಶಾಂಭವಿ ಅವರು ಅಜ್ಜನ ಕುರಿತು ಮಾತನಾಡಿದರು. ಪ್ರಾರಂಭದಲ್ಲಿ ಶಾಸಕ ನಿಖಿಲ ಕತ್ತಿ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು.

  ಹುಕ್ಕೇರಿ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು, ಬೆಲ್ಲದ ಬಾಗೇವಾಡಿ ವಿರಕ್ತಮಠದ ಶಿವಾನಂದ ಮಹಾಸ್ವಾಮಿಗಳು, ಕ್ಯಾರಗುಡ್ಡ ಅವಜೀಕರ ಆಶ್ರಮದ ಅಭಿನವ ಮಂಜುನಾಥ ಶ್ರೀಗಳು, ಶಾಸಕರಾದ ಅಶೋಕ ಪಟ್ಟಣ, ವಿಠ್ಠಲ ಹಲಗೇಕರ, ಗಣೇಶ ಹುಕ್ಕೇರಿ, ದುರ್ಯೋಧನ ಐಹೊಳೆ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಮಾಜಿ ಶಾಸಕ ಅನೀಲ ಬೆನಕೆ, ಪ್ರಥ್ವಿ ಮತ್ತು ಪವನ ಕತ್ತಿ ಸಹೋದರರು ಮತ್ತಿತರರಿದ್ದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept