ತಾಲೂಕಿನ ಪಿಕೆಪಿಎಸ್ ಗಳಿಂದ ಸತ್ಕಾರ ಸಮಾರಂಭ ಸಹಕಾರಿ ಕ್ಷೇತ್ರದಲ್ಲಿ ಜಾತಿ, ಪಕ್ಷಾತೀತವಾಗಿ ನಿಸ್ವಾರ್ಥದಿಂದ ಜನಸೇವೆ ಮಾಡಿದ್ದೇನೆ.: ರಮೇಶ ಕತ್ತಿ

ಸ್ಥಳೀಯ ವಿಶ್ವರಾಜ ಭವನದಲ್ಲಿ ಡಿಸಿಸಿ ಬ್ಯಾಂಕ ನಿರ್ದೇಶಕರಾಗಿ 9 ನೇ ಬಾರಿಗೆ ಆಯ್ಕೆಯಾದ ರಮೇಶ ಕತ್ತಿ ಅವರನ್ನು ತಾಲೂಕಿನ ಪಿಕೆಪಿಎಸ್‌ಗಳ ಪರವಾಗಿ ಸನ್ಮಾನಿಸಿದರು. ಶಾಸಕ ನಿಖಿಲ ಕತ್ತಿ, ಮಾಜಿ ಸಚಿವ ಎ.ಬಿ.ಪಾಟೀಲ ಮತ್ತಿತರರಿದ್ದರು.

ಹುಕ್ಕೇರಿ:  ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಜಾತಿ ಪಕ್ಷ ರಹಿತವಾಗಿ ಜನಸೇವೆ ಮಾಡುತ್ತಿದ್ದೇನೆ. ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಪರ ವಿರೋಧ ಗಮನಿಸದೇ ರೈತ ಸದಸ್ಯರಿಗೆ ಅನುಕೂಲವಾಗುವಂತೆ ಯಾವ ತಾರತಮ್ಯ ಮಾಡದೇ ಸಾಲ ನೀಡಿದ್ದೇನೆ ಎಂದು ಬಿಡಿಸಿಸಿ ಬ್ಯಾಂಕ ನಿರ್ದೇಶಕ ರಮೇಶ ಕತ್ತಿ ಹೇಳಿದರು.

     ಗುರುವಾರದಂದು ಅವರು ಪಟ್ಟಣದ ವಿಶ್ವರಾಜ ಭವನದಲ್ಲಿ ತಾಲೂಕಿನ ಪಿಕೆಪಿಎಸ್‌ನವರು ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು. ಶತಮಾನಗಳ ಹಿಂದೆ ಸಹಕಾರ ಕ್ಷೇತ್ರ ಹುಟ್ಟು ಹಾಕಲು ಹಲವಾರು ಹಿರಿಯರು ಶ್ರಮಿಸಿದರು. ಆದರೆ ಇದೀಗ ಅವುಗಳನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಇಂದು ರಾಜಕೀಕರಣ ಆಗುತ್ತಿರುವುದು ವಿಷಾದಕರ. ನಮ್ಮ ತಾಲೂಕಿನ ಸಹಕಾರಿ ಕ್ಷೇತ್ರದಲ್ಲಿ ಹೊರಗಿನವರು ರಾಜಕಾರಣ ಮಾಡುತ್ತಿದ್ದಾರೆ. ಈಗಾಗಲೇ ನಡೆದ ವಿದ್ಯುತ್ ಸಹಕಾರ ಸಂಘ ಮತ್ತು ಡಿಸಿಸಿ ಬ್ಯಾಂಕ ನಿರ್ದೇಶಕ ಚುನಾವಣೆಯಲ್ಲಿ ಹೊರಗಿನವರು ನಮ್ಮ ತಾಲೂಕಿನ ಜನರಿಗೆ, ಸಹಕಾರಿಗಳಿಗೆ ಒಡ್ಡಿದ ಎಲ್ಲ ಆಸೆ ಆಮೀಷಗಳನ್ನು ದಿಕ್ಕರಿಸಿ ಸ್ವಾಭಿಮಾನದ ಬಲ ಪ್ರದರ್ಶಿಸಿದ್ದಾರೆ.

  ಸ್ವಾಭಿಮಾನದ ಕಹಳೆ: ಮುಂಬರುವ ದಿನಗಳಲ್ಲಿ ನಡೆಯಲಿರುವ ಗ್ರಾಮ, ತಾಲೂಕ ಮತ್ತು ಜಿಲ್ಲಾ ಪಂಚಾಯತಿ ಹಾಗೂ ಪುರಸಭೆ ಚುನಾವಣೆಗಳಲ್ಲಿ ನಮ್ಮ ಮತ್ತು ಎ.ಬಿ.ಪಾಟೀಲ ಕುಟುಂಬ ಒಟ್ಟಾಗಿ ಒಂದಾಗಿ ಪಕ್ಷ ರಹಿತವಾದ ಸ್ವಾಭಿಮಾನಿ ಪೆನಲ್ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಾಗಿ ಘೋಷಿಸಿದರು.

 ಸಹಕಾರಿ ಕ್ಷೇತ್ರದಲ್ಲಿ ಪಕ್ಷ, ಜಾತಿ ಬೇಧ ರಹಿತ ಸೇವೆ: ಈ ಬಾರಿ ನಡೆದ ಡಿಸಿಸಿ ಬ್ಯಾಂಕ ಮತ್ತು ವಿದ್ಯುತ್ ಸಹಕಾರಿ ಸಂಘದ ಚುನಾವಣೆಗಳಲ್ಲಿ ವಿರೋಧಿಗಳು ಎಲ್ಲ ತಂತ್ರಗಳನ್ನು ಬಳಸಿದರೂ, ತಾಲೂಕಿನ ಸ್ವಾಭಿಮಾನಿ ಜನರ ಎದುರು ಸೋಲಬೇಕಾಯಿತು. ಇದರಿಂದ ಇಡೀ ರಾಜ್ಯವೇ ಹುಕ್ಕೇರಿ ತಾಲೂಕಿನ ಜನರ ಒಗ್ಗಟ್ಟನ್ನು ನೋಡಿ ಆಶ್ಚರ್ಯ ಪಡುವಂತಾಯಿತು. ನನ್ನ ರಾಜಕೀಯ ಜೀವನದಲ್ಲಿ ಇದೊಂದು ಅವಿಸ್ಮರಣೀಯ ಘಟನೆ ಎಂದರು.

 ಸ್ವಾಭಿಮಾನಿ ಜನರ ಋಣ ಎಂದಿಗೂ ತೀರಿಸಲು ಆಗದು: ಡಿಸಿಸಿ ಬ್ಯಾಂಕಿಗೆ 40 ವರ್ಷಗಳಿಂದ ನಿರ್ದೇಶಕ, ಉಪಾಧ್ಯಕ್ಷ ಮತ್ತು 25 ವರ್ಷಗಳ ಸತತ ಅಧ್ಯಕ್ಷನಾಗಿ ಸೇವೆ ಮಾಡುತ್ತಿದ್ದೇನೆ. ಇಂತಹ ಐತಿಹಾಸಿಕ ದಾಖಲೆಗೆ ತಾಲೂಕಿನ ಸ್ವಾಭಿಮಾನಿ ಜನರ ಪ್ರೀತಿ ವಿಶ್ವಾಸದ ಆಶೀರ್ವಾದವೇ ಕಾರಣ. ಈ ಋಣ ಜನರ ಸೇವೆಯ ಮೂಲಕ ತೀರಿಸಬೇಕಾಗಿದೆ ಎಂದರು.

 ಡಿಸಿಸಿ ಬ್ಯಾಂಕನ್ನು ಉಳಿಸಿ ಬೆಳೆಸಿದ್ದೇನೆ: 85-86ನೇ ಸಾಲಿನಲ್ಲಿ ಡಿಸಿಸಿ ಬ್ಯಾಂಕ 580 ಕೋಟಿ ರೂ ಬಂಡವಾಳ ಹೊಂದಿದ್ದ ಬ್ಯಾಂಕಿನ ಅಧಿಕಾರದ ಚುಕ್ಕಾಣಿ ಹಿಡಿದು ಇತ್ತೀಚೆಗೆ ಅಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸುವಾಗ 6800 ಕೋಟಿ ದುಡಿಯುವ ಬಂಡವಾಳ ಹೊಂದಿತ್ತು ಎಂದರು. ತಾಲೂಕಿನ 54ಸಾವಿರ ಸದಸ್ಯರಿಗೆ 400ಕೋಟಿ ರೂ ಶೂನ್ಯ ಬಡ್ಡಿದರದ ಸಾಲ ವಿತರಿಸಿದ್ದು,  380 ಕೋಟಿ ಸಾಲ ಬಡ್ಡಿ ಮನ್ನಾ ದೊರಕಿದೆ ಎಂದು ತಿಳಿಸಿದರು. ತಾಲೂಕಿನ 92 ಪಿಕೆಪಿಎಸ್‌ಗಳಲ್ಲಿ 82 ಪಿಕೆಪಿಎಸ್‌ಗಳು ಸ್ವಂತ ಕಟ್ಟಡ ಹೊಂದಿವೆ.

       ಮಾಜಿ ಸಚಿವ ಎ.ಬಿ.ಪಾಟೀಲರು ಮಾತನಾಡಿ ಸಹಕಾರ ಮತ್ತು ರಾಜಕೀಯ ಕ್ಷೇತ್ರಗಳು ಬೇರೆ ಬೇರೆ. ಸಹಕಾರಿ ಕ್ಷೇತ್ರದಲ್ಲಿ ರಾಜಕಾರಣ ಪ್ರಾರಂಭಿಸಿದರೇ ಅದರ ಪರಿಣಾಮ ರೈತರ ಮೇಲೆ ಆಗುತ್ತದೆ.ಅದಕ್ಕಾಗಿ ಜಿಲ್ಲೆಯ ಸಹಕಾರಿ ಕ್ಷೇತ್ರಗಳಲ್ಲಿ ಯಾರು ರಾಜಕೀಯ ಬೆರೆಸಬಾರದೆಂದು ಬುದ್ದಿವಾದ ಹೇಳಿದರು.

     ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಸತ್ತೆಪ್ಪಾ ನಾಯಿಕ, ಎಚ್.ಎಲ್.ಪೂಜೇರಿ, ಶ್ರೀಶೈಲ ಮಠಪತಿ ಮತ್ತಿತರರು ಮಾತನಾಡಿ ತಾಲೂಕಿನ ಪಿಕೆಪಿಎಸ್ ಗಳಲ್ಲಿ ಯಾರಾದರೂ ರಾಜಕಾರಣ ಮಾಡಲು ಮುಂದಾದರೇ ತಾಲೂಕಿನ ಎಲ್ಲ ರೈತರು ಬೀದಿಗಿಳಿದು ಹೋರಾಟ ಮಾಡಲು ಸಿದ್ಧರಾಗಿದ್ದೇವೆ. ಅದಕ್ಕಾಗಿ ವಿರೋಧಿಗಳು ರಾಜಕಾರಣವನ್ನು ಚುನಾವಣೆಗೆ ಮಾತ್ರ ಸೀಮಿತಗೊಳಿಸಬೇಕೆಂದು ತಿಳಿಸಿದರು.

   ಇದೇ ಸಂದರ್ಭದಲ್ಲಿ ಅತಿಥಿಗಳನ್ನು ಮತ್ತು ರಮೇಶ ಕತ್ತಿ ಅವರನ್ನು ತಾಲೂಕಿನ ಪಿಕೆಪಿಎಸ್‌ಗಳ ಪರವಾಗಿ ಸನ್ಮಾನಿಸಿದರು.

   ಶಾಸಕ ನಿಖಿಲ ಕತ್ತಿ, ಪವನ ಕತ್ತಿ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಮಹಾದೇವ ಜಿನರಾಳಿ, ಪಿ.ಎಲ್.ಡಿ ಬ್ಯಾಂಕ ಅಧ್ಯಕ್ಷ ದುರದುಂಡಿ ಪಾಟೀಲ, ಬಸವರಾಜ ಹುಂದ್ರಿ, ಬಿ.ಎಸ್.ಸುಲ್ತಾನಪೂರಿ ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜನಪ್ರತಿನಿಧಿಗಳಿದ್ದರು. ಸತ್ತೆಪ್ಪಾ ನಾಯಿಕ ಸ್ವಾಗತಿಸಿದರು. ಗುರುರಾಜ ಕುಕರ್ಣಿ ನಿರೂಪಿಸಿ ವಂದಿಸಿದರು.

  • ಕತ್ತಿ ಕುಟುಂಬ ರಾಜಕಾರಣ ಮಾಡಬೇಕಾಗಿದ್ದರೇ ವಿರೋಧಿಗಳ ಮನೆಯಲ್ಲಿ ಲೈಟ ಬೆಳಗುತ್ತಿರಲಿಲ್ಲ. ನಾವು ದೀಪ ಹಚುವ್ಚ ಕೆಲಸ ಮಾಡತೇವೆ, ವಿನಹ ಯಾರ ಮನೆ ದೀಪ ಆರಿಸುವುದಿಲ್ಲ. ನಿಸ್ವಾರ್ಥದಿಂದ ಜನಸೇವೆ ಮಾಡುವುದೇ ನಮ್ಮ ಸಂಕಲ್ಪ: ರಮೇಶ ಕತ್ತಿ.
  • [/highligh_box]

    Join Our WhatsApp Channel
    Join Now
    error: Content is protected !!
    This website uses cookies to ensure you get the best experience on our website. Details
    Decline
    Accept