ಮಾಜಿ ಸಂಸದ ಬಿಡಿಸಿಸಿ ಬ್ಯಾಂಕ ನಿರ್ದೇಶಕ ರಮೇಶ ಕತ್ತಿ ಅವರ ಭಾವಚಿತ್ರ.
ಹುಕ್ಕೇರಿ: ಜನ ಸಾಮಾನ್ಯರಲ್ಲಿ ಸಂಸ್ಕಾರ ಆಚಾರ ವಿಚಾರಗಳನ್ನು ಬೆಳೆಸುವ ನಿಟ್ಟಿನಲ್ಲಿ ಮಠ ಮಾನ್ಯಗಳ ಜತೆಗೆ ದೇವಸ್ಥಾನಗಳು ಪ್ರಮುಖ ಪಾತ್ರ ವಹಿಸುತ್ತವೆ. ಕಾರಣ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಹುಕ್ಕೇರಿ ಮತಕ್ಷೇತ್ರದ 67 ದೇವಸ್ಥಾನಗಳ ಅಭಿವೃದ್ಧಿಗೆ 6.25 ಕೋಟಿ ರೂ ಅನುದಾನ ಒದಗಿಸಲು ಸರಕಾರಕ್ಕೆ ಕೋರಲಾಗಿದೆ ಎಂದು ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕ ನಿರ್ದೇಶಕ ರಮೇಶ ಕತ್ತಿ ಹೇಳಿದರು.
ಅವರು ಪಟ್ಟಣದ ಪಿಕಾರ್ಡ ಬ್ಯಾಂಕ ಆವರಣದಲ್ಲಿ ಇತ್ತೀಚೆಗೆ ಸಾರ್ವಜನಿಕರ ಕುಂದುಕೊರತೆ ಪರಿಶೀಲನೆ ನಂತರ ಪರ್ತಕರ್ತರೊಂದಿಗೆ ಮಾತನಾಡಿ ತಿಳಿಸಿದರು.
ಎಲ್ಲ ದೇವಸ್ಥಾನಗಳ ಅಭಿವೃದ್ಧಿಗೆ ತಯಾರಿಸಿದ ಅಂದಾಜು ಪತ್ರಿಕೆ, ನೀಲನಕ್ಷೆಗಳಿಗೆ ಆಡಳಿತಾತ್ಮಕ ಹಾಗೂ ತಾಂತ್ರಿಕ ಅನುಮೋದನೆ ಕಾರ್ಯ ಪ್ರಗತಿಯಲ್ಲಿದೆ. ಉದ್ದೇಶಿತ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಇನ್ನುಳಿದ ದೇವಸ್ಥಾನಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು. ದೇವಸ್ಥಾನ ಆಡಳಿತ ಮಂಡಳಿಯವರು ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಹುಕ್ಕೇರಿ ಮತಕ್ಷೇತ್ರದ ಬಡಕುಂದ್ರಿಯ ಹೊಳೆಮ್ಮದೇವಿ ಮತ್ತು ಬೀರಪ್ಪಾ ದೇವಸ್ಥಾನ, ಅಮ್ಮಣಗಿಯ ಮಲ್ಲಿಕಾರ್ಜುನ, ಅಂಬಿಕಾದೇವಿ ಹಾಗೂ ಕಾಡಸಿದ್ದೇಶ್ವರ ದೇವಸ್ಥಾನ, ಹುಕ್ಕೇರಿಯ ವಿರಕ್ತಮಠ, ಅಡವಿಸಿದ್ದೇಶ್ವರ ಮಠ, ಶನೇಶ್ವರ ದೇವಸ್ಥಾನ, ಸಂಕೇಶ್ವರ ಪಟ್ಟಣದ ಶಂಕರಲಿಂಗ ದೇವಸ್ಥಾನ, ದುರದುಂಡಿಶ್ವರ ದೇವಸ್ಥಾನ, ಬೆಲ್ಲದ ಬಾಗೇವಾಡಿಯ ಸಿದ್ದೇಶ್ವರ ದೇವಸ್ಥಾನ, ಜೈನ ಬಸದಿ, ಮಲ್ಲಮ್ಮ ದೇವಸ್ಥಾನ, ಮಹಾಂತೇಸವರ ವಿರಕ್ತಮಠ, ಸುಲ್ತಾನಪುರದ ಬಸವೇಶ್ವರ ದೇವಸ್ಥಾನ, ಸಾರಾಪುರದ ಜೈನ ಬಸದಿ, ಬೆಳವಿಯ ಪರಮೇಶ್ವರ, ಗುಡದವ್ವಾ ದೇವಿ, ಜೈನ ಬಸದಿ, ಹುಲ್ಲೋಳಿಯ ಜೈನ ಬಸದಿ, ಹೊಸೂರದ ಜೈನ ಬಸದಿ, ಶಿರಹಟ್ಟಿ ಬಿ.ಕೆ. ಬಸವೇಶ್ವರ ದೇವಸ್ಥಾನ, ಎಲಿಮುನ್ನೋಳಿಯ ಲಕ್ಷ್ಮೀದೇವಿ, ಗುಡಸ ಬಸವೇಶ್ವರ ದೇವಸ್ಥಾನ, ಕಣಗಲಾ ಮಹಾದೇವ ಮಂದಿರ, ಶಿರಹಟ್ಟಿ ಕೆ.ಡಿ ಕಂಠೆವ್ವಾದೇವಿ, ಜೈನ ಬಸದಿ, ಹೊನ್ನಿಹಳ್ಳಿಯ ಮಾರುತಿ ಮಂದಿರ ಸೇರಿದಂತೆ ಕ್ಷೇತ್ರದ ಮತ್ತಿತರ ಗ್ರಾಮಗಳ ದೇವಸ್ಥಾನಗಳು, ಕಲ್ಯಾಣ ಮಂಟಪ ಮತ್ತು ರಸ್ತೆ ಸುಧಾರಣೆಗೆ ಮುಖ್ಯಮಂತ್ರಿಯವರ ಮೂಲ ಸೌಕರ್ಯ ಯೋಜನೆಯಡಿ ಅನುದಾನಕ್ಕೆ ಮನವಿಸಲಾಗಿದೆ ಎಂದರು.
ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ನಿರ್ದೇಶಕರಾದ ಸತ್ಯಪ್ಪಾ ನಾಯಿಕ, ಕೆಂಪಣ್ಣಾ ವಾಸೇದಾರ, ಮುಖಂಡರಾದ ಗುರು ಕುಲಕರ್ಣಿ, ರಾಜು ಮುನ್ನೋಳಿ, ರಾಚಯ್ಯ ಹಿರೇಮಠ, ಎ.ಕೆ.ಪಾಟೀಲ, ಎಚ್.ಎಲ್.ಪೂಜೇರಿ, ಬಸವರಾಜ ಗಂಗಣ್ಣವರ, ಚನ್ನಪ್ಪ ಗಜಬರ, ಮುನ್ನಾ ಕಳಾವಂತ ಮತ್ತಿತರರಿದ್ದರು.





