ಹುಕ್ಕೇರಿ: ಇಂದಿನ ಯುವ ಜನಾಂಗ ನಾಲಿಗೆ ರುಚಿಗೆ ಸೋತು ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ.ದಣಿಯುವಂತೆ ಅಥವಾ ಬೆವರು ಬರುವಂತೆ ದುಡಿಮೆ ಮಾಡಿ ಪೌಷ್ಟಿಕಾಂಶ ಉಳ್ಳ ಆಹಾರ ಸೇವಿಸಬೇಕು.ಆಗ ಉತ್ತಮ ಆರೋಗ್ಯ ಪಡೆಯಲು ಸಾಧ್ಯವೆಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಶುಕ್ರವಾರದಂದು ಹುಕ್ಕೇರಿ ಬೈಪಾಸ ರಸ್ತೆಯ ಅಡಿವೆಪ್ಪ ಕರಿಬಾಳಪ್ಪಗೋಳ ಅವರ ಜಿಮ್ ಉದ್ಘಾಟಿಸಿ ಮಾತನಾಡಿದರು. ನಮ್ಮ ಹಿರಿಯರು ದೇಹ ದಂಡಿಸುವಂತಹ ಜಮೀನು ಉಳುಮೆ ಉದ್ಯೋಗ ಮಾಡುತ್ತಿದ್ದರು.ಹೆಣ್ಣು ಮಕ್ಕಳು ಬೀಸುವುದು, ಕುಟ್ಟುವುದು, ಭಾಂವಿಯಿಂದ ಕೊಡ ಹೊತ್ತು ನೀರು ತರುವುದು ಮಾಡುತ್ತಿದ್ದರು.ನಂತರ ರೊಟ್ಟಿ, ತಾವೇ ಬೆಳೆದ ಗುಣಮಟ್ಟದ ತರಕಾರಿ, ಹಾಲು ಅನ್ನ, ಮೊಸರು ಮಜ್ಜಿಗೆ ಊಟ ಮಾಡುತ್ತಿದ್ದರು.ಇದರಿಂದ ಅವರು ದೀರ್ಘ ಆಯುಸ್ಸು ಹೊಂದಿದ್ದರು.ಆಗಿನ ಕಾಲದಲ್ಲಿ ತಾಲೂಕಿಗೆ ಒಂದು ಆಸ್ಪತ್ರೆ ಇದ್ದವು.ಇದೀಗ ಹೆಜ್ಜೆಗೊಂದು ಆಸ್ಪತ್ರೆಗಳು ಪ್ರಾರಂಭವಾಗಿವೆ.ಜತೆಗೆ ವಿಚಿತ್ರ ರೋಗಗಳು ಬರುತ್ತಿವೆ.ಇದಕ್ಕೆ ನಮ್ಮ ಆಧುನೀಕ ಜೀವನ ಶೈಲಿಯೇ ಕಾರಣವೆಂದರು.

ಹಿಂದಿನ ಕಾಲದಲ್ಲಿ ಕುಸ್ತಿ ಮನೆಗಳಿದ್ದಂತೆ ಈಗ ಜಿಮ್‌ಗಳಿವೆ. ಯುವ ಜನಾಂಗ ಇವುಗಳನ್ನು ಬಳಸಿಕೊಂಡು ಆರೋಗ್ಯವಂತರಾಗಬೇಕು. ಜತೆಗೆ ಪಾನ ಪರಾಗ, ಗುಟ್ಕಾ, ಪಿಜ್ಜಾ ಬರ್ಗರ್ ಸೇವಿಸುವುದಕ್ಕಿಂತ ಮೊಳಕೆ ಕಾಳು, ತರಕಾರಿ, ಹಾಲು, ರೊಟ್ಟಿ ಸೇವಿಸುವ ಪ್ರವೃತ್ತಿ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಮುಖಂಡರಾದ ಎ.ಕೆ.ಪಾಟೀಲ, ರಾಜು ಮುನ್ನೋಳಿ, ಶಹಜಾನ ಬಡಗಾಂವಿ, ಸಿದ್ದು ಬೆನ್ನಾಡಿಕರ, ಬಸವರಾಜ ಗಂಗನ್ನವರ, ಜಗದೀಶ ಕರಿಬಾಳಪ್ಪಗೋಳ, ಪ್ರದೀಪ ಚಿಂಚಣಿ, ಬಾಳಗೌಡ ಪಾಟೀಲ, ಮಾರುತಿ ಕರಿಬಾಳಪ್ಪಗೋಳ ಮತ್ತಿತರರಿದ್ದರು.





