ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಶಾಸಕ ನಿಖಿಲ ಕತ್ತಿ ಅವರನ್ನು ಅಧ್ಯಕ್ಷ ಮಹಾವೀರ ನಿಲಜಗಿ ಮತ್ತು ಕುಟುಂಬಸ್ಥರು ಸತ್ಕರಿಸಿದರು. ಕಲಗೌಡ ಪಾಟೀಲ, ಸಂಜಯ ನಿಲಜಗಿ, ಪ್ರಜ್ವಲ ನಿಲಜಗಿ ಇತರರಿದ್ದರು.
ಹುಕ್ಕೇರಿ: ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ನಿಷ್ಠಾವಂತರನ್ನು ಗುರುತಿಸಿ ಅಭ್ಯಥಿಗಳನ್ನಾಗಿ ಮಾಡುತ್ತೇವೆ ಎಂದು ಈ ಮೊದಲು ಹೇಳಿದ್ದೇವು. ಅದರ ಪ್ರಕಾರ ನಿಷ್ಠಾವಂತರಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಪಟ್ಟ ದಕ್ಕಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಶುಕ್ರವಾರದಂದು ತಾಲೂಕಿನ ಬೆಲ್ಲದ ಬಾಗೇವಾಡಿಯ ತಮ್ಮ ಗೃಹ ಕಚೇರಿಯಲ್ಲಿ ವಿದ್ಯುತ್ ಸಹಕಾರಿ ಸಂಘದ ನೂತನ ಅಧ್ಯಕ್ಷ ಮಹಾವೀರ ನಿಲಜಗಿ ಅವರ ಕುಟುಂಬದವರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು. ರಾಜ್ಯದ ಮುಖಂಡರ ಮತ್ತು ಜನರ ಗಮನ ಸೆಳೆದಿದ್ದ ಈ ಚುನಾವಣೆಯಲ್ಲಿ ತಾಲೂಕಿನ ಜನ ಮತ್ತು ಸಂಘದ ಸದಸ್ಯರು ತಮ್ಮ ಸ್ವಾಭಿಮಾನ ಪ್ರದರ್ಶಿಸಿ ಪ್ರಬುದ್ಧತೆ ಮೆರೆದಿದ್ದಾರೆಂದರು. ಈ ಬಾರಿ ಜನಮತದ ಅಭಿಪ್ರಾಯ ಮತ್ತು ನಿಷ್ಠಾವಂತರನ್ನು ಗುರುತಿಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ. ಇದರಿಂದ ನಮಗೆ ಅಭುತಪೂರ್ವ ಗೆಲುವು ಸಿಕ್ಕತೆಂದರು.
30 ವರ್ಷಗಳಿಂದ ನಮ್ಮ ಬೆಂಬಲಿತರ ಕೈಯಲ್ಲಿದ್ದ ಆಡಳಿತವನ್ನು ವಿರೋಧಿಗಳು ಆಸೆ ಆಮಿಷಗಳ ಮೂಲಕ ನಮ್ಮ ಬೆಂಬಲಿತರಲ್ಲಿ ಕೆಲವರನ್ನು ಸೆಳೆದು ಅಧಿಕಾರ ಚುಕ್ಕಾಣಿ ಹಿಡಿದರು. ಆದರೆ 3 ತಿಂಗಳಲ್ಲಿಯೇ ಅವರ ದುರಾಡಳಿತಕ್ಕೆ ಜನತೆ ಇತಿಶ್ರೀ ಹಾಡಿದರು. ಅಧಿಕಾರ ಶಾಶ್ವತ ಅಲ್ಲ ನಾವು ಕೈಗೊಂಡ ಸೇವೆ ನಮಗೆ ಫಲ ನೀಡುತ್ತವೆ ಎಂಬುದಕ್ಕೆ ಇದೊಂದು ನಿದರ್ಶನ ಆಗಿದೆ ಎಂದರು.
ನಮ್ಮನ್ನು ತೊರೆದವರು ನಮ್ಮ ಕುರಿತು ಇಲ್ಲ ಸಲ್ಲದ ಆರೋಪ ಮಾಡಿದರು. ಸುಳ್ಳು ಅಪಪ್ರಚಾರ ಮಾಡಿದರು. ಆದರೆ ತಾಲೂಕಿನ ಜನ ನಮ್ಮನ್ನು ಅವರ ಮನೆ ಮಕ್ಕಳಂತೆ ಐದು ದಶಕಗಳಿಗಿಂತ ಹೆಚ್ಚು ಕಾಲ ರಾಜಕೀಯ ಮತ್ತು ಸಹಕಾರಿ ಕ್ಷೇತ್ರದಲ್ಲಿ ಬೆಳೆಸಿದ್ದಾರೆ. ಇದನ್ನು ಅರಿಯದ ವಿರೋಧಿಗಳು ಜನರ ಮನಸ್ಥಿತಿ ಅರಿತುಕೊಳ್ಳದೇ ಜನರ ಆಶಯದ ವಿರುದ್ಧ ರಾಜಕಾರಣ ಮಾಡಲು ಹೋಗಿ ಕೈ ಸುಟ್ಟುಕೊಂಡರು. ಇನ್ನಾದರೂ ಎಲ್ಲವೂ ನಮಗೆ ಬೇಕು ಎಂಬ ಭಾವ ಅವರು ಬಿಡಬೇಕೆಂದರು.
ವಿದ್ಯುತ್ ಸಹಕಾರಿ ಸಂಘದ ನೂತನ ಅಧ್ಯಕ್ಷ ಮಹಾವೀರ ನಿಲಜಗಿ ಮಾತನಾಡಿ ನಮ್ಮ ತಂದೆ ಯಾವಾಗಲೂ ಕತ್ತಿ ಕುಟುಂಬದ ನಿಷ್ಠಾವಂತ ಪರಮಾಪ್ತರು. ಅವರ ನಿಧನಾನಂತರವೂ ನಾವು ಈ ಕುಟುಂಬದೊಂದಿಗೆ ಇದ್ದೇವೆ. ನಮ್ಮ ನಿಷ್ಠೆಯನ್ನು ಗುರುತಿಸಿ ನನಗೆ ಅವಕಾಶ ಕಲ್ಪಿಸಿದ್ದಾರೆ. ಅವರ ಪ್ರೀತಿ ವಿಶ್ವಾಸಕ್ಕೆ ದ್ರೋಹ ಬಗೆಯದೇ ಸಂಘದ ಆಡಳಿತವನ್ನು ಜನಪರ ಕಾಳಜಿಯೊಂದಿಗೆ ಮಾಡುವುದಾಗಿ ತಿಳಿಸಿದರು.
ಸಂಘದ ನಿರ್ದೇಶಕ ಕಲಗೌಡ ಪಾಟೀಲ, ಸಂಜಯ ನಿಲಜಗಿ ಮತ್ತು ಪ್ರಜ್ವಲ ನಿಲಜಗಿ ಅವರಿದ್ದರು.





