ವಿರೋಧಿಗಳ ಟೀಕೆಗಳಿಗೆ ಉತ್ತರಿಸುವುದಿಲ್ಲ, ಬೇರೆಯವರನ್ನು ಬೈಯುವುದು ನಮ್ಮ ಸಂಸ್ಕ್ರತಿಯಲ್ಲ : ಶಾಸಕ ಬಾಲಚಂದ್ರ ಜಾರಕಿಹೊಳಿ

ತಾಲೂಕಿನ ಘೋಡಗೇರಿಯಲ್ಲಿ ಕಾರ್ಯಕರ್ತರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಿದರು. ಶಶಿಕಾಂತ ನಾಯಿಕ, ಬಸವರಾಜ ಮಟಗಾರ, ಅಜ್ಜಪ್ಪಾ ಕಲ್ಲಟ್ಟಿ, ಅಶೋಕ ಅಂಕಲಗಿ, ಅಶೋಕ ಪಟ್ಟಣಶೆಟಿ ಇತರರಿದ್ದರು.

ಹುಕ್ಕೇರಿ : ವಿರೋಧಿಗಳ ಟೀಕೆ-ಟಿಪ್ಪಣಿಗಳಿಗೆ ಉತ್ತರಿಸಲು ಹೋಗುವುದಿಲ್ಲ. ಆ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ಯಾರನ್ನೂ ಟೀಕಿಸುವುದಿಲ್ಲ. ಮತ್ತೊಬ್ಬರನ್ನು ಬೈಯುವಂತಹ ಸಂಸ್ಕೃತಿಯೂ ನಮ್ಮದಲ್ಲ ಎಂದು ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.

  ಮಂಗಳವಾರ ರಾತ್ರಿ ತಾಲೂಕಿನ ಘೋಡಗೇರಿ ಗ್ರಾಮದ ಹೊರವಲಯದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ಚುನಾವಣಾ ನಿಮಿತ್ತ ಘೋಡಗೇರಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ವಿರೋಧಿಗಳು ಎಷ್ಟೇ ಅಪಪ್ರಚಾರ, ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದರೂ ಅವುಗಳಿಗೆ ಕಿವಿಗೊಡದಂತೆ ಕಾರ್ಯಕರ್ತರಿಗೆ ಮನವಿ ಮಾಡಿಕೊಂಡರು.       ರೈತ ಮತ್ತು ಜನಪರ ಕಾರ್ಯಗಳಿಂದ ಮತದಾರರ ಮನೆಗೆದ್ದ ನಾವು ಚುನಾವಣೆಯಲ್ಲಿ ಗೆಲ್ಲುವುದು ಶತಃಸಿದ್ದವೆಂದರು.

       ಬದಲಾವಣೆ ಗಾಳಿ ಬೀಸುತ್ತಿದ್ದು ಸೆ. 28 ರಂದು ನಡೆಯುವ ಚುನಾವಣೆಯಲ್ಲಿ “ದಿ.ಅಪ್ಪಣ್ಣಗೌಡ ಪಾಟೀಲ ಸಹಕಾರಿ ಪ್ಯಾನಲ್”ಗೆ ಬೆಂಬಲಿಸುವಂತೆ ಮನವಿಸಿಕೊಂಡ ಅವರು 30 ವರ್ಷ ವಿರೋಧಿ ಗುಂಪಿನ ಆಡಳಿತ ನೋಡಿದ ಮತದಾರರು ಈ ಬಾರಿ ನಮಗೆ ಅಧಿಕಾರ ನೀಡಿ ನಮ್ಮ ಅಭಿವೃದ್ಧಿ ಕಾರ್ಯ ಗಮನಿಸುವಂತೆ ತಿಳಿಸಿದರು.

ಒಳ್ಳೆಯ ಕೆಲಸಗಳನ್ನು ಮಾಡಿ ಜನರ ಮನಸ್ಸನ್ನು ಗೆಲ್ಲಬೇಕು. ಟೀಕೆ- ಟಿಪ್ಪಣಿಗಳನ್ನು ಮಾಡುವುದಕ್ಕಿಂತ ರೈತರ ಸಂಕಷ್ಟಗಳನ್ನು ಪರಿಹರಿಸುವ ಒಳ್ಳೆಯ ಸದ್ಬುದ್ಧಿಯನ್ನು ದೇವರು ವಿರೋಧಿಗಳಿಗೆ ನೀಡಲಿ.: ಶಾಸಕ ಬಾಲಚಂದ್ರ ಜಾರಕಿಹೊಳಿ

      ಸಚಿವ ಸತೀಶ್ ಜಾರಕಿಹೊಳಿಯವರು ರಾಜ್ಯ ಸರಕಾರದ ಪ್ರಭಾವಿ ಸಚಿವರಾಗಿದ್ದು ಅವರ ನೆರವಿನಿಂದ ದಿವಾಳಿ ಅಂಚಿನಲ್ಲಿರುವ ವಿದ್ಯುತ್ ಸಹಕಾರಿ ಸಂಘದ ಪುನಶ್ಚೇತನ ಸಾಧ್ಯವೆಂದರು. ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಸಹ ಈ ಸಂಸ್ಥೆಯ ಬೆಳವಣಿಗೆಗೆ ಕೈ ಜೋಡಿಸಿದ್ದಾರೆ ಎಂದರು. ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿದರು.ನಂತರ ಶಾಸಕ ಬಾಲಚಂದ್ರ ಜಾರಕಿಹೊಳಿಯವರನ್ನು ಕಾರ್ಯಕರ್ತರು ಸತ್ಕರಿಸಿದರು.

  ಮಾಜಿ ಸಚಿವ ಶಶಿಕಾಂತ ನಾಯಿಕ, ಹೀರಾ ಶುಗರ್ಸ್ ಅಧ್ಯಕ್ಷ ಅಜ್ಜಪ್ಪ ಕಲ್ಲಟ್ಟಿ, ಬಸವರಾಜ ಮಟಗಾರ, ಅಶೋಕ ಅಂಕಲಗಿ ಮತ್ತು ಅಭ್ಯರ್ಥಿಗಳಾದ ಶಿವಕುಮಾರ ಮಟಗಾರ, ಅಮರ ನಲವಡೆ, ಅಶೋಕ ಪಟ್ಟಣಶೆಟ್ಟಿ, ಕಿರಣ ಕಲ್ಲಟ್ಟಿ, ಪ್ರಭುದೇವ ಪಾಟೀಲ, ಶಶಿರಾಜ ಪಾಟೀಲ, ಬಸಪ್ಪ ಮರಡಿ, ಬಸಗೌಡ ಮಗೆನ್ನವರ, ಶಂಕರೆಪ್ಪ ಶಿರಕೋಳಿ, ಭಾಗ್ಯಶ್ರೀ ಪಾಟೀಲ, ಸುಮಿತ್ರಾ ಶಿಡ್ಲಿಹಾಳ, ಶಂಕರ ಹೆಗಡೆ, ದಯಾನಂದ ಪಾಟೀಲ, ಲಕ್ಷ್ಮಣ ಹೂಲಿ, ಬಸವರಾಜ ನಾಯಿಕ ಇದ್ದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept