ಸ್ಥಳೀಯ ತಹಸೀಲ್ದಾರ ಆಡಳಿತ ಭವನದಲ್ಲಿ ನಡೆದ ರೇಣುಕಾಚಾರ್ಯ ಜಯಂತಿಯಲ್ಲಿ ಪವನ ಕತ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ.ತ್ರೀನೇತ್ರ ಶಿವಯೋಗಿಗಳು, ಚಂದ್ರಶೇಖರ ಶಿವಾಚಾರ್ಯರು, ಬ್ರಹ್ಮಾನಂದ ಶ್ರೀಗಳು, ಮಹಾವೀರ ನಿಲಜಗಿ ಇತರರಿದ್ದರು.
ಹುಕ್ಕೇರಿ: ಜಗದ್ಗುರು ರೇಣುಕರು ಸ್ಥಾಪಿಸಿದ ವೀರಶೈವ ಧರ್ಮದ ತತ್ವಗಳು ಮನುಕುಲದ ಕಲ್ಯಾಣಕ್ಕೆ ಶ್ರಮಿಸುತ್ತಿವೆ. ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಉಕ್ತಿ ಸಾರಿದ ಏಕೈಕ ಧರ್ಮ ವೀರಶೈವ ಧರ್ಮ ಹಾಗಾಗಿ ಮಾನವ ಸಂತತಿ ಇರುವವರಿಗೆ ಧರ್ಮಕ್ಕೆ ಅಳಿವಿಲ್ಲ ಎಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಹೇಳಿದರು
ರವಿವಾರ ತಾಲೂಕಾಡಳಿತ ಮತ್ತು ಜಗದ್ಗುರು ರೇಣುಕಾಚಾರಿ ಜಯಂತಿ ಯುಗಮಾನೋತ್ಸವ ಸಮಿತಿ ಹಾಗೂ ತಾಲೂಕು ವೀರಶೈವ ಸಮಾಜದ ವತಿಯಿಂದ ನಡೆದ ರೇಣುಕಾಚಾರ್ಯ ಜಯಂತಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರೀರಂಗಪಟ್ಟಣದ ಚಂದ್ರವನ ಬೇಬಿ ಮಠದ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮೀಜಿ ಅವರಿಗೆ ಜಗದ್ಗುರು ರೇಣುಕಾಚಾರ್ಯ ಸದ್ಭಾವನಾ ಪ್ರಶಸ್ತಿ ಪ್ರಧಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ ಸಂಸ್ಕಾರ ಕೊಟ್ಟದ್ದು ವೀರಶೈವ ಪುರಾತನ ಧರ್ಮ, ಇದು ಜಗತ್ತ್ತಿಗೆ ಒಳ್ಳೆಯ ಆಚಾರ ವಿಚಾರಗಳ ಸಂಸ್ಕೃತಿ ಕೊಟ್ಟಿದ್ದು ವೀರಶೈವ ಧರ್ಮ ಎಂದರೆ ಅತಿಶಯೋಕ್ತಿಯಲ್ಲ ಎಂದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಸಮಾರಂಭದ ನೇತೃತ್ವ ವಹಿಸಿ ಮಾತನಾಡುತ್ತಾ ಜಲಯೋಗದಲ್ಲಿ ವಿಶ್ವ ದಾಖಲೆ ಬರೆದ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಗಳಿಗೆ ಪ್ರಶಸ್ತಿ ಪ್ರದಾನವನ್ನು ಶ್ರೀಮಠದಿಂದ ಮಾಡಿದ್ದು ಹೆಮ್ಮೆಯ ಸಂಗತಿ ಎಂದರು. ಸಾವಿರಾರು ವರ್ಷಗಳಿಂದ ಪಂಚ ಪೀಠಾಧೀಶ್ವರರ ಪ್ರತೀಕವಾಗಿ ವಿವಾಹ ಮಹೋತ್ಸವ ಸೇರಿದಂತೆ ಧರ್ಮಿಕ ಕಾರ್ಯಕ್ರಮಗಳಲ್ಲಿ ಪಂಚ ಕಲಶಗಳನ್ನು ಪೂಜಿಸುವ ಮೂಲಕ ಪಂಚಪೀಠಗಳನ್ನು ನೆನಪಿಸಿಕೊಳ್ಳುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಆ ಕುರಿತು ಹೆಚ್ಚಿನ ಪ್ರಚಾರ ದೊರಕಿಲ್ಲವೆಂದರು.

ತಹಸೀಲ್ದಾರ ಬಲರಾಮ ಕಟ್ಟಿಮನಿ ರೇಣುಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಬಿ.ಇ.ಒ ಪ್ರಭಾವತಿ ಪಾಟೀಲ, ಕೋಚರಿಯ ಸೂರ್ಯಕಾಂತ ನಾಯಿಕ ಮಾತನಾಡಿದರು. ಇದಕ್ಕೂ ಮುನ್ನ ಬಸವೇಶ್ವರ ವ್ರತ್ತದಿಂದ ತಹಶೀಲ್ದಾರ ಕಾರ್ಯಾಲಯದವರಿಗೆ ರೇಣುಕರ ಭಾವಚಿತ್ರದ ಮೆರವಣಿಗೆ ಜರುಗಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತುಮಕೂರಿನ ಬಸವರಾಜ ಗುರೂಜಿ, ವೈದಿಕ ಪಾಠಶಾಲೆ ಸಂಪತ್ ಕುಮಾರ ಶಾಸ್ತ್ರಿ, ಯರನಾಳದ ಮುಕುಂದ ಮಠದ ಮತ್ತು ಕೋಚರಿಯ ಸೂರ್ಯಕಾಂತ ನಾಯಿಕ ದಂಪತಿಗಳನ್ನು ಸನ್ಮಾನಿಸಿದರು.

ಯರನಾಳ ಕಾಳಿಕಾ ಆಶ್ರಮದ ಗುರು ಬ್ರಹ್ಮಾನಂದ ಶ್ರೀಗಳು, ಹುಕ್ಕೇರಿ ಗ್ರಾಮೀಣ ವಿದ್ಯುತ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಿಗಿ, ಮುಖಂಡರಾದ ಶೀತಲ ಬ್ಯಾಳಿ, ಚನ್ನಪ್ಪಾ ಗಜಬರ, ಪ್ರಭು ವಂಟಮೂರಿ, ಬಸವರಾಜ ಗಂಗನ್ನವರ, ಸಿದ್ದಲಿಂಗಯ್ಯ ಹಿರೇಮಠ, ಸಿಡಿಪಿಒ ಹೊಳೆಪ್ಪ ಹೆಚ್, ಉಪ ತಹಸೀಲ್ದಾರ್ ಎನ್.ಆರ್.ಪಾಟೀಲ ಮತ್ತಿತರರಿದ್ದರು. ಶಿವಲೀಲಾ ಗವಿಮಠ ಸ್ವಾಗತಿಸಿ ನಿರೂಪಿಸಿದರು. ಸುರೇಶ್ ಜಿನರಾಳಿ ವಂದಿಸಿದರು.





