ಹುಕ್ಕೇರಿ ಹೊರವಲಯದ ಮಹಾವೀರ ಶಿಕ್ಷಣ ಸಂಸ್ಥೆಯ ವಾರ್ಷಿಕ ಶಾಲಾ ಉತ್ಸವ ಮತ್ತು ಮಕ್ಕಳ ಹಬ್ಬ ಕಾರ್ಯಕ್ರಮವನ್ನು ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಉದ್ಘಾಟಿಸಿದರು. ಮಹಾವೀರ ನಿಲಜಗಿ, ಅಜಿತ ಮುನ್ನೋಳಿ, ಸತ್ತೆಪ್ಪಾ ನಾಯಿಕ, ಪ್ರಜ್ವಲ ನಿಲಜಗಿ, ಸಂಜಯ ನಿಲಜಗಿ ಇತರರಿದ್ದರು.
ಹುಕ್ಕೇರಿ: ವಿದ್ಯಾರ್ಥಿ ಜೀವನದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮನಪೂರ್ವಕವಾಗಿ ಎಲ್ಲರೂ ಪಾಲ್ಗೊಳ್ಳಬೇಕು. ಸೋಲು ಗೆಲುವು ಮುಖ್ಯ ಅಲ್ಲ. ಭಾಗವಹಿಸುವುದರಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.

ಶನಿವಾರದಂದು ಹುಕ್ಕೇರಿ ಹೊರವಲಯದ ಮಹಾವೀರ ಶಿಕ್ಷಣ ಸಂಸ್ಥೆಯ ವಾರ್ಷಿಕ ಶಾಲಾ ಉತ್ಸವ ಮತ್ತು ಮಕ್ಕಳ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಾಲಕರು ಮಕ್ಕಳಿಗೆ ವಿದ್ಯೆಯ ಜತೆಗೆ ನಮ್ಮ ಸನಾತನ ಧರ್ಮದ ಆಚಾರ ವಿಚಾರ ಮತ್ತು ಸಂಸ್ಕೃತಿಗಳನ್ನು ತಿಳಿಸಿಕೊಡಬೇಕು ಎಂದು ಸಲಹೆಯಿತ್ತರು.
ಬಿಜೆಪಿ ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷ ಸತ್ತೆಪ್ಪಾ ನಾಯಿಕ ಅವರು ಮಾತನಾಡಿ ವಿದೇಶಿ ಕ್ರೀಡೆಗಳಿಗಿಂತ ಶಾರೀರಕ ಮತ್ತು ಬೌದ್ಧಿಕ ಬೆಳವಣಿಗೆಗೆ ದೇಸಿ ಕ್ರೀಡೆಗಳು ಹೆಚ್ಚು ಸಹಕಾರಿ ಆಗಿವೆ. ಕಾರಣ ಶಿಕ್ಷಣ ಸಂಸ್ಥೆಗಳು ಇಂದಿನ ಮಕ್ಕಳಿಗೆ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ದೇಸಿ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕು ಎಂದರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಎಸ್.ಆಯ್.ಸಂಬಾಳ ಅವರು ಮಾತನಾಡಿ ಶಿಕ್ಷಣ ಎಂಬುದು ಕಡಲ ಸಾಗರ, ಅದನ್ನು ದಾಟಲು ಬೇಸರ, ದಾಟಿದರೆ ಜೀವನದಲ್ಲಿ ಸುಖ ಸಾಗರ ದೊರಕುತ್ತದೆ. ವಿದ್ಯೆಯ ಬಾಳಿನ ಬೆಳಕು ಎಂಬುದನ್ನು ಮಕ್ಕಳಿಗೆ ಪಾಲಕರು ಹೇಳಬೇಕು. ವಿದ್ಯಾವಂತರಾದರೆ ಎಲ್ಲೆಡೆ ಗೌರವ ಸಿಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಅತಿಥಿಗಳನ್ನು ಸನ್ಮಾನಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಿದ್ಯುತ್ ಸಹಕಾರಿ ಸಂಘ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಜಿತ ಮುನ್ನೋಳಿ, ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸಂಜಯ ನಿಲಜಗಿ, ಬಿ.ಬಿ.ಲಠ್ಠೆ, ಶ್ರೀಧರ ಖತಗಲ್ಲಿ, ಮುಖ್ಯ ಶಿಕ್ಷಕ ಸಂಗಮೇಶ ಕರಹೊನ್ನವರ ಇತರರಿದ್ದರು. ಸಂಸ್ಥೆಯ ಉಪಾಧ್ಯಕ್ಷ ಪ್ರಜ್ವಲ ನಿಲಜಗಿ ಸ್ವಾಗತಿಸಿದರು. ಅಂಜನಾ ಗುಗ್ಗಳಿ ಮತ್ತು ಸುಜಾತಾ ಕೋಳಿ ನಿರೂಪಿಸಿದರು. ಸಂಗಮೇಶ ಕರಹೊನ್ನವರ ವಂದಿಸಿದರು.





