ಸ್ಥಳೀಯ ಕೋರ್ಟ ವೃತ್ತದಲ್ಲಿ ಮೇವಿಗಾಗಿ ರಸ್ತೆ ತಡೆ ಸಹಿತ ಪ್ರತಿಭಟನೆ ನಡೆಸಿದ ಕುರಿಗಳು ಮತ್ತು ಕುರಿಗಾರರು.
ಹುಕ್ಕೇರಿ: ಪಟ್ಟಣದ ಕೋರ್ಟ ವೃತ್ತದಲ್ಲಿ ಕುರಿಗಳು ತಮ್ಮ ಆಹಾರ (ಮೇವಿಗಾಗಿ) ಕ್ಕಾಗಿ ತಾಲೂಕಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿದ ಘಟನೆ ಸೋಮವಾರದಂದು ಜರುಗಿದೆ.
ಸ್ಥಳೀಯ ಕೋರ್ಟ ವೃತ್ತದಲ್ಲಿ ನೂರಾರು ಕುರಿಗಳನ್ನು ತೆಗೆದುಕೊಂಡ ಬಂದ ಕುರಿಗಾರರು ತಮ್ಮ ಬೇಡಿಕೆ ಈಡೇರುವವರೆಗೆ ರಸ್ತೆ ತಡೆ ನಡೆಸುತ್ತೇವೆ ಎಂದು ಪ್ರತಿಭಟಿಸಿದರು. ಮಳೆ ಮಧ್ಯೆಯೂ ಪ್ರತಿಭಟನಾಕಾರರು ಹಾಗೂ ಮುಖಂಡರು ಕುರಿಗಳೊಂದಿಗೆ ರಸ್ತೆ ತಡೆ ನಡೆಸಿದರು. ತಹಸೀಲ್ದಾರರು ಬೆಳಗಾವಿಯಿಂದ ಆಗಮಿಸುವವರೆಗೆ ಅಂದರೆ ಒಂದು ತಾಸಿಗೂ ಹೆಚ್ಚು ಹೊತ್ತು ರಸ್ತೆ ತಡೆಯಿಂದ ವಾಹನ ಸವಾರರು ಮತ್ತು ಬಸ್ ಪ್ರಯಾಣಿಕರು ಪರಿತಪಿಸಿದರು.
ಹಾಲುಮತ ಸಮಾಜ ತಾಲೂಕಾಧ್ಯಕ್ಷ ಡಾ.ಜಯಪ್ರಕಾಶ ಕರಜಗಿ ಮಾತನಾಡಿ ತಾಲೂಕಿನ ಗುಡಸ, ಸಾರಾಪೂರ, ಬೆಲ್ಲದ ಬಾಗೇವಾಡಿ, ಕಡಹಟ್ಟಿ ಮತ್ತು ಕೊಟಬಾಗಿ ಗ್ರಾಮದ ಕುರಿಗಾರರು ತಮ್ಮ ಕುರಿಗಳನ್ನು ಆಹಾರಕ್ಕಾಗಿ ಗುಡಸ ಗ್ರಾಮದ ಲಗಮವ್ವನ ಗುಡ್ಡಕ್ಕೆ ಅಂದರೆ ಪುರಾತನ ಕಾಲದಿಂದ ಗಾಯರಾಣಾ ಜಮೀನು ಎಂದು ದಾಖಲಿರುವ ಜಮೀನಿಗೆ ತೆಗೆದುಕೊಂಡು ಹೋಗುತ್ತಾರೆ.ಆದರೆ ಇತ್ತೀಚಿನ ದಿನಗಳಲ್ಲಿ ತಾಲೂಕಾಡಳಿತ ಅಕ್ರಮ ಸಕ್ರಮ ನೆಪದಲ್ಲಿ ಈ ಜಮೀನುವನ್ನು ಖಾಸಗಿಯವರಿಗೆ ಹಸ್ತಾಂತರಿಸಲು ಮುಂದಾಗಿದ್ದಾರೆAದು ತಿಳಿದು ಬಂದಿದೆ.ಅದನ್ನು ವಿರೋಧಿಸಿ ಹಲವಾರು ಬಾರಿ ತಹಸೀಲ್ದಾರರಿಗೆ ಮನವಿಸಿದ್ದೇವೆ.ಆದರೆ ನಮ್ಮ ಮನವಿಗೆ ಅವರು ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲವೆಂದು ಆರೋಪಿಸಿದರು.
ನ್ಯಾಯವಾದಿಗಳಾದ ಭೀಮಸೇನ ಬಾಗಿ ಮತ್ತು ಬಸವರಾಜ ಹಾಲಟ್ಟಿ, ನಿತೀನ ಮುತ್ನಾಳ ಮಾತನಾಡಿ ನಮ್ಮ ಸಮಾಜದ ವ್ಯಕ್ತಿಯೇ ರಾಜ್ಯದ ಮುಖ್ಯಮಂತ್ರಿಯಾದರೂ ಇಲ್ಲಿನ ಕುರಿಗಾರರಿಗೆ ಮತ್ತು ಕುರಿಗಳಿಗೆ ಸಮಸ್ಯೆ ತಪ್ಪಿಲ್ಲವೆಂದರು.ಈ ಬಾರಿ ಕೋರ್ಟ ವೃತ್ತದಲ್ಲಿ ಪ್ರತಿಭಟಿಸಿದ್ದು, ಬೇಡಿಕೆ ಈಡೇರದಿದ್ದರೆ ಮಿನಿ ವಿಧಾನಸೌಧದಲ್ಲಿಯೇ ಕುರಿಗಳೊಂದಿಗೆ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿಳಂಬ ಮಾಡಿ ಆಗಮಿಸಿದ ತಹಸೀಲ್ದಾರ ಮಂಜುಳಾ ನಾಯಕ ಅವರ ವಿರುದ್ಧ ದಿಕ್ಕರಿಸಿ ಪ್ರತಿಭಟಿಸಿದರು.ನಂತರ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ ಮಂಜುಳಾ ನಾಯಕ ಅವರು ಬೇರೆ ತಾಲೂಕಿನವರು ಈ ಗುಡ್ಡಕ್ಕೆ ಆಗಮಿಸಿ ಅವರ ಕುರಿಗಳನ್ನು ಮೇಯಿಸುತ್ತಿರುವುದು ತಿಳಿದು ಬಂದಿದೆ.ಅವರ ಮತ್ತು ಗಾಯರಾಣಾ ಜಮೀನು ಅತಿಕ್ರಮಿಸಿದವರ ವಿರುದ್ಧ ಪೋಲಿಸ್ ಸ್ಟೇಶನ್ ನಲ್ಲಿ ದೂರು ದಾಖಲಿಸುತ್ತೇನೆ. ಒಂದು ವಾರದೊಳಗಾಗಿ ಕುರಿಗಾರರ ಎಲ್ಲ ಸಮಸ್ಯೆ ಪರಿಹರಿಸುವುದಾಗಿ ಭರವಸೆಯಿತ್ತರು.ಆಗ ಹಾಲುಮತ ಸಮಾಜ ಬಾಂಧವರು ತಮ್ಮ ಕುರಿಗಳನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಹಾಲುಮತ ಸಮಾಜದ ಯುವ ಘಟಕದ ಅಧ್ಯಕ್ಷ ಶಂಕರ ಹೆಗಡೆ ಮುಖಂಡರಾದ ಸಚಿನ ಹೆಗಡೆ, ಸಿಂಧೂರ ಕರಿಗಾರ, ಶಿವು ಮಗದುಮ್ಮ, ಬಸವಣ್ಣಿ ನಿಡಸೋಸಿ, ಲಕ್ಕಪ್ಪಾ ಹಾಲಟ್ಟಿ, ಸಿದ್ದಪ್ಪಾ ಗೋಟೂರಿ, ಸತ್ತೆಪ್ಪಾ ಖಿಲಾರಿ, ಶಂಕರ ಕರಿಗಾರ, ಸಿದ್ದಪ್ಪಾ ವಂಟಮೂರಿ ಸೇರಿದಂತೆ ನೂರಾರು ಜನರಿದ್ದರು.





