ತಾಲೂಕಾಡಳಿತ ಮತ್ತು ಕಂದಾಯ ಇಲಾಖೆ ಆಶ್ರಯದಲ್ಲಿ ನಡೆದ ಬಗರ್ ಹುಕುಂ ಸಮಿತಿ ಸಭೆಯಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು. ತಹಸೀಲ್ದಾರ ಮಂಜುಳಾ ನಾಯಕ, ಶಿರಸ್ತೆದಾರ ಎನ್.ಆರ್.ಪಾಟೀಲ, ಇಮ್ರಾನ ಮೋಮಿನ, ಜಯಗೌಡ ಪಾಟೀಲ, ಇತರರಿದ್ದರು.
ಹುಕ್ಕೇರಿ: ಜಿಲ್ಲೆಯ ಡಿಸಿಸಿ ಬ್ಯಾಂಕ್ ಮತ್ತು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಗಳಲ್ಲಿ ನಾನು ನಟನಾಗಿ ಅಭಿನಯಿಸಿದರೆ, ಅಣ್ಣಾಸಾಹೇಬ ಜೊಲ್ಲೆ ನಿರ್ಮಾಪಕರಾಗಿದ್ದು, ಬಾಲಚಂದ್ರ ಜಾರಕಿಹೊಳಿ ನಿರ್ದೇಶಕರಾಗಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬುಧವಾರದಂದು ಸ್ಥಳೀಯ ವಿದ್ಯುತ್ ಸಹಕಾರಿ ಸಂಘದ ಸಭಾಭವನದಲ್ಲಿ ನಡೆದ ಬಗರ್ ಹುಕುಂ ಸಾಗುವಳಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ಎರಡು ಸಹಕಾರಿಗಳಿಗೆ ಚುನಾವಣೆ ನಡೆಯುತ್ತಿದ್ದು, ಇವುಗಳನ್ನು ಎದುರಿಸಲು ನಾವು ಸನ್ನದ್ಧರಾಗಿದ್ದೇವೆ.ಈ ಎರಡು ಸಹಕಾರಿಗಳ ಆಡಳಿತ ಹಿಡಿಯುವಲ್ಲಿ ನಿರ್ಮಾಪಕ ಮತ್ತು ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಅವರ ಸಲಹೆಯಂತೆ ನಾನು ಭಾಗವಹಿಸುತ್ತೇನೆ ಎಂದರು.
ಹುಕ್ಕೇರಿಯಲ್ಲಿ ಸಾವಿರಾರು ಜನ ಒಂದೆಡೆ ಸೇರಿಸಲು ನಮಗೆ ಈ ಸಹಕಾರಿ ಸಂಘದ ಸಭಾಭವನ ಬಹಳಷ್ಟು ಅನುಕೂಲವಾಗಿದೆ ಎಂದರು. ತಂತ್ರ, ಪ್ರತಿತಂತ್ರ ರಾಜಕೀಯದಲ್ಲಿ ಸರ್ವೆ ಸಾಮಾನ್ಯ. ಧರ್ಮ ಮತ್ತು ಜಾತಿ ಆಧಾರಿತ ರಾಜಕೀಯದಲ್ಲಿ ನನಗೆ ನಂಬಿಕೆ ಇಲ್ಲ. ನಮ್ಮ ಅಭಿವೃದ್ಧಿ ಕಾರ್ಯ ಮತ್ತು ನಾಯಕತ್ವದಿಂದ ನಾವು ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಸಾಧ್ಯವೆಂದರು.
ತಾಲೂಕಾಡಳಿತ ಮತ್ತು ಕಂದಾಯ ಇಲಾಖೆ ಆಶ್ರಯದಲ್ಲಿ ನಡೆದ ಬಗರ್ ಹುಕುಂ ಸಮಿತಿ ಸಭೆಯಲ್ಲಿ ಸರಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ಅಕ್ರಮ ಸಾಗುವಳಿದಾರರನ್ನು ಸಕ್ರಮ ಮಾಡಲು ರಾಜ್ಯ ಸರಕಾರಿ ಈ ಸಮಿತಿ ರಚಿಸಿದೆ. ಕಾರಣ ಸಮಿತಿ ಸದಸ್ಯರು ನಿಜವಾದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ನ್ಯಾಯ ದೊರಕಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸಚಿವರನ್ನು ತಾಲೂಕಾಡಳಿತ ಮತ್ತು ಬಗರ್ ಹುಕುಂ ಸಮಿತಿ ಪರವಾಗಿ ಸನ್ಮಾನಿಸಲಾಯಿತು.
ತಹಸೀಲ್ದಾರ ಮಂಜುಳಾ ನಾಯಕ, ಶಿರಸ್ತೆದಾರ ಎನ್.ಆರ್.ಪಾಟೀಲ, ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ್, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಜಯಗೌಡ ಪಾಟೀಲ, ಉಪಾಧ್ಯಕ್ಷ ವಿಷ್ಣು ರೇಡೇಕರ, ಸಮಿತಿ ಸದಸ್ಯರಾದ ಕೆಂಪಣ್ಣಾ ಶಿರಹಟ್ಟಿ, ಸಿಕಂದರ ಸನದಿ, ಭಾರತಿ ಬೆಣ್ಣಿ, ಸದಾನಂದ ಗುಡಿಕಡೆ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರಿದ್ದರು.







