ಪಟ್ಟಣದ ರವದಿ ಫಾರ್ಮ್ ಹೌಸ್ ಸಭಾಂಗಣದಲ್ಲಿ ನಡೆದ ಛಾಯಾಗ್ರಹಕರ ವಿಶ್ವ ಛಾಯಾಗ್ರಹಕ ದಿನಾಚರಣೆ ದೃಶ್ಯ.
ಹುಕ್ಕೇರಿ: ಮೋಬೈಲ್ ಬಂದು ನಿಜವಾದ ಛಾಯಾಗ್ರಾಹಕರನ್ನು ಕಡಿಮೆ ಮಾಡುತ್ತಿದೆ. ಕ್ರಿಯಾಶೀಲತೆ ಕಡಿಮೆಯಾಗಿ ರೆಡಿಮೇಡ್ ಆಹಾರದಂತೆ ಪೋಟೊಗ್ರಾಫಿ ಆಗಿದೆ ಎಂದು ಕರ್ನಾಟಕ ಫೋಟೋಗ್ರಾಫರ್ ಅಸೋಸಿಯೇಷನ್ ರಾಜ್ಯ ನಿರ್ದೇಶಕ ಕೆ.ಆರ್.ಮಲ್ಲಿಕಾರ್ಜುನ ಹೇಳಿದರು.
ಅವರು ಪಟ್ಟಣದ ರವದಿ ಫಾರ್ಮ್ ಹೌಸ್ ಸಭಾಂಗಣದಲ್ಲಿ ತಾಲೂಕಿನ ವೃತ್ತಿ ನಿರತ ಛಾಯಾಗ್ರಹಕರ ಸಂಘದ ಆಶ್ರಯದಲ್ಲಿ ನಡೆದ 186ನೇ ವಿಶ್ವ ಛಾಯಾಗ್ರಹಕ ದಿನಾಚರಣೆ ಮತ್ತು ಲೇಬರ ಕಾರ್ಡ್ ವಿತರಣೆ ಸಮಾರಂಭದಲ್ಲಿ ಮಾತನಾಡಿದರು. ಹಿಂದಿನ ಹಿರಿಯರು ತೆಗೆದ ಪೋಟೊಗಳ ಗುಣಮಟ್ಟ ಮತ್ತು ಸ್ಪಷ್ಟತೆ ಇಂದಿಗೂ ಆಶ್ಚರ್ಯ ಮೂಡಿಸುತ್ತವೆ ಎಂದರು.
ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಜೋಗುರ ಅವರು ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಒಂದು ಪೋಟೊ ಸಾವಿರ ಪದಗಳಿಗೆ ಸಮ, ಮನಸ್ಸಿನ ಭಾವನೆ ತಿಳಿಸಲಾರದ್ದನ್ನು ಪೋಟೊ ತೋರಿಸುತ್ತದೆ ಎಂದರು. ಇಂದಿನ ದಿನದಲ್ಲ್ಲಿ ಡಿಜಿಟಲ್ ಮತ್ತು ಎಸ್.ಎಲ್.ಆರ್ ಕ್ಯಾಮೆರಾ ಛಾಯಾಚಿತ್ರಗಳನ್ನು ಸೆರೆ ಹಿಡಿಯುವುದು ವಿಶಿಷ್ಟ ಅನುಭವ. ಪೋಟ್ರೋಗ್ರಾಫಿ ಕಲೆ, ವಿಜ್ಞಾನ ಮತ್ತು ಇತಿಹಾಸವನ್ನು ಅರಿಯಲು ಸಹಕಾರಿಯಾಗಿದೆ ಎಂದರು.
ಛಾಯಾಗ್ರಹಣ ತರಬೇತಿದಾರ ಅಮೃತ ಚರಂತಿಮಠ ಮಾತನಾಡಿ ಇತ್ತೀಚೆಗೆ ಹೊಸ ಛಾಯಾಗ್ರಾಹಕರು ಯಾವುದೇ ತರಬೇತಿ ಇಲ್ಲದೆ ಕ್ಯಾಮೆರಾಗಳನ್ನು ಅಳವಡಿಸಿಕೊಂಡು ಫೋಟೋಗ್ರಾಫಿ ಮಾಡುವುದರ ಬದಲಾಗಿ ಫೋಟೊಗ್ರಾಪಿ ತರಬೇತಿ ಪಡೆದು ವೃತ್ತಿ ಜೀವನ ನಡೆಸಬೇಕು.ಆಗ ಮಾತ್ರ ಗ್ರಾಹಕರನ್ನು ಉಳಿಸಿ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ ಎಂದು ತಿಳಿಸಿದರು. ಬಸವರಾಜ ರಾಮಣ್ಣವರ ಸಂಘಟನೆ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಪ್ರತಿಷ್ಠಿತ ಛಾಯಾಶ್ರೀ ಪ್ರಶಸ್ತಿ ವಿಜೇತ ಮಹಾನಿಂಗ ಮೇಲ್ಮಟ್ಟಿ ಮತ್ತು ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯ ಪ್ರಶಸ್ತಿ ವಿಜೇತ ರಾಘವೇಂದ್ರ ದೇವಗೋಜಿ ಅವರನ್ನು ಸನ್ಮಾನಿಸಿದರು. ಛಾಯಾಗ್ರಾಹಕರಿಗೆ ಲೇಬರ್ ಕಾರ್ಡ ವಿತರಿಸಿದರು.
ಕಾರ್ಮಿಕ ನಿರೀಕ್ಷಕರು ಮಹಾಂತೇಶ ಹಿರೇಮಠ, ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ ಯಮಕನಮರ್ಡಿ, ಸುರೇಶ ರಜಪೂತ, ತಾಲೂಕಾ ಉಪಾಧ್ಯಕ್ಷ ಶಿವಾನಂದ ಪಾಟೀಲ, ಕಾರ್ಯದರ್ಶಿ ಬಸವರಾಜ ದಾರೋಜಿ, ಖಜಾಂಚಿ ಉಮೇಶ ಕರಗುಪ್ಪಿ, ಸಂಘದ ನಿರ್ದೇಶಕರು, ಸದಸ್ಯ ಸಿದ್ರಾಮ ಮುತ್ತೂರ, ಸೇರಿದಂತೆ ಅನೇಕರಿದ್ದರು. ಬಸವರಾಜ ದರೋಜಿ ಸ್ವಾಗತಿಸಿದರು ಪ್ರಶಾಂತ ನಾಗನೂರಿ ವಂದಿಸಿದರು.





