ಹುಕ್ಕೇರಿ ಪುರಸಭೆ ಕಾರ್ಯಾಲಯ.
ಹುಕ್ಕೇರಿ: ಹುಕ್ಕೇರಿ ಪುರಸಭೆ ಸದಸ್ಯರ ಆಡಳಿತ ಅವಧಿ ಅಕ್ಟೋಬರ್ 27 ಮತ್ತು ಸಂಕೇಶ್ವರ ಪುರಸಭೆ ಸದಸ್ಯರ ಆಡಳಿತ 28 ರಂದು ಮುಕ್ತಾಯಗೊಳ್ಳಲಿದ್ದು, ಕಾರಣ ವಾರ್ಡವಾರು ಮೀಸಲಾತಿ ನಿಗದಿ ಪಡಿಸುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆ ವಿವರ ಕೋರಿ ರಾಜ್ಯ ಚುನಾಣಾ ಆಯೋಗ ಮಾಹಿತಿ ಕೋರಿದೆ.
2025ರ ಡಿಸೆಂಬರ್ ತಿಂಗಳೊಳಗೆ ರಾಜ್ಯದ 188 ನಗರ ಸ್ಥಳೀಯ ಸಂಸ್ಥೆಗಳ ಅವಧಿ ಮುಕ್ತಾಗವಾಗಲಿವೆ. ಅದರ ಮುಂಚೆ ಅವುಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಬೇಕಾಗಿದೆ. ಅದರಿಂದ ಸ್ಥಳೀಯ ಸಂಸ್ಥೆಗಳ ವಾರ್ಡವಾರು ಮೀಸಲಾತಿ ನಿಗದಿಪಡಿಸಬೇಕಾಗಿದ್ದು, ಕಾರಣ ಹಿಂದಿನ ಮೀಸಲಾತಿ ಮತ್ತು ಜನಸಂಖ್ಯೆ ಮಾಹಿತಿ ಕೋರಿ ಚುನಾವಣಾ ಆಯೋಗ ನಗರಾಭಿವೃದ್ಧಿ ಇಲಾಖೆಗೆ ಸೂಚಿಸಿದೆ.
ಈಗಾಗಲೇ ಸನ್ 2011 ಜನಗಣತಿ ಅನ್ವಯ ವಾರ್ಡವಾರು ಕ್ಷೇತ್ರ ಪುನರ್ ವಿಂಗಡಣೆ ಮಾಡಿರುವ ಅಂತಿಮ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿರುವ ಪ್ರತಿ ಸಹಿತ ಸಂಪೂರ್ಣ ಮಾಹಿತಿಯನ್ನು ತುರ್ತಾಗಿ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಆಧೀನ ಕಾರ್ಯದರ್ಶಿ ಟಿ.ಮಂಜುನಾಥ ಸ್ಥಳೀಯ ಸಂಸ್ಥೆಗಳಿಗೆ ಆದೇಶಿಸಿದ್ದಾರೆ.
ಬೆಳಗಾವಿ ಜಿಲ್ಲೆಯ 2 ನಗರಸಭೆ, 10 ಪುರಸಭೆ, ಮತ್ತು 2 ಪಟ್ಟಣ ಪಂಚಾಯತಿಗಳ ಈಗಿನ ಸದಸ್ಯರ ಅವಧಿ ಅಕ್ಟೋಬರ್ ಅಂತ್ಯ ಮತ್ತು ನವ್ಹೆಂಬರ್ ಮೊದಲ ವಾರದಲ್ಲಿ ಮುಕ್ತಾಯವಾಗಲಿವೆ. ಅದರ ನಂತರ ಚುನಾವಣೆ ಜರುಗಿ ಹೊಸ ಆಡಳಿತ ಮಂಡಳಿ ಬರುವವರೆಗೆ ತಹಸೀಲ್ದಾರ ಮತ್ತು ಉಪ ವಿಭಾಗಾಧಿಕಾರಿಗಳು ಆಡಳಿತದ ಉಸ್ತುವಾರಿ ವಹಿಸಲಿದ್ದಾರೆ.







