ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದಲ್ಲಿ ನಿರ್ಮಾಣಗೊಂಡ ಸಂಘದ ಸ್ಟೋರ್ ಬಿಲ್ಡಿಂಗ್ ಉದ್ಘಾಟನಾ ಕಾರ್ಯಕ್ರಮ. ನಿಡಸೋಸಿಯ ಜಗದ್ಗುರು ಡಾ.ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಸಚಿವ ಸತೀಶ ಜಾರಕಿಹೊಳಿ, ಸಂಘದ ಅಧ್ಯಕ್ಷ ಜಯಗೌಡ ಪಾಟೀಲ, ಉಪಾಧ್ಯಕ್ಷ ವಿಷ್ಣು ರೇಡೇಕರ, ಹಿರಾ ಶುಗರ್ಸ್ ವೈಸ್ ಚೇರಮನ್ ಅಶೋಕ ಪಟ್ಟಣಶೆಟ್ಟಿ, ವಿಜಯ ರವದಿ ಮತ್ತಿತರರಿದ್ದರು.
ಹುಕ್ಕೇರಿ: ತಾಲೂಕಿನ ಜನ ಬದಲಾವಣೆ ಬಯಸುತ್ತಿದ್ದಾರೆ. ಈ ಬಾರಿ ನಡೆಯುವ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ನೂತನ ಆಡಳಿತದ ಪರ ಜನರ ಒಲವು ಹೆಚ್ಚಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ರವಿವಾರದಂದು ಸ್ಥಳೀಯ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದಲ್ಲಿ ನಿರ್ಮಾಣಗೊಂಡ ಸಂಘದ ಸ್ಟೋರ್ ಬಿಲ್ಡಿಂಗ್ ಉದ್ಘಾಟಿಸಿ ಮಾತನಾಡಿದರು. ಲೈನಮನ್ ಮತ್ತು ಮೀಟರ ರೀಡರ್ ಗಳು ಸಂಘದ ನಿಜವಾದ ಆಸ್ತಿ. ತಮ್ಮ ಪ್ರಾಣ ಪಣಕ್ಕಿಟ್ಟು ಕರ್ತವ್ಯ ನಿಭಾಯಿಸುತ್ತಾರೆ. ಇಂತಹ ಸಿಬ್ಬಂದಿಗಳನ್ನು ಹತ್ತು ವರ್ಷದ ಹಿಂದೆ ಖಾಯಂಮಾತಿ ಮಾಡಬೇಕಾಗಿತ್ತು. ಆದರೆ ಆಗಿರಲಿಲ್ಲ್ಲ ಆ ಕೆಲಸವನ್ನು ಎರಡು ತಿಂಗಳು ಹಿಂದೆ ಅಸ್ತಿತ್ವಕ್ಕೆ ಬಂದ ನೂತನ ಆಡಳಿತ ಮಂಡಳಿ ಈಡೇರಿಸಿದೆ. ಇದನ್ನು ಗಮನಿಸಿ ಕರ್ತವ್ಯ ನಿಭಾಯಿಸುವಂತೆ ಸಲಹೆಯಿತ್ತರು. ನೂತನ ಆಡಳಿತ ಮಂಡಳಿ ಯಾವಾಗಲೂ ಇಂತಹ ಸಿಬ್ಬಂದಿಗಳ ಸಮಸ್ಯೆಗಳಿಗೆ ಆದ್ಯತೆ ನೀಡಬೇಕೆಂದು ಸಲಹೆಯಿತ್ತರು.
15 ಸಾವಿರ ತೋಟಪಟ್ಟಿ ಮನೆಗಳಲ್ಲಿ ಇದೀಗ ನೂತನ ಆಡಳಿತ ಮಂಡಳಿ 2 ಸಾವಿರ ಮನೆಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ ಸಂಪರ್ಕ ಕಲ್ಪಿಸಿದೆ. ಸಂಘದ ಬೆಳವಣಿಗೆಗೆ ಆಡಳಿತ ಮಂಡಳಿ ನಿಸ್ವಾರ್ಥ ಮನೋಭಾವದಿಂದ ಶ್ರಮಿಸಬೇಕು. ಖಾಸಗಿ ಸಂಸ್ಥೆಗಳು ಲಾಭದಾಯಕ ಆಗಿರುವಾಗ ಸಹಕಾರಿ ಸಂಘಗಳಲ್ಲಿ ಹಾನಿ ಆಗಿರುವುದು ವಿಪರ್ಯಾಸ ಎಂದರು. ಆದಷ್ಟು ಬೇಗ ಈ ಸಂಘದ ಹೆಸರು ಬದಲಾವಣೆ ಆಗಿ ದಿ. ಅಪ್ಪಣ್ಣಗೌಡ ಪಾಟೀಲ ಸಹಕಾರಿ ಸಂಘ ಆಗಲಿದೆ ಎಂದು ಭರವಸೆಯಿತ್ತರು.
ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿ ಎರಡು ತಿಂಗಳಲ್ಲಿ 60 ರಿಂದ 70 ಗ್ರಾಮಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಿದ ಶ್ರೇಯಸ್ಸು ಈ ಆಡಳಿತ ಮಂಡಳಿಗೆ ಸಲ್ಲುತ್ತದೆ. ಕಾರಣ ಈ ಚುನಾವಣೆಯಲ್ಲಿ ಇವರನ್ನು ಬೆಂಬಲಿಸಿದರೆ ಸಿಬ್ಬಂದಿ ವರ್ಗದವರಿಗೆ ಮತ್ತು ಗ್ರಾಹಕರಿಗೆ ಮತ್ತಷ್ಟು ಸೌಲಭ್ಯಗಳು ದೊರಕುತ್ತವೆ ಎಂದರು.
ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಶಶಿರಾಜ ಪಾಟೀಲ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಅವಶ್ಯ. ಜನಪರ ಮತ್ತು ಕಾರ್ಮಿಕ ವರ್ಗದವರಿಗೆ ಎಲ್ಲ ಸೌಲಭ್ಯ ಕಲ್ಪಿಸಬೇಕು. 3.60 ಕೋಟಿ ರೂ ವೆಚ್ಚದಲ್ಲಿ ತಾಲೂಕಿನ ಎಲಿಮುನ್ನೋಳಿಯ ಮಹಾವೀರ ನಗರ ತೋಟಪಟ್ಟಿ ನಿವಾಸಿಗಳಿಗೆ ನಿರಂತರ ವಿದ್ಯುತ್ ಯೋಜನೆಯಡಿ ಸಂಪರ್ಕ ಕಲ್ಪಿಸಲಾಗಿದೆ. ಆ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ ಎಂದರು.
ನಿಡಸೋಸಿಯ ಜಗದ್ಗುರು ಡಾ.ಪಂಚಮ ಶಿವಲಿಂಗೇಸ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಸಚಿವರನ್ನು ಮತ್ತು ಶ್ರೀಗಳನ್ನು ಸಂಘದ ಪರವಾಗಿ ಸನ್ಮಾನಿಸಿದರು.
ಸಂಘದ ಅಧ್ಯಕ್ಷ ಜಯಗೌಡ ಪಾಟೀಲ, ಉಪಾಧ್ಯಕ್ಷ ವಿಷ್ಣು ರೇಡೇಕರ ಮತ್ತು ನಿರ್ದೇಶಕರು, ಹೀರಾ ಶುರ್ಸ್ ವೈಸ್ ಚೇರಮನ್ ಅಶೋಕ ಪಟ್ಟಣಶೆಟ್ಟಿ, ಪುರಸಭೆ ಅಧ್ಯಕ್ಷ ಇಮ್ರಾನ ಮೋಮಿನ್, ಕಾಂಗ್ರೆಸ್ ಹುಕ್ಕೇರಿ ಬ್ಲಾಕ್ ಅಧ್ಯಕ್ಷ ವಿಜಯ ರವದಿ, ಮುಖಂಡರಾದ ರವಿ ಕರಾಳೆ, ಇಮ್ರಾನ ಮೋಮಿನ, ಚಂದು ಗಂಗನ್ನವರ, ಸಲೀಮ ಕಳಾವಂತ, ಮೌನೇಶ ಪೋತದಾರ, ಕಬೀರ ಮಲೀಕ್, ಭೀಮಣ್ಣಾ ರಾಮಗೋನಟ್ಟಿ, ರವಿ ಜಿಂಡ್ರಾಳಿ ಮತ್ತಿತರರಿದ್ದರು.
ಮ್ಯಾನೇಜರ್ ದುರದುಂಡಿ ನಾಯಿಕ ಸ್ವಾಗತಿಸಿದರು. ನೇಮಿನಾಥ ಖೇಮಲಾಪೂರೆ ನಿರೂಪಿಸಿದರು. ಎಂ. ಡಿ ರವೀಂದ್ರ ಪಾಟೀಲ ವಂದಿಸಿದರು.





