ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಗೆ ಭರಪೂರ ನಾಮಪತ್ರ ಸಲ್ಲಿಕೆ

ತಾಲೂಕಿನ ವಿದ್ಯುತ್ ಸಹಕಾರಿ ಸಂಘದ ಚುನಾವಣಾಧಿಕಾರಿ ಮತ್ತು ಚಿಕ್ಕೋಡಿ ಉಪ ವಿಭಾಗಾಧಿಕಾರಿಯಾದ ಸುಭಾಸ ಸಂಪಗಾಂವಿ ಅವರ ಭಾವಚಿತ್ರ.

ಹುಕ್ಕೇರಿ: ತಾಲೂಕಿನ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ನಾಮಪತ್ರ ಸಲ್ಲಿಕೆ ಕೊನೆಯ ದಿನವಾಗಿದ್ದು ಇಂದು ಒಟ್ಟು 164 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ಮತ್ತು ಚಿಕ್ಕೋಡಿ ಉಪ ವಿಭಾಗಾಧಿಕಾರಿಯಾದ ಸುಭಾಸ ಸಂಪಗಾಂವಿ ತಿಳಿಸಿದರು.

   ಹುಕ್ಕೇರಿಯ ಸಂಘದ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶನಿವಾರ ದಿ.13ರಿಂದ ಪ್ರಾರಂಭವಾದ ನಾಮಪತ್ರಗಳ ಸಲ್ಲಿಕೆ ಶನಿವಾರ ದಿ.20 ಕೊನೆಯ ದಿನವಾಗಿತ್ತು. ಶುಭ ಶುಕ್ರವಾರದಂದು 81 ಮತ್ತು ಶನಿವಾರದಂದು 60ಕ್ಕೂ ಹೆಚ್ಚು ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದರು. ರವಿವಾರ ದಿ.21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ದಿ.22 ರಂದು ನಾಮಪತ್ರಗಳನ್ನು ಹಿಂಪಡೆಯಲು ಅವಕಾಶ ಇದೆ. ನಂತರ ಅಂತಿಮವಾಗಿ ಸ್ಪರ್ಧಿಸಿ ಚುನಾವಣಾ ಕಣದಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವುದಾಗಿ ತಿಳಿಸಿದರು.

      ರವಿವಾರ ದಿ.28ರಂದು ಸ್ಥಳೀಯ ಎಸ್.ಕೆ ಹೈಸ್ಕೂಲ ಮತ್ತು ಹುಕ್ಕೇರಿ ಹೊರವಲಯದ ಶ್ರೀ ಭಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ ಚುನಾವಣೆ ಜರುಗಲಿದೆ. 122 ಮತಗಟ್ಟೆ ಸ್ಥಾಪಿಸಲಿದ್ದು ಅವುಗಳಲ್ಲಿ ಶ್ರೀ ಭಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ 67 ಮತ್ತು ಎಸ್.ಕೆ ಹೈಸ್ಕೂಲಿನಲ್ಲಿ 55 ಮತಗಟ್ಟೆ ಇರುತ್ತವೆ ಎಂದರು. ಮತಗಟ್ಟೆಗಳಿಗಾಗಿ ಭಾಪೂಜಿಯಲ್ಲಿ 31 ಮತ್ತು ಎಸ್.ಕೆ ಹೈಸ್ಕೂಲಿನಲ್ಲಿ 24 ತಾತ್ಕಾಲಿಕ ಕೇಂದ್ರಗಳನ್ನು ತೆರೆಯುವುದಾಗಿ ತಿಳಿಸಿದರು.

     ಮತದಾನದ ಯಶಸ್ಸಿಗಾಗಿ 244 ಮತಗಟ್ಟೆ ಮತ್ತು ಸಹಾಯಕರಾಗಿ 32 ಅಧಿಕಾರಿಗಳಿದ್ದು, ಇವರಿಗೆ 548 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆಂದರು. ಮತದಾನದ ನಂತರ ಶ್ರೀ ಭಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ ಮತ ಏಣಿಕೆ ನಡೆಯಲಿದ್ದು, 6 ಬಣ್ಣದ ಮತಪತ್ರಗಳನ್ನು ಮತದಾನಕ್ಕೆ ಬಳಸುತ್ತೇವೆ. ಒಬ್ಬ ಮತದಾರ ಒಟ್ಟು 15 ಮತ ಚಲಾಯಿಸಬೇಕು. ಮತದಾನ ಕೇಂದ್ರದಲ್ಲಿ ಮೂಲಭೂತ ಸೌಲಭ್ಯ ಒದಗಿಸುವುದರ ಜತೆಗೆ ವಿಕಲಚೇತನ ಮತ್ತು ಹಿರಿಯ ನಾಗರಿಕರಿಗೆ ವಿಶೇಷ ಆದ್ಯತೆ ನೀಡುತ್ತೇವೆ. ಡಿ.ವೈ.ಎಸ್.ಪಿ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ ವ್ಯವಸ್ಥೆ ಕಲ್ಪಿಸುತ್ತೇವೆ ಎಂದರು.

  ದಿ.28 ರಂದು ನಡೆಯುವ ಮತದಾನಕ್ಕೆ ಮತದಾರರು ಕಡ್ಡಾಯವಾಗಿ ವೋಟರ್ ಐ.ಡಿ, ಆಧಾರ ಕಾರ್ಡ, ಡ್ರೈವಿಂಗ್ ಲೈಸನ್ಸ್, ಪ್ಯಾನ ಕಾರ್ಡ, ಬ್ಯಾಂಕ್ ಪಾಸಬುಕ್ ಸೇರಿದಂತೆ ಭಾವಚಿತ್ರ ಸಹಿತ ಗುರುತಿನ ಕಾರ್ಡ ತರಬೇಕು. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 4 ಗಂಟೆವರೆಗೆ ಮತದಾನ ಸಮಯ ನಿಗದಿಗೊಳಿಸಿದ್ದೇವೆ ಎಂದರು.

   ಸಂಘದ ವ್ಯವಸ್ಥಾಪಕ ರವೀಂದ್ರ ಪಾಟೀಲ, ರೆಸಿಡೆಂಟ್ ಇಂಜನೀಯರ್ ನೇಮಿನಾಥ ಖೇಮಲಾಪೂರೆ, ವ್ಯವಸ್ಥಾಪಕ ದುರದುಂಡಿ ನಾಯಿಕ, ಬಸವರಾಜ ವಾಜಂತ್ರಿ ಇತರರಿದ್ದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept