ಹುಕ್ಕೇರಿ : ಜಿಲ್ಲೆಯ ಜನರ ಗಮನ ಸೆಳೆದಿರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ದಿ.28 ರಂದು ಜರುಗಲಿದೆ. ಹೊಂದಾಣಿಕೆ ರಾಜಕಾರಣದಿಂದ ಹೊರ ಬಂದಿರುವ ಮುಖಂಡರು ಇದೀಗ ಜನರ ಬಳಿ ಮತಯಾಚನೆಗೆ ತೆರಳುವಂತಾಗಿದೆ.
ಸೋಮವಾರದಂದು ನಾಮಪತ್ರ ವಾಪಸ್ಸು ಪಡೆಯುವ ಪ್ರಕ್ರಿಯೆ ನಡೆದು ಚುನಾವಣಾ ಕಣದ 15ಸ್ಥಾನಗಳಿಗೆ 32ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ನಾಮಪತ್ರ ಸಲ್ಲಿಸಿದ್ದ 115 ಅಭ್ಯರ್ಥಿಗಳಲ್ಲಿ 83 ಜನ ನಾಮಪತ್ರ ವಾಪಸ್ಸು ಪಡೆದರು.
ಸಾಮಾನ್ಯ ಕ್ಷೇತ್ರದ 9 ಸ್ಥಾನಗಳಿಗೆ 20 ಅಭ್ಯರ್ಥಿಗಳು, ಮಹಿಳಾ ಕ್ಷೇತ್ರದ 2ಸ್ಥಾನಗಳಿಗೆ 4, ಹಿಂದುಳಿದ “ಅ” ಕ್ಷೇತ್ರದ 1 ಸ್ಥಾನಕ್ಕೆ ಇಬ್ಬರು, ಹಿಂದುಳಿದ “ಬ” ವರ್ಗದ 1 ಸ್ಥಾನಕ್ಕೆ ಇಬ್ಬರು, ಪರಿಶಿಷ್ಟ ಜಾತಿ ಒಂದು ಸ್ಥಾನಕ್ಕೆ ಇಬ್ಬರು, ಪರಿಶಿಷ್ಟ ಪಂಗಡದ ಒಂದು ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದಾರೆ.
ಈ ಚುನಾವಣೆ ಜಾರಕಿಹೊಳಿ, ಜೊಲ್ಲೆ ಮತ್ತು ಕತ್ತಿ, ಎ.ಬಿ.ಪಾಟೀಲ ಅವರ ಬಣದ ನಡುವೆ ಪ್ರತಿಷ್ಠೆಗೆ ಕಾರಣವಾಗಿದೆ.ಈಗಾಗಲೇ ಹಗಲಿರುಳು ಎರಡು ಬಣದ ನಾಯಕರು ಆರೋಪ, ಪ್ರತ್ಯಾರೋಪದಿಂದ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಮಾಜಿ ಸಂಸದ ರಮೇಶ ಕತ್ತಿ, ಶಾಸಕ ನಿಖಿಲ ಕತ್ತಿ , ಮಾಜಿ ಸಚಿವ ಎ.ಬಿ.ಪಾಟೀಲ ಹಾಗೂ ಜಾರಕಿಹೊಳಿ, ಜೊಲ್ಲೆ ಅವರ ರಾಜಕೀಯ ಅಸ್ತಿತ್ವಕ್ಕೆ ರಣಕಣವಾಗಿದೆ.





