ಹುಕ್ಕೇರಿ ಹಿರೇಮಠದ ಗುರುಕುಲ ವಿದ್ಯಾರ್ಥಿ ಪರಿಷತ್‌ನ 5 ನೇ ವಾರ್ಷಿಕೋತ್ಸವ ಸಮಾರಂಭವನ್ನು ರಮೇಶ ಕತ್ತಿ ಉದ್ಘಾಟಿಸಿದರು.ಜಗದ್ಗುರು ಡಾ. ಜಗದ್ಗುರು ಡಾ.ರೇಣುಕ ವೀರಸೋಮೇಶ್ವರ ಶಿವಾಚಾರ್ಯರು, ವೀರಭದ್ರ ಶಿವಾಚಾರ್ಯರು, ಚಂದ್ರಶೇಖರ ಶಿವಾಚಾರ್ಯರು, ಅಣ್ಣಾಸಾಹೇಬ ಜೊಲ್ಲೆ ಇತರರಿದ್ದರು.
ಹುಕ್ಕೇರಿ: ವೀರಶೈವ ಲಿಂಗಾಯತ ಧರ್ಮ ಉಳಿಯಲು ಗುರು-ವಿರಕ್ತರು ಒಂದಾಗಿ ಶ್ರಮಿಸಬೇಕು. ಇಲ್ಲದಿದ್ದರೆ ಲಿಂಗಾಯತ ಧರ್ಮ ಒಡೆದು ಚೂರು ಚೂರಾಗುತ್ತದೆ ಅದಕ್ಕಾಗಿ ಜಗದ್ಗುರುಗಳ ನೇತೃತ್ವದಲ್ಲಿ ಈ ಕಾರ್ಯ ಆಗಬೇಕೆಂದು ಡಿಸಿಸಿ ಬ್ಯಾಂಕ ನಿರ್ದೇಶಕ, ಮಾಜಿ ಸಂಸದ ರಮೇಶ ಕತ್ತಿ ಪ್ರಾರ್ಥಿಸಿದರು.
ಗುರುವಾರದಂದು ಸ್ಥಳೀಯ ವಿವೇಕಾನಂದ ಸಭಾ ಭವನದಲ್ಲಿ ನಡೆದ ಹುಕ್ಕೇರಿ ಹಿರೇಮಠದ ಗುರುಕುಲ ವಿದ್ಯಾರ್ಥಿ ಪರಿಷತ್‌ನ 5 ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 1972ರಲ್ಲಿ ರಂಭಾಪುರಿ ಪೀಠದ ಆಗಿನ ಜಗದ್ಗುರುಗಳಿಂದ ನಾನು ಲಿಂಗದೀಕ್ಷೆ ಪಡೆದುಕೊಂಡ ಬಳಿಕ ವೀರಶೈವ ಲಿಂಗಾಯತ ಧರ್ಮದ ಮಹತ್ವ ಗೊತ್ತಾಯಿತು. ವೀರಶೈವ ಲಿಂಗಾಯತ ಧರ್ಮದಲ್ಲಿ ಒಡಕು ಮೂಡಿಸಿ ನಮ್ಮನ್ನು ಅಲ್ಪಸಂಖ್ಯಾತರಾಗಿ ಬಿಂಬಿಸುವ ಹುನ್ನಾರ ನಡೆದಿದೆ.ಇನ್ನಾದರೂ ನಾವು ಎಚ್ಚೆತ್ತುಕೊಂಡು ಎಲ್ಲ ಒಳ ಪಂಗಡದವರು ಒಂದಾಗಿ ಒಟ್ಟಾಗಿ ನಮ್ಮ ಧರ್ಮ ಉಳಿಸಿಕೊಳ್ಳೋಣ ಎಂದರು.
ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಮಾತನಾಡಿ ಮಹಿಳೆಯರಿಗೆ ಪ್ರಪ್ರಥಮ ಬಾರಿಗೆ ರುದ್ರ ಪಠಣ ಕಲಿಸಿದ ಗರಿಮೆ ಹುಕ್ಕೇರಿ ಹಿರೇಮಠಕ್ಕೆ ಸಲ್ಲುತ್ತದೆ. ವೀರಶೈವ ಲಿಂಗಾಯತ ಧರ್ಮದ ಜಗಳದಿಂದ ವಿಧಾನಸಭೆಯಲ್ಲಿ ಲಿಂಗಾಯತ ಶಾಸಕರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಇದೇ ರೀತಿ ಮುಂದುವರೆದರೆ ವೀರಶೈವ ಲಿಂಗಾಯತ ಶಾಸಕರ ಸಂಖ್ಯೆ ಬೆರಳೆಣಿಕೆಯಷ್ಟಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ರಂಭಾಪುರಿ ಪೀಠದ ಜಗದ್ಗುರು ಡಾ.ರೇಣುಕ ವೀರಸೋಮೇಶ್ವರ ಶಿವಾಚಾರ್ಯರು ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡುತ್ತಾ 12 ನೇ ಶತಮಾನಕ್ಕಿಂತ ಮುಂಚೆ ನಮ್ಮ ಭರತ ಖಂಡದಲ್ಲಿ ಇದ್ದ ಧರ್ಮ ಯಾವುದು ಎಂಬ ಸಂಗತಿಯನ್ನು ಯಾರು ಚರ್ಚಿಸುವುದಿಲ್ಲ. 12 ನೇ ಶತಮಾನದಲ್ಲಿ ವೀರಶೈವ ಲಿಂಗಾಯತ ಧರ್ಮ ಸ್ವೀಕರಿಸಿ ಅದನ್ನು ಬೆಳೆಸಿದ ಬಸವಾದಿ ಶಿವಶರಣರ ವಿಚಾರ ಹೆಚ್ಚು ಪ್ರಚಲಿತವಾಗುತ್ತಿದೆ. 1904ರಲ್ಲಿ ಹಾನಗಲ್ ಕುಮಾರ ಮಹಾಸ್ವಾಮಿಗಳು ಸ್ಥಾಪಿಸಿದ ವೀರಶೈವ ಮಹಾಸಭಾದ ಮೊದಲ ಅಧಿವೇಶನದಲ್ಲಿ ಗುರ-ವಿರಕ್ತರು ಸಮಾಜದ ಎರಡು ಕಣ್ಣುಗಳಿದ್ದಂತೆ ಇವರೀರ್ವರು ಒಂದಾಗಿ ವೀರಶೈವ ಲಿಂಗಾಯತ ಧರ್ಮವನ್ನು ಉಳಿಸಿ ಬೆಳೆಸಬೇಕೆಂದು ಹೇಳಿರುವರು ಎಂದರು.


ಕಟಕೋಳ-ಎಂ.ಚಂದರಗಿಯ ತಪೋರತ್ನ ವೀರಭದ್ರ ಶಿವಯೋಗಿ ಶಿವಾಚಾರ್ಯರು, ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು, ಕಬ್ಬೂರ, ಕೊಣ್ಣೂರ, ಪಾಶ್ಚಾಪೂರ ಶ್ರೀಗಳು, ಮುಜರಾಯಿ ಇಲಾಖೆ ನಿರ್ದೇಶಕ ಡಾ. ಮಹಾಂತೇಶ ಆರಾದ್ರಿಮಠ, ಡಿಸಿಸಿ ಬ್ಯಾಂಕ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಉಪಾಧ್ಯಕ್ಷ ಅಜಿತ ಮುನ್ನೋಳಿ, ಮುಖಂಡರಾದ ಮಹೇಶ ಭಾತೆ, ಶೀತಲ ಬ್ಯಾಳಿ, ಅಶೋಕ ಪಾಟೀಲ, ಪ್ರಶಾಂತ ರವದಿ, ಸುರೇಶ ಜಿನರಾಳಿ, ಶ್ರೀಶೈಲ ಮಠಪತಿ, ಉದಯ ಬ್ಯಾಳಿ ಮತ್ತಿತರರಿದ್ದರು. ಚಂದ್ರಶೇಖರ ಶಿವಾಚಾರ್ಯರು ಸ್ವಾಗತಿಸಿದರು. ನಿಶಾಂತ ಗುರುಗಳು ನಿರೂಪಿಸಿದರು.






